ಮುಂಡರಗಿ: ಮನುಷ್ಯನ ಬದುಕಿಗೆ ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ಬೇಕು. ಸಾಹಿತ್ಯ ಮನುಷ್ಯನಲ್ಲಿ ಕ್ರಿಯಾಶೀಲತೆ ತರುತ್ತದೆ ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಶರಣ ಚಿಂತನ ಮಾಲೆ 34 ಹಾಗೂ ಡಾ. ಸಂಗಯ್ಯ ಶಿರೂರಮಠ ಅವರ ಭಾವಬಿಂಬ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಮ್ಮ ಶ್ರೀಮಠದಿಂದ 270ಕ್ಕೂ ಹೆಚ್ಚು ಗ್ರಂಥಗಳು ಪ್ರಕಟವಾಗಿದ್ದು, ಅವುಗಳ ಡಿಜಿಟಲೀಕರಣ ಮಾಡಲು ಸಂಗಯ್ಯ ಶಿರೂರಮಠ ಮುಂದೆ ಬಂದಿರುವುದು ಸಂತಸ‌ ತಂದಿದೆ ಎಂದರು.

ಭಾವಬಿಂಬ ಕೃತಿ ಲೋಕಾರ್ಪಣೆ ಮಾಡಿದ ವಿಶ್ರಾಂತ ಪ್ರಾ. ಎಸ್.ಬಿ. ಕರಿಭರಮಗೌಡರ ಮಾತನಾಡಿ, ವಾಣಿಜ್ಯ ವಿದ್ಯಾರ್ಥಿಯಾದ ಸಂಗಯ್ಯ ಶಿರೂರುಮಠ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಸಂತಸ ತಂದಿದೆ. ಮುಂಬೈಯಲ್ಲಿ ವಾಸವಾಗಿದ್ದರೂ ಮುಂಡರಗಿಯಲ್ಲಿ ತಮ್ಮ ಪುಸ್ತಕ ಬಿಡುಗಡೆ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆ ಎಂದರು.

ಹೊಳೆ ಆಲೂರಿನ ವಿಶ್ರಾಂತ ಉಪನ್ಯಾಸಕ ಪ್ರೊ. ಎನ್.ಎಸ್. ಹುಣಸಿಕಟ್ಟಿ ಭಾವಬಿಂಬ ಕೃತಿಯ ಕುರಿತು ಮಾತನಾಡಿದರು. ಡಾ. ಸಂಗಯ್ಯ ಶಿರೂರುಮಠ ಶರಣ ಅಲ್ಲಮಪ್ರಭು ಹಾಗೂ ಸಮಗ್ರ ವಚನಗಳ ಸಂರಕ್ಷಣೆಯ ಕುರಿತು ಉಪನ್ಯಾಸ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಭವನದ ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಛಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮನ್ವಯ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು.


ಕಾರ್ಯಕ್ರಮದಲ್ಲಿ ಡಾ. ಬಿ.ಜಿ. ಜವಳಿ, ಆರ್.ಕೆ. ರಾಯನಗೌಡ್ರ, ಎನ್.ಎಸ್. ಅಲಿಪುರ, ಶಂಬುಲಿಂಗ ಚಿಗರಿ, ಎಂ.ಎಲ್. ಪೊಲೀಸಪಾಟೀಲ್, ಯುವರಾಜ್ ಮುಂಡರಗಿ, ಸಂತೋಷ್ ಅಂಗಡಿ, ಮಹೇಶ ಮೇಟಿ, ಪಾರ್ವತಿ ಶಿರೂರಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರೇಖಾ ಹಾಗೂ ಸರೋಜಾ ಹಿರೇಮಠ ಪ್ರಾರ್ಥನೆ ಮಾಡಿದರು. ಈರಮ್ಮ ಕುಂದಗೋಳ ಹಾಗೂ ಆರ್.ವೈ. ಪಾಟೀಲ ಕುವೆಂಪು ಹಾಗೂ ಜಿ.ಎಸ್. ಶಿವರುದ್ರಪ್ಪ ಅವರ ರಚನೆಯ ಗೀತೆಗಳನ್ನು ಹಾಡಿದರು. ಮಂಜುನಾಥ ಮುಧೋಳ ಸ್ವಾಗತಿಸಿದರು. ವೀಣಾ ಪಾಟೀಲ ನಿರೂಪಿಸಿದರು.