ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸಾಹಿತ್ಯವು ಹೊಸ ಸಮಾಜ ನಿರ್ಮಾಣಕ್ಕೆ ಮುನ್ನುಡಿಯಾಗಿದ್ದು, ಕವಿಗಳು ತಮ್ಮ ಸುತ್ತ ಮುತ್ತಲಿನ ಸಾಮಾಜಿಕ ಸಮಸ್ಯೆಗಳಿಗೆ ಬೇಗ ಸ್ಪಂದಿಸಿ ಅದನ್ನು ವರ್ಣಿಸುವುದರ ಜೊತೆಗೆ, ಸತ್ಯ ದರ್ಶನ ಮಾಡಿಸುತ್ತಾರೆ. ಎಷ್ಟೋ ಪುಸ್ತಕಗಳು ನೊಂದವರ ಮನಸ್ಸನ್ನು ಪರಿವರ್ತಿಸಿ ಬದುಕಿಸಿವೆ. ಅಂತಹ ಶಕ್ತಿ ಸಾಹಿತ್ಯಕ್ಕಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.ಮದ್ದೂರು ದೊರೆಸ್ವಾಮಿ ಅವರ ಹಂಬಲದ ಹಣತೆ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ರಚನೆ ತುಂಬಾ ಕಷ್ಟಕರವಾದುದು, ಅದನ್ನೆಲ್ಲ ಅರಗಿಸಿಕೊಂಡು, ಕವಿ ಮದ್ದೂರು ದೊರೆಸ್ವಾಮಿ ಅವರು ಸಮಾಜಮುಖಿ ಚಿಂತನೆಗೆ ಒಳಪಡಿಸುವ ಕವನಗಳನ್ನು ರಚಿಸಿ ಇಂದು ಪುಸ್ತಕವಾಗಿ ಬಿಡುಗಡೆ ಮಾಡಿದ್ದಾರೆ. ಅವರ ಕವಿತೆಗಳು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸಾಮರಸ್ಯ ವಿಚಾರಧಾರೆ ಒಳಗೊಂಡ ಒಂದು ಉತ್ತಮ ಕೃತಿಯಾಗಿ ಹೊರಹೊಮ್ಮಲಿ, ಯುವ ಮನಸ್ಸುಗಳು, ಕವಿಗಳು, ಸಾಹಿತ್ಯಾಸಕ್ತರು ಈ ಪುಸ್ತಕವನ್ನು ಕೊಂಡು ಓದಿ ಎಂದರು.
ಮೈಸೂರಿನ ಸಾಹಿತಿ, ಕೃಷ್ಣ ಜನಮನ ಮಾತನಾಡಿ, ಕಾವ್ಯ ಅನುಭವದಿಂದ ಹುಟ್ಟುವುದು, ಕವಿ ಮದ್ದೂರು ದೊರೆಸ್ವಾಮಿ ತನ್ನ ಸಮಕಾಲೀನ ಸಾಮಾಜಿಕ ಸಮಸ್ಯೆಗಳಿಗೆ ಅಕ್ಷರ ರೂಪ ಕೊಟ್ಟು ಕಾವ್ಯವಾಗಿಸಿದ್ದಾರೆ. ಅವರು ಗಾಂಧಿ ಕನ್ನಡಕದ ಮೂಲಕ ಗಾಂಧಿಜೀ ಮತ್ತು ಅಂಬೆಡ್ಕರರ ಭಾರತವನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಇಂದಿನ ಸಮಾಜವನ್ನು ಕಾಡುತ್ತಿರುವ ಜಾತಿ ಶೋಷಣೆ, ಉಳ್ಳವರ ದಬ್ಬಾಳಿಕೆ, ಮೌಢ್ಯತೆ ಹಾಗೂ ಹೆಣ್ಣು ಮಕ್ಕಳ ಮೇಲಿನ ಶೋಷಣೆಗಳನ್ನು ಕವನ ಸಂಕಲನದಲ್ಲಿ ಅನಾವರಣಗೊಳಿಸಿದ್ದಾರೆ. ಕವಿಗೆ ಒಂದು ಸಮಾಜವನ್ನು ಮುರಿದು ಕಟ್ಟುವ, ಪ್ರಜ್ಞೆ ಮತ್ತು ಮನೋಧೈರ್ಯಬೇಕು. ಹಾಗೆಯೇ ತುಳಿತಕ್ಕೆ ಒಳಗಾದವರ ಬಗ್ಗೆ ಸಹಾನುಭೂತಿ ಇರಬೇಕು ಆ ಗುಣ ಮತ್ತು ಕವಿತ್ವ ಶಕ್ತಿ ಮದ್ದೂರು ದೊರೆಸ್ವಾಮಿ ಕವನಗಳಲ್ಲಿ ಹಾಸುಹೊಕ್ಕಾಗಿದೆ ಎಂದರು.ಪೌರ ಕಾರ್ಮಿಕರಿಂದ ಪುಸ್ತಕ ಲೋಕಾರ್ಪಣೆಹಂಬಲದ ಹಣತೆ ಕವನ ಸಂಕಲನವನ್ನು ಸಾಹಿತಿ ಮದ್ದೂರು ದೊರೆಸ್ವಾಮಿ ಅವರು ಪೌರಕಾರ್ಮಿಕರ ಸಂಘದ ಅಧ್ಯಕ್ಷರಿಂದ ಬಿಡುಗಡೆ ಮಾಡಿಸಿದ್ದು ನಿಜಕ್ಕೂ ಸ್ವಾಗತಾರ್ಹ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕಿದೆ ಎಂದು ಇದೆ ವೇಳೆ ಕೃಷ್ಣ ಜನಮನ ಹೇಳಿದರು. ಸಮಾರಂಭದಲ್ಲಿ ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ ಆರ್.ಪಿ.ನರೇಂದ್ರ ನಾಥ್, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ವೀರಭದ್ರಸ್ವಾಮಿ, ಎನ್‌ಜಿಒ ತಾಲೂಕು ಅಧ್ಯಕ್ಷ ಅಲೆಕ್ಸಾಂಡರ್, ಸಾಹಿತ್ಯ ಮಿತ್ರ ಕೂಟದ ನಿಕಟ ಪೂರ್ವ ಅಧ್ಯಕ್ಷ ಪ್ರೊ.ಡಿ.ದೊಡ್ಡಲಿಂಗೇ ಗೌಡ, ಸತೀಶ್, ಬಾಳಗುಣಸೆ ಇನ್ನಿತರರಿದ್ದರು.