ಕೆಲವರಿಗೆ ಒಳ್ಳೆಯತನ ಕಂಡರೂ ಆಗದು. ಶುಭ್ರವಾದ ಗೋಡೆಯ ಅಂದಗೆಡಿಸುವ ಮನಸ್ಥಿತಿಯವರೂ ಇರುತ್ತಾರೆ. ಅವರಿಗೆ ಅದರಲ್ಲಿಯೇ ತೃಪ್ತಿ.

ದಾಂಡೇಲಿ: ಸಾಹಿತ್ಯ ಎಂದರೆ ಅದು ಪ್ರೀತಿ, ಪ್ರೇಮಗಳ ಭಾವನೆ ಅಥವಾ ಇನ್ಯಾವುದೋ ಸಂಗತಿಗಳ ಅಕ್ಷರ ಜೋಡಣೆಯಷ್ಟೇ ಅಲ್ಲ. ಅದು ಸಾಮಾಜಿಕ ಜವಾಬ್ದಾರಿಯ ಬದುಕು ಕೂಡ ಎಂದು ಹಿರಿಯ ಸಾಹಿತಿ, ವಿಶ್ರಾಂತ ಪ್ರಾಚಾರ್ಯ ಡಾ. ಆರ್.ಜಿ. ಹೆಗಡೆ ನುಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಾಂಡೇಲಿ ತಾಲೂಕು ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕಾರ್ತಿಕ: ಅನುದಿನ- ಅನುಸ್ಪಂದನ ಸರಣಿ ಕಾರ್ಯಕ್ರಮಗಳ ಸಮಾರೋಪ ಹಾಗೂ ದಾಂಡೇಲಿ ತಾಲೂಕು ಸಾಹಿತ್ಯಾವಲೋಕನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕೆಲವರಿಗೆ ಒಳ್ಳೆಯತನ ಕಂಡರೂ ಆಗದು. ಶುಭ್ರವಾದ ಗೋಡೆಯ ಅಂದಗೆಡಿಸುವ ಮನಸ್ಥಿತಿಯವರೂ ಇರುತ್ತಾರೆ. ಅವರಿಗೆ ಅದರಲ್ಲಿಯೇ ತೃಪ್ತಿ. ಅನೇಕ ಸಾಹಿತ್ಯ ಕೃತಿಗಳಲ್ಲಿಯೂ ಇಂತಹ ಪಾತ್ರಗಳನ್ನು ಕಾಣಬಹುದು. ಸಾಹಿತ್ಯ ಇಂಥ ಮನಸ್ಸುಗಳನ್ನು ದೂರ ಮಾಡುವ, ಒಳ್ಳೆಯತನಗಳನ್ನು ಒಟ್ಟುಗೂಡಿಸುವ ಹಾಗೂ ಎಲ್ಲರನ್ನು ಒಳಗೊಳ್ಳುವ ಕೆಲಸ ಮಾಡಬೇಕು ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಗೀತ ವಿದ್ವಾಂಸ ಕೆ.ಎಲ್. ಜಮಾದಾರ್ ಅವರು, ನಮ್ಮಂತಹ ತೆರೆಮರೆಯ ಒಬ್ಬ ಕಲಾವಿದನನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಮಾಡಿರುವ ವಾಸರೆಯವರಿಗೆ ಹಾಗೂ ಅವರ ತಂಡಕ್ಕೆ ಚಿರಋಣಿಯಾಗಿದ್ದೇನೆ. ಇವರ ನೇತೃತ್ವದ ಸಾಹಿತ್ಯ ಪರಿಷತ್ತು ಜಿಲ್ಲಾದ್ಯಂತ ಎಲ್ಲರನ್ನು ಒಳಗೊಳ್ಳುವ ಕೆಲಸ ಮಾಡಿದೆ. ಅದು ಮುಂದುವರಿಯಬೇಕು ಎಂದರು. ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಆನೆಹೊಸೂರ್ ಅವರು, ಐದು ವರ್ಷಗಳ ಕಾಲ ತಾವು ಕೋಶಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಹಾಗೂ ಅದಕ್ಕೆ ಅವಕಾಶ ನೀಡಿದ ಸಂದರ್ಭವನ್ನು ಸ್ಮರಿಸಿದರು.

ಸಮರೋಪ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಅವರು, ಐದು ವರ್ಷದ ಸಂಘಟನೆ ಹಲವಾರು ರೀತಿಯ ಅನುಭವಗಳನ್ನು ನೀಡಿದೆ. ಖುಷಿಯ ಜತೆಗೆ ಕಷ್ಟಗಳನ್ನು ಎದುರಿಸಿದ್ದೇವೆ. ಸಂಘಟನೆ ಹೊಸ ಆಲೋಚನೆಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ, ಸಾಹಿತ್ಯಾರಾಧಕರಾದ ರೇಷ್ಮಾ ಶೆಟ್ಟಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಪ್ರವೀಣ್ ನಾಯಕ್ ವರದಿ ವಾಚಿಸಿದರು.ಶಿಕ್ಷಕಿ ನಂದಿನಿ ನಾಯ್ಕ ಪ್ರಾರ್ಥಿಸಿದರು. ಜನತಾ ವಿದ್ಯಾಲಯದ ವಿದ್ಯಾರ್ಥಿಗಳು ಕನ್ನಡದ ನೃತ್ಯ ಮಾಡಿದರು. ಎಂ.ಆರ್. ನಾಯಕ, ಹನುಮಂತ ಕಾರ್ಗಿ, ಪ್ರವೀಣ್ ನಾಯಕ, ಬಸವರಾಜ್ ನರಸಪ್ಪನವರ್, ಕಲ್ಪನಾ ಪಾಟೀಲ್, ರಘುವೀರ ಗೌಡಾ, ಅಕ್ಷಯ ಗೋಸಾವಿ ಮುಂತಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಮಂತ ಮದರಿ ಸ್ವಾಗತಿಸಿದರು. ವೆಂಕಮ್ಮ ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು‌. ಗೌರವ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ವಂದಿಸಿದರು. ಆಶಾ ದೇಶಭಂಡಾರಿ ನಿರೂಪಿಸಿದರು. ನರೇಶ್ ನಾಯ್ಕ, ಸುರೇಶ್ ಪಾಲನಕರ, ಸುರೇಶ್ ಕಾಮತ, ಜಲಜಾ ವಾಸರೆ ಮುಂತಾದವರು ಸಹಕರಿಸಿದರು.