ಅಂತರಂಗದ ಭಾವನೆಗಳಿಗೆ ಅಕ್ಷರ ರೂಪ ನೀಡುವುದೇ ಸಾಹಿತ್ಯವಾಗಿದೆ ಎಂದು ಹಿರಿಯ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ಅಭಿಪ್ರಾಯಪಟ್ಟರು.

ಬಳ್ಳಾರಿ: ಅಂತರಂಗದ ಭಾವನೆಗಳಿಗೆ ಅಕ್ಷರ ರೂಪ ನೀಡುವುದೇ ಸಾಹಿತ್ಯವಾಗಿದೆ ಎಂದು ಹಿರಿಯ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಾಮೀಣ ಘಟಕ ಅಲ್ಲಿಪುರದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪದವಿಪೂರ್ವ ವಸತಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪಂಡಿತ ಟಿ.ಎಂ. ಬಸವರಾಜ ಶಾಸ್ತ್ರಿಗಳ ದತ್ತಿ, ಕಪ್ಪಗಲ್ಲು ನಬೀಸಾಬ್ ಮತ್ತು ಹೊನ್ನೂರಮ್ಮ ದತ್ತಿ, ಗುರ್ರಂ ಸಾಕಮ್ಮ ರಾಮಯ್ಯ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯವೆಂದರೆ ಕೇವಲ ಪದಗಳ ಜೋಡಣೆಯಲ್ಲ. ಅದು ಹೃದಯದ ಮಾತು. ಅದು ಬದುಕಿನ ಅನುಭವಗಳ ಪ್ರತಿಬಿಂಬ. ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಮೂಡಿದ ಭಾವನೆ, ಬರಹಗಾರನ ಕಲಮಿನ ಮೂಲಕ ಅಕ್ಷರಗಳಾಗಿ ಹೊರಬಂದಾಗ ಅದು ಕೇವಲ ಅವನದ್ದಾಗಿ ಉಳಿಯುವುದಿಲ್ಲ; ಓದುಗನ ಮನಸ್ಸಿಗೂ ತಲುಪಿ ಅವನದೇ ಅನುಭವವಾಗಿ ಪರಿವರ್ತನೆಯಾಗುತ್ತದೆ ಎಂದು ತಿಳಿಸಿದರು.

ವೀರಶೈವ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಭ್ರಮಾರಂಭ ಯಾಟಿ ಅವರು ವಿಶೇಷ ಉಪನ್ಯಾಸ ನೀಡಿದರು.

ಸಾಹಿತ್ಯ ಮನುಷ್ಯನನ್ನು ಕೇವಲ ರಂಜಿಸುವುದಿಲ್ಲ; ಅವನೊಳಗೆ ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಸಮಾಜವನ್ನು ನೋಡುವ ದೃಷ್ಟಿಯನ್ನು ಬದಲಿಸುತ್ತದೆ. ಮತ್ತೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವ ಹೃದಯವನ್ನು ಬೆಳೆಸುತ್ತದೆ. ಆದ್ದರಿಂದ ನಿಜವಾದ ಸಾಹಿತ್ಯ ಮನಸ್ಸನ್ನು ತಟ್ಟಬೇಕು. ಚಿಂತನೆಗೆ ಹಚ್ಚಬೇಕು ಮತ್ತು ಬದುಕನ್ನು ಇನ್ನಷ್ಟು ಮಾನವೀಯವಾಗಿಸಬೇಕು ಎಂದು ಡಾ. ಭ್ರಮರಾಂಭ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗಯ್ಯ ಹಿರೇಮಠ ಮಾತನಾಡಿದರು.ದತ್ತಿ ದಾನಿಗಳಾದ ಕಪ್ಪಗಲ್ಲು ರಸೂಲ್ ಸಾಬ್, ವಕೀಲರಾದ ಮುಸ್ತಫಾ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ಧರಾಮಪ್ಪ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಯು. ನಾಗರಾಜ್ ನಿರ್ವಹಿಸಿದರು. ಬಯಲಾಟ ನಿರ್ದೇಶಕ ಮುದ್ದಟನೂರು ಎಚ್. ತಿಪ್ಪೇಸ್ವಾಮಿ ಅವರನ್ನು ಪರಿಷತ್ತಿನ ವತಿಯಿಂದ ಗೌರವಿಸಲಾಯಿತು.