ಸಾರಾಂಶ
ಕುಮಟಾ: ಸಾಹಿತ್ಯ ಮನುಷ್ಯನಿಗೆ ತೀರಾ ಅತ್ಯವಶ್ಯಕ. ಎಲ್ಲೆಡೆ ಸಾಹಿತಿ-ಸಾಹಿತ್ಯದ ಒಡನಾಟ ಹೆಚ್ಚಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಪಟ್ಟಣದ ಪುರಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ೪ನೇ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಹಿರಿಯ ಸಾಹಿತಿಗಳ ಜ್ಞಾನದ ಬೆಳಕು ಮುಂದಿನ ಪೀಳಿಗೆಗೆ ಮಾರ್ಗದರ್ಶಿ. ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕು. ಸಾಹಿತ್ಯದ ಅರಿವಿದ್ದರೆ ಮಾತಿನಲ್ಲಿ ಶಬ್ದ ನಿಯಂತ್ರಣ ಸಾಧ್ಯ. ಸಾಹಿತ್ಯ ಉಳಿಸಿ-ಬೆಳೆಸಿ ಎನ್ನುವಾಗ ಸ್ವತಃ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.
ಚುಟುಕು ಬ್ರಹ್ಮ ದಿನಕರ ದೇಸಾಯಿಯವರು ನಮ್ಮ ಹೆಮ್ಮೆ, ಸಾಹಿತ್ಯಕ್ಕಿಂತ ಶಿಕ್ಷಣದ ಬಗೆಗಿನ ಅವರ ಕಾಳಜಿ ಅಪಾರವಾದದ್ದು. ಜಿಲ್ಲೆಯ ಹಲವು ತಾಲೂಕಿನ ಗ್ರಾಮೀಣ ಭಾಗದಲ್ಲಿ ಹತ್ತಾರು ಪ್ರೌಢಶಾಲೆಗಳನ್ನು ಸ್ಥಾಪಿಸಿದ ಮುತ್ಸದ್ಧಿ ಅವರು. ಜಿಲ್ಲೆಯ ಗ್ರಾಮೀಣ ಭಾಗದ ಶೈಕ್ಷಣಿಕ ಪ್ರಗತಿಯಲ್ಲಿ ದಿನಕರ ದೇಸಾಯಿ ಕೊಡುಗೆ ಬೆಲೆ ಕಟ್ಟಲಾಗದ್ದು ಎಂದರು.ಉದ್ಯಮಿ ಸುಬ್ರಾಯ ವಾಳ್ಕೆ, ಕುಮಟಾ ಮುಕುಟ ಸಂಚಿಕೆ ಬಿಡುಗಡೆ ಮಾಡಿ, ಸಮ್ಮೇಳನದ ಯಶಸ್ಸಿಗೆ ಶುಭ ಕೋರಿದರು. ವಿಜಯಲಕ್ಷ್ಮೀ ಹೆಗಡೆ ಅವರ ಗಝಲ್ ನಗರಿಯಲ್ಲಿ ಹೆಜ್ಜೆಗಳ ಗುರುತು ಕೃತಿಯನ್ನು ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜಿ.ವಿ.ನಾಯ್ಕ, ಗಣೇಶ ಜೋಶಿ, ಜನಾರ್ಧನ ನಾಯಕ ಪ್ರಕಾಶ ಮಡಿವಾಳ ಅವರನ್ನು ಸನ್ಮಾನಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಸುಮತಿ ಭಟ್, ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ತಿಗಣೇಶ ಹೆಗಡೆ ಮಾಗೋಡ ಮಾತನಾಡಿದರು.
ವಿಧಾತ್ರಿ ಅಕಾಡೆಮಿ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ ಕೃಷ್ಣ ಮೂರ್ತಿ ಕುಲಕರ್ಣಿ, ಮಹಿಳಾ ಉಪಾಧ್ಯಕ್ಷೆ ಡಾ.ವಂದನಾ ರಮೇಶ, ಶಿವರಾಮ ಹೆಗಡೆ ಇನ್ನಿತರರು ಇದ್ದರು.ಗೋಪಾಲಕೃಷ್ಣ ನಾಯ್ಕ ಪ್ರಾರ್ಥಿಸಿದರು. ರವೀಂದ್ರ ಭಟ್ ಸೂರಿ ಸ್ವಾಗತಿಸಿ ಪರಿಚಯಿಸಿದರು. ಗಣಪತಿ ಅಡಿಗುಂಡಿ ಪ್ರಾಸ್ತಾವಿಕ ಮಾತನಾಡಿದರು. ವಿಜಯಲಕ್ಷ್ಮಿ ಹೆಗಡೆ ಕೃತಿ ಪರಿಚಯಿಸಿದರು. ಗಣೇಶ ಜೋಶಿ ನಿರೂಪಿಸಿದರು. ಉದಯ ಮಡಿವಾಳ ವಂದಿಸಿದರು.
ಬಳಿಕ ಮಕ್ಕಳ ಚುಟುಕು ವಾಚನ, ವಸಂತರಾವ್ ಅಧ್ಯಕ್ಷತೆಯಲ್ಲಿ ನಾಕಂಡಂತೆ ಸರ್ವಾಧ್ಯಕ್ಷರು, ಕಸಾಪ ತಾಲೂಕಾಧ್ಯಕ್ಷ ಪ್ರಮೋದ ನಾಯ್ಕ ಅಧ್ಯಕ್ಷತೆಯಲ್ಲಿ ಚುಟುಕು ಗೋಷ್ಠಿ ಮತ್ತು ವಾಚನ ನಡೆಯಿತು. ಸಮಾರೋಪದಲ್ಲಿ ಕಸಾಪ ಮಾಜಿ ತಾಲೂಕಾಧ್ಯಕ್ಷ ಶ್ರೀಧರ ಗೌಡ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಸಮಾರೋಪ ನುಡಿಗಳನ್ನಾಡಿದರು.