ನರಸಿಂಹರಾಜಪುರಇಂದು ಮಕ್ಕಳಿಗೆ ಗೊತ್ತಾಗದಂತೆ ಕೆರಳಿಸುವ ಸಾಹಿತ್ಯ ಓದುತ್ತಿದ್ದಾರೆ. ನಮಗೆ ಬೇಕಾಗಿರುವುದು ಕೆರಳಿಸುವ ಸಾಹಿತ್ಯ ಅಲ್ಲ. ಅರಳಿಸುವ ಸಾಹಿತ್ಯ ಎಂದು ಹೊಸ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಶ್ರೀಪತಿ ಹಳಗುಂದ ಅಭಿಮತ ವ್ಯಕ್ತಪಡಿಸಿದರು.

10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ । ಯಡಗೆರೆ ಎಸ್ ಗೋಪಾಲ್ ಗೆ ಸಾಹಿತ್ಯ ಸಿರಿ ಪ್ರಶಸ್ತಿ । 11 ಜನರಿಗೆ ಕನ್ನಡ ಸಿರಿ ಪ್ರಶಸ್ತಿ

ಯಡಗೆರೆ ಮಂಜುನಾಥ್

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಇಂದು ಮಕ್ಕಳಿಗೆ ಗೊತ್ತಾಗದಂತೆ ಕೆರಳಿಸುವ ಸಾಹಿತ್ಯ ಓದುತ್ತಿದ್ದಾರೆ. ನಮಗೆ ಬೇಕಾಗಿರುವುದು ಕೆರಳಿಸುವ ಸಾಹಿತ್ಯ ಅಲ್ಲ. ಅರಳಿಸುವ ಸಾಹಿತ್ಯ ಎಂದು ಹೊಸ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಶ್ರೀಪತಿ ಹಳಗುಂದ ಅಭಿಮತ ವ್ಯಕ್ತಪಡಿಸಿದರು.

ಭಾನುವಾರ ತಾಲೂಕಿನ ಬೆಳ್ಳೂರು ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ನಡೆದ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿ ಸಾಹಿತಿಗೆ ಸಾವು ಬರಬಹುದು. ಆದರೆ, ಸಾಹಿತ್ಯಕ್ಕೆ ಎಂದಿಗೂ ಸಾವಿಲ್ಲ. ವಂದೇ ಮಾತರಂ ಗೀತೆ ಬರೆದು 90 ವರ್ಷ ಆಗಿದ್ದರೂ ಈಗಲೂ ಆ ಹಾಡು ಜೀವಂತವಾಗಿದೆ ಎಂದರು. ಹಾಗಾಗಿ ಮಕ್ಕಳಿಗೆ ಉತ್ತಮ ಸಾಹಿತ್ಯ ಸಿಗಬೇಕಿದೆ.

ಮಲೆನಾಡಿನ ಅನೇಕ ಆಡು ಭಾಷೆಗಳು ಮರೆಯಾಗಿ, ಸಂಸ್ಕೃತಿ, ಸಂಸ್ಕಾರ ಕಣ್ಮರೆಯಾಗುತ್ತಿದೆ. ಅನೇಕ ಶಕ್ತಿಗಳು ಕನ್ನಡ ಭಾಷೆಯಲ್ಲಿ ಇಲ್ಲವಾಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕನ್ನಡ ಬಿಟ್ಟು ಇಂಗ್ಲೀಷ್ ಮಾತನಾಡುವುದು ದೊಡ್ಡಸ್ತಿಕೆ. ಹೆಮ್ಮೆ ಎಂದು ಅನೇಕ ಕನ್ನಡಿಗರು ಭಾವಿಸುತ್ತಾರೆ. ಹಿಂದೆ ಅಮ್ಮಂದಿರ ಬಾಯಲ್ಲಿ ಬರುತ್ತಿದ್ದ ಜೋಗುಳ, ಜಾನಪದ ಹಾಡುಗಳು ಈಗ ಮರೆಯಾಗಿ ತಾಯಿ-ಮಗುವಿನ ಕೈಯಲ್ಲಿ ಮೊಬೈಲ್ ಬಂದಿದೆ. ಮಕ್ಕಳಿಗೆ ಸಂಸ್ಕಾರ ಕಲಿಸಲು ಇಂಗ್ಲಿಷ್ ಬೇಡ ಎಂದರು.

ಸಮ್ಮೇಳಾಧ್ಯಕ್ಷ ಬೆಮ್ಮನೆ ದಯಾನಂದ್ ಮಾತನಾಡಿ, ಸಾಹಿತ್ಯ ಪರಿಷತ್ ಗೆ ತನ್ನದೇ ಆದ ಚೌಕಟ್ಟಿದೆ. ಸಮ್ಮೇಳನಾಧ್ಯಕ್ಷ ರೆಂದರೆ ಕೇವಲ ಉತ್ಸವ ಮೂರ್ತಿ ಅಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಸರ್ಕಾರ ಜಾರಿಗೆ ತರಬೇಕು. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಸಮ್ಮೇಳನದಲ್ಲಿ ಅನೇಕ ನಿರ್ಣಯ ತೆಗೆದುಕೊಳ್ಳುತ್ತೇವೆ. ಅವೆಲ್ಲವನ್ನು ಸರ್ಕಾರ ಜಾರಿಗೆ ತರುವ ಬದ್ಧತೆ ತೋರಬೇಕು. ಇಲ್ಲದಿದ್ದರೆ ಸಾಹಿತ್ಯ ಸಮ್ಮೇಳನ ಕೇವಲ ಜಾತ್ರೆ, ಉತ್ಸವವಾಗಲಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಕನ್ನಡಿಗರನ್ನು ಒಗ್ಗೂಡಿಸುತ್ತದೆ. ಸಮ್ಮೇಳನಕ್ಕೆ ಜಾತಿ, ಧರ್ಮ, ಪಕ್ಷ ಬೇಧವಿಲ್ಲ. ಸ್ವಾಗತ ಸಮಿತಿ, ಉಪ ಸಮಿತಿ ದಾನಿಗಳ ನೆರವಿನಿಂದ ಬೆಳ್ಳೂರಿನ 10 ನೇ ಕನ್ನಡ ಸಮ್ಮೇಳನ ಯಶಸ್ವಿಯಾಗಿ ಜಿಲ್ಲಾ ಸಮ್ಮೇಳನದಂತೆ ನಡೆದಿದೆ. ಸಹಕಾರ ನೀಡಿದ ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು.

ಸಭೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಆರ್. ವೆಂಕಟರಮಣಯ್ಯ, ಕಾರ್ಯಾಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್, ಸಾಹಿತ್ಯ ಸಿರಿ ಪ್ರಶಸ್ತಿ ವಿಜೇತ ಗೋಪಾಲ್ ಎಸ್. ಯಡಗೆರೆ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ, ಅನಂತಪದ್ಮನಾಭ, ಕಸಾಪ ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್, ವಿವಿಧ ಸಮಿತಿ ಪದಾಧಿಕಾರಿಗಳಾದ ಎನ್.ಪಿ. ರಮೇಶ್, ಎಚ್.ಇ.ದಿವಾಕರ, ಎನ್.ಪಿ.ರವಿ, ಎಚ್.ಇ.ಮಹೇಶ್, ಸಿದ್ದಪ್ಪಗೌಡ, ವೆಂಕಟರಮಣ, ಧ.ಗ್ರಾ.ಯೋಜನೆ ಕೊಪ್ಪ ತಾಲೂಕು ಯೋಜನಾಧಿಕಾರಿ ರಾಜೇಶ್, ವಕೀಲ ಇ.ಸಿ.ಜೋಯಿ,ನಾಟೀ ವೈದ್ಯ ಈಶ್ವರ ನಾಯಕ್, ಸಮಾಜ ಸೇವಕಿ ಜುಬೇದ, ಕನ್ನಡ ಕಟ್ಟಾಳು ಪಿ.ಸಿ. ಮ್ಯಾಥ್ಯೂ, ರಕ್ಷಣಾ ವೇದಿಕೆ ಪ್ರೇಮ ಶ್ರೀನಿವಾಸ್ ಹಾಗೂ ಕನ್ನಡ ಸಿರಿ ಪ್ರಶಸ್ತಿ ವಿಜೇತರು ಇದ್ದರು.

-- ಬಾಕ್ಸ್ --

ವಿವಿಧ ಪ್ರಶಸ್ತಿ ಪ್ರದಾನ:

ಕನ್ನಡ ಪ್ರಭ ಶಿವಮೊಗ್ಗ ಜಿಲ್ಲಾ ವಿಶೇಷ ವರದಿಗಾರ ಹಾಗೂ ಸಾಹಿತಿ ಗೋಪಾಲ್ ಎಸ್. ಯಡಗೆರೆ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಸಮ್ಮೇಳನಾಧ್ಯಕ್ಷ ಬೆಮ್ಮನೆ ದಯಾನಂದ್ ಹಾಗೂ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಗೌರವಿಸಿದರು. ಕನ್ನಡ ಸಿರಿ ಪ್ರಶಸ್ತಿ: ತಾಲೂಕಿನ 11 ಜನರಿಗೆ ಕನ್ನಡ ಭಾಷೆ ಸಾಧನೆಗಾಗಿ ಕನ್ನಡ ಸಿರಿ ಪ್ರಶಸ್ತಿ ನೀಡಲಾಯಿತು. ಹೊಡೆಯಾಲದ ನಾಟೀ ವೈದ್ಯ ಈಶ್ವರ ನಾಯಕ್, ಆರೋಗ್ಯ ಇಲಾಖೆಯ ಲಲಿತಾ, ಬಾಳೆಹೊನ್ನೂರು ಕೃಷ್ಣಭಟ್, ಮೇಲ್ಪಾಲ್ ಶಿಕ್ಷಕ ವಿಶ್ವನಾಥ್, ಟಿ.ವಿ. ನಿರೂಪಕಿ ಬಿ.ಎಚ್.ಕೈಮರದ ನೀತಿ, ಗಾಯಕ ಹಿರೇನಲ್ಲೂರು ಶ್ರೀನಿವಾಸ್, ಕನ್ನಡ ಉಪನ್ಯಾಸಕಿ ನಂದಿನಿ ಆಲಂದೂರು , ಮೂಡ ಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಕನ್ನಡ ಶಿಕ್ಷಕ ಶ್ರೀಕಾಂತ್, ಅರಳಿಕೊಪ್ಪ ಸತೀಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಚಿನ್, ಶೆಟ್ಟಿಕೊಪ್ಪ ಜೋಯಿ ಕನ್ನಡ ಸಿರಿ ಪ್ರಶಸ್ತಿ ಪಡೆದರು.

ಪ್ರೇರಣಾ ಪ್ರಶಸ್ತಿ: ದಿ.ಮಂಜುನಾಥ ಶೆಟ್ಟಿ ಕಣೇಬೈಲು ಪ್ರೇರಣಾ ಪ್ರಶಸ್ತಿಯನ್ನು ಬಾಳೆಹೊನ್ನೂರಿನ ಪದವಿಪೂರ್ವ ಕಾಲೇಜಿನ ಪ್ರಜ್ವಲ್ ,ಎನ್.ಆರ್.ಪುರ ಕಿತ್ತೂರು ರಾಣಿ ವಸತಿ ಶಾಲೆ ವಿದ್ಯಾರ್ಥಿನಿ ದ್ರವ್ಯ,ಬಿ.ಎಚ್.ಕೈಮರದ ಪಾವನಿ ಜೈನ್, ಡಿಸಿಎಂಸಿ ಶಾಲೆಯ ಮಲ್ಲಂದೂರು ಚಿರನ್ ಹಾಗೂ ಶರಧಿಗೆ ನೀಡಲಾಯಿತು.

-- ಬಾಕ್ಸ್--

ಸಮ್ಮೇಳನದ 4 ನಿರ್ಣಯಗಳು

10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 4 ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಅಡಕೆಗೆ ಬಂದ ಹಳದಿ ಎಲೆ ರೋಗ ಹಾಗೂ ಎಲೆ ಚುಕ್ಕಿ ರೋಗಕ್ಕೆ ಸೂಕ್ತ ಔಷಧಿ, ಮಾನವ ಹಾಗೂ ಪ್ರಾಣಿಗಳ ಸಂಘರ್ಷಕ್ಕೆ ಶಾಶ್ವತ ಪರಿಹಾರ, ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ನೋಡಿಕೊಳ್ಳುವುದು, ಗ್ರಾಮೀಣ ಪತ್ರಕರ್ತರಿಗೆ ಸೂಕ್ತ ಭದ್ರತೆ ಹಾಗೂ ಸೌಲಭ್ಯ ಕಲ್ಪಿಸುವುದು.