ಸಾರಾಂಶ
ಕಾರವಾರ: ಗರ್ಭಗುಡಿ ಪುಸ್ತಕವು ಪ್ರಕಟಿತ ಕತೆಗಳ ಸಂಕಲನವಾಗಿದ್ದು, ವಿಭಿನ್ನ ಕಥಾ ವಸ್ತುಗಳ ಸಂಗ್ರಹವಾಗಿದೆ. ಇತಿಹಾಸ, ಸಂಸಾರಿಕ ಮತ್ತು ವಾಸ್ತವದ ವಿಷಯಗಳ ಕುರಿತಾದ ಕತೆಗಳು ಇಲ್ಲಿವೆ. ಗರ್ಭಗುಡಿ ಇತಿಹಾಸದ ಹಿನ್ನೆಲೆಯಿಂದ ಇಲ್ಲಿವರೆಗಿನ ಕಥಾವಸ್ತು ಹೊಂದಿದ್ದು, ಸಂಬಂಧಗಳ ಕತೆ ಹೇಳುವ ಶಿವಕುಮಾರ್ ಉತ್ತಮ ಭಾವನೆಗಳನ್ನು ಅಕ್ಷರದಲ್ಲಿ ಹಿಡಿದಿಟ್ಟಿದ್ದಾರೆ ಎಂದು ಕೈಗಾ ನಿರ್ದೇಶಕ ವಿನೋದಕುಮಾರ್ ಹೇಳಿದರು.
ಕೈಗಾ ಟೌನ್ ಶಿಪ್ ನಲ್ಲಿ ಸಹ್ಯಾದ್ರಿ ಕನ್ನಡ ಸಂಘ ಆಯೋಜಿಸಿದ್ದ ಶಿವಕುಮಾರ ಅವರ ಗರ್ಭಗುಡಿ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.ಪುಸ್ತಕ ಅವಲೋಕನ ಮಾಡಿದ ಡಾ.ವೆಂಕಟೇಶ್, ಸಾಹಿತ್ಯ ಮತ್ತು ಜನಪದ ಎರಡೂ ಒಂದಕ್ಕೊಂದು ಪೂರಕವಾದ ವಿಷಯಗಳು. ಜನಪದ ಹಿನ್ನೆಲೆಯ ಸಾಹಿತ್ಯ ಆಳವಾದ ಪ್ರಭಾವ ಬೀರಬಲ್ಲದು. ಗರ್ಭಗುಡಿ ಅಂತಹ ಗುಣಲಕ್ಷಣಗಳನ್ನು ಹೊಂದಿರುವ ಕಥಾ ಸಂಕಲನ, ವಿಭಿನ್ನ ಶೈಲಿಯ ಕಥಾ ಸಂಕಲನ ಇದು. ಇರುವ ಕತೆಗಳೆಲ್ಲ ಭಿನ್ನ ಭಿನ್ನ ವಿಷಯ ವಸ್ತುವಿನ ಮೇಲೆ ರಚಿತವಾಗಿದ್ದು ಆಕರ್ಷಕವಾಗಿವೆ. ಪ್ರತಿಯೊಂದು ಕತೆಗಳೂ ಅಯಾ ಕಾಲ ಘಟ್ಟದ ಅನುಭವ ಪ್ರೇರಿತ ಎನ್ನಿಸುವಂತೆ ಕತೆ ಕಟ್ಟಲಾಗಿದೆ ಎಂದು ಬಣ್ಣಿಸಿದರು.
ಸಹ ಕಾರ್ಯದರ್ಶಿ ಸಜ್ಜನ್ ಮತ್ತು ಪ್ರಶಾಂತಯ್ಯ ಮಠ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು. ಎಸ್.ಜೆ.ಟಿ ಸ್ವಾಮಿ ಮತ್ತು ಲೇಖಕ ಜಿ.ಶಿವಕುಮಾರ ಇದ್ದರು.ಸಾಹಿತಿ ಅಂಕಣಗಾರ ಸಂತೋಷಕುಮಾರ ಮೆಹೆಂದಳೆ ಕಾರ್ಯಕ್ರಮ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ಬಿಡುಗಡೆಯ ನಂತರ ಕಥಾ ಸಂಕಲನ ಕುರಿತಾಗಿ ಲೇಖಕರೊಡನೆ ಸಂವಾದ ನಡೆಸಿದರು. ಎಸ್.ಆರ್.ಎನ್. ಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಸಹ್ಯಾದ್ರಿ ಕನ್ನಡ ಸಂಘದ ಅಧ್ಯಕ್ಷ ಜಿತೇಂದ್ರಕುಮಾರ ವಂದಿಸಿದರು.