ಮೂಡುಬಿದಿರೆ: ಮಾನವೀಯ ಮೌಲ್ಯಗಳನ್ನು ಜೀವಂತವಾಗಿರಿಸುವ ಶಕ್ತಿ ಸಾಹಿತ್ಯಕ್ಕಿದೆ. ಆದ್ದರಿಂದ ಸಾಹಿತ್ಯದ ಉಳಿವು ಎಂದರೆ ಮನುಷ್ಯತ್ವದ ಉಳಿವು ಎಂದು ಖ್ಯಾತ ಸಾಹಿತಿ, ಬೋಧಕಿ ಹಾಗೂ ಬರಹಗಾರ್ತಿ ಡಾ. ಮಾನಸಾ ಕೀಳಂಬಿ ನುಡಿದರು.ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ಕಾಲೇಜಿನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತ್ಯ: ಇ ಹೊತ್ತಗೆ – ಈ ಹೊತ್ತಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಾಗತಿಕ ಬದಲಾವಣೆಗಳಿಗೆ ಅನುಗುಣವಾಗಿ ಸಾಹಿತ್ಯವೂ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದೆ. ಜನರಲ್ಲಿ ಸಮಯದ ಅಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಹಿತ್ಯ ಓದುವ ಹಾಗೂ ಅಭಿವ್ಯಕ್ತಿಸುವ ವಿಧಾನಗಳಲ್ಲೂ ಬದಲಾವಣೆಗಳಾಗುತ್ತಿವೆ. ಇಂದಿನ ದಿನಗಳಲ್ಲಿ ಸಾಹಿತ್ಯವು ಡಿಜಿಟಲ್ ಸ್ವರೂಪ ಪಡೆದುಕೊಂಡಿದ್ದು, ಇ-ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಹೆಚ್ಚಿನ ಓದುಗರನ್ನು ತಲುಪುತ್ತಿದೆ ಎಂದರು.
ಸಾಹಿತ್ಯದ ವ್ಯಾಪ್ತಿ ಸಾಂಪ್ರದಾಯಿಕ ವಿಷಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕ ವಿಚಾರಗಳು, ಮಕ್ಕಳ ಮಾನಸಿಕ ಆರೋಗ್ಯ, ಲಿಂಗಾಧಾರಿತ ವಿಚಾರಗಳು ಹಾಗೂ ಸಮಕಾಲೀನ ಸಾಮಾಜಿಕ ಬದಲಾವಣೆಗಳು ಕೂಡ ಸಾಹಿತ್ಯಕ್ಕೆ ಪ್ರಮುಖ ವಸ್ತು ವಿಷಯಗಳಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಮಾತನಾಡಿ, ಕಾಲಕ್ಕೆ ತಕ್ಕಂತೆ ಪುಸ್ತಕದ ಸ್ವರೂಪ ಹಾಗೂ ಓದುವ ವಿಧಾನಗಳು ಬದಲಾಗಬಹುದು; ಆದರೆ ಸಾಹಿತ್ಯದ ಮೂಲ ಆಶಯ ಮತ್ತು ಅದರ ಸತ್ವ ಎಂದಿಗೂ ಬದಲಾಗಬಾರದು ಎಂದರು.ಇಂದಿನ ಮತ್ತು ಹಿಂದಿನ ಪೀಳಿಗೆಗಳ ನಡುವೆ ಅಂತರವಿದ್ದರೂ, ಹಿರಿಯರ ಅನುಭವ ಮತ್ತು ಯುವಜನರ ಜ್ಞಾನ-ಚಿಂತನೆಗಳು ಒಂದಾಗುವ ಮೂಲಕ ಹೊಸದನ್ನು ಸೃಷ್ಟಿಸಬಹುದು. ವೇಗದ ಜೀವನಶೈಲಿಯಿಂದ ವಿದ್ಯಾರ್ಥಿಗಳಲ್ಲಿ ತಾಳ್ಮೆಯ ಕೊರತೆ ಕಂಡುಬರುತ್ತಿದ್ದು, ಅವರು ತಾಳ್ಮೆ, ಶಿಸ್ತು ಮತ್ತು ನಿಯಂತ್ರಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಶಿಸ್ತು ಮತ್ತು ನಿಯಂತ್ರಣವನ್ನು ಬೆಳೆಸುವ ಮೂಲಕ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸುತ್ತಿದೆ ಎಂದರು.ಹಿಂದಿ ವಿಭಾಗದ ಉಪನ್ಯಾಸಕ ರಾಮಕೃಷ್ಣ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಡಿ.ವಿ. ಪ್ರಕಾಶ್ ಅತಿಥಿಗಳನ್ನು ಪರಿಚಯಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ವೇದಾವತಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಮಹೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಜಾನ್ಸಿ ಪಿ ಎನ್, ಕಲಾ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ಶೆಟ್ಟಿ ಇದ್ದರು.