ಒಂದಡೆ ರಾತ್ರಿಯಾದೊಡನೆ ಕೊರೆವ ಚಳಿಯಲ್ಲಿ ಮಕ್ಕಳನ್ನು ಎದೆಗಪ್ಪಿ ನಿದ್ರಿಸುವ ದುಸ್ಥಿತಿ. ಹಗಲಾದರೆ ಸುಡುವ ಬಿಸಿಲು, ಸ್ನಾನಕ್ಕೂ ನೀರಿಲ್ಲ, ಶೌಚಾಲಯವು ಇಲ್ಲ.

ಅಲೆಮಾರಿ ಕುಟುಂಬಗಳ ಅಮಾನವೀಯ ಬದುಕಿನ ಕಥೆ

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ಒಂದಡೆ ರಾತ್ರಿಯಾದೊಡನೆ ಕೊರೆವ ಚಳಿಯಲ್ಲಿ ಮಕ್ಕಳನ್ನು ಎದೆಗಪ್ಪಿ ನಿದ್ರಿಸುವ ದುಸ್ಥಿತಿ. ಹಗಲಾದರೆ ಸುಡುವ ಬಿಸಿಲು, ಸ್ನಾನಕ್ಕೂ ನೀರಿಲ್ಲ, ಶೌಚಾಲಯವು ಇಲ್ಲ...

ಹೀಗೆ ಅಮಾನವೀಯ ರೀತಿಯಲ್ಲಿ ತಾಲೂಕಿನ ಬಾಳೆಗುಳಿ ಪ್ರದೇಶದಲ್ಲಿ ಅಲೆಮಾರಿ ಕುಟುಂಬಗಳು ಬದುಕು ಸಾಗಿಸುತ್ತಿವೆ.

ಊರಿಂದ ಊರಿಗೆ ತುತ್ತು ಅನ್ನಕ್ಕಾಗಿ ಅಲೆದಾಡುವ ಇವರ ಬದುಕು, ಇಂದಿಗೂ ಶೋಚನೀಯ ಸ್ಥಿತಿಯಲ್ಲಿದೆ. ಟೆಂಟ್ ಹಾಕಿಕೊಂಡು ಬದುಕು ಸಾಗಿಸುತ್ತಿರುವ ಈ ಕುಟುಂಬಗಳು, ಚಿಕ್ಕ ಚಿಕ್ಕ ಮಕ್ಕಳನ್ನು ಮಡಿಲಲ್ಲಿ ಹಿಡಿದು ಚಳಿ, ಮಳೆ, ಬಿಸಿಲನ್ನೆಲ್ಲ ಎದುರಿಸುತ್ತಿವೆ. ಒಂದು ರಾತ್ರಿ ಮಳೆಯಾದರೂ ಇವರ ಮನಸ್ಸಿನಲ್ಲಿ ಭಯದ ನಿದ್ದೆ, ಗುಡಿಸಲೇ ಉಳಿಯುತ್ತಾ? ಎಂಬ ಆತಂಕ.

ಇವರ ಬಳಿ ನೋವುಗಳಿವೆ, ಹಸಿವುಗಳಿವೆ, ಆದರೆ ದಾಖಲೆಗಳಿಲ್ಲ. ಆಧಾರ್ ಇಲ್ಲ, ರೇಷನ್ ಕಾರ್ಡ್ ಇಲ್ಲ, ಕೆಲವರಿಗೆ ತಮ್ಮದೇ ವಿಳಾಸವೂ ಇಲ್ಲ. ಪರಿಣಾಮವಾಗಿ ಸರಕಾರದ ಅನೇಕ ಯೋಜನೆಗಳು ಇವರ ಪಾಲಿಗೆ ಕೇವಲ ಹೆಸರು ಮಾತ್ರ. ವಸತಿ ಯೋಜನೆಗಳು ಕಾಗದದಲ್ಲಿವೆ, ಆದರೆ ಅಲೆಮಾರಿಗಳ ಬದುಕಿನಲ್ಲಿ ಒಂದೂ ಇಟ್ಟಿಗೆಯಿಲ್ಲ.ಸಮೀಕ್ಷೆಯಲ್ಲೇ ಇಲ್ಲದ ಬದುಕು:

ಅಲೆಮಾರಿಗಳಿಗೆ ವಸತಿ ಸೌಲಭ್ಯ ದೊರಕಬೇಕಾದರೆ, ಅಲೆಮಾರಿ ಅಭಿವೃದ್ಧಿ ನಿಗಮದ ಪಟ್ಟಿಯಲ್ಲಿ ಇವರ ಹೆಸರು ಇರಬೇಕು. ಆದರೆ ಪದೇ ಪದೇ ವಾಸಸ್ಥಾನ ಬದಲಾಯಿಸುವ ಈ ಕುಟುಂಬಗಳ ಸಮೀಕ್ಷೆಯೇ ಸರಿಯಾಗಿ ನಡೆದಿಲ್ಲ. ದಾಖಲೆಗಳಲ್ಲಿ ಕಾಣಿಸದ ಈ ಜೀವಗಳು, ಸಮಾಜದ ಕಣ್ಣಿಗೂ ಕಾಣದಂತಾಗಿವೆ. ನಾವಿದ್ದೇವೋ ಇಲ್ಲವೋ? ಎಂಬ ಪ್ರಶ್ನೆ ಇವರ ಕಣ್ಣಲ್ಲಿ ನಿತ್ಯ ಮಿನುಗುತ್ತಿದೆ.ಬಯಲಲ್ಲೇ ಶೌಚ:

ಟೆಂಟ್ ಹಾಕಿ ತಮ್ಮ ಸೂರನ್ನು ಕಟ್ಟಿಕೊಂಡಿರುವ ಇವರು ಚಿಕ್ಕ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಚಳಿ- ಮಳೆ ಬಿಸಿಲಲ್ಲೆ ವಾಸಿಸುತ್ತಾರೆ. ಇನ್ನು ನಿರ್ಜನ ಪ್ರಧೇಶದಲ್ಲಿ ಶೌಚ ಮಾಡುವ ಇವರು, ತಮ್ಮ ಗುಡಿಸಲಿನ ಬಳಿಯೇ ಸಣ್ಣ ಮರೆ ಮಾಡಿಕೊಂಡು ಸ್ನಾನ ಮಾಡುವ ದುಸ್ಥಿತಿ ಇವರದು. ಕುಡಿಯುವ ನೀರಿಗಾಗಿ ಹತ್ತಿರದ ಬಾಳೆಗುಳಿ ಹಳ್ಳವನ್ನು ಇವರು ಅವಲಂಬಿಸಿದ್ದಾರೆ. ವಿದ್ಯುತ್ ಇಲ್ಲದೇ ಇರುವುದರಿಂದ ಮೊಬೈಲ್‌ ಚಾರ್ಜ್‌ ಹಾಕಬೇಕೆಂದರೆ ಎಲ್ಲಾದರೂ ಹತ್ತಿರವಿರುವ ಮನೆಗೆ ತೆರಳಿ ಕಾಡಿ ಬೇಡಿ ಚಾರ್ಜ್‌ ಹಾಕಿಸಿಕೊಳ್ಳುವ ಪರಿಸ್ಥಿತಿ ಇದೆ. ಯೋಜನೆಗಳಿವೆ, ಆದರೆ ಬದುಕಿಲ್ಲ:

ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್, ದೇವರಾಜ ಅರಸು ವಸತಿ ಯೋಜನೆ, ಸಮಾಜ ಕಲ್ಯಾಣ ಇಲಾಖೆ, ಅಲೆಮಾರಿ ಅಭಿವೃದ್ಧಿ ನಿಗಮ ಎಲ್ಲವೂ ಇವೆ. ಆದರೆ ದಾಖಲೆಗಳ ಕೊರತೆಯ ನೆಪದಲ್ಲಿ ಅಲೆಮಾರಿಗಳ ಬದುಕು ಮಾತ್ರ ಕಡೆಗಣಿಸಲ್ಪಡುತ್ತಿದೆ. ಅಧಿಕಾರಿಗಳ ಅಸಹಾಯಕತೆ ಹೇಳಿಕೆಗಳ ನಡುವೆ, ಅಲೆಮಾರಿಗಳ ಬದುಕು ದಿನದಿಂದ ದಿನಕ್ಕೆ ಇನ್ನಷ್ಟು ಕುಸಿಯುತ್ತಿದೆ.

ಮುಂದುವರೆಯುತ್ತಿರುವ ಸಮಾಜದಲ್ಲಿ ಅತ್ಯಂತ ಹೀನ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಇವರ ಬದುಕು ಅಮಾನವೀಯವಾಗಿದೆ. ಮಾನವೀಯತೆಯ ನೆಪದಲ್ಲಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ ಜನಶಕ್ತಿ ವೇದಿಕೆ ತಾಲೂಕಾಧ್ಯಕ್ಷ ನಿತ್ಯಾನಂದ ನಾಯ್ಕ.

ನಾವು ಸೂರಿಗಾಗಿ ಅನೇಕ ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದೇವೆ. ಅಧಿಕಾರಿಗಳು ಬಂದು ಕೇವಲ ಮಾಹಿತಿ ತೆಗೆದುಕೊಂಡು ತೆರಳುತ್ತಿದ್ದಾರೆಯೇ ಹೊರತು. ನಮ್ಮ ಕನಸಿನ ಸೂರು ನನಸಾಗುವ ಪ್ರಯತ್ನ ಆಗಿಲ್ಲ. ಮುಂದೆ ನಮ್ಮ ಮಕ್ಕಳ ಭವಿಷ್ಯ ಏನು ಎಂಬ ಚಿಂತೆ ಇದೆ ಎಂದು ಅಲೆಮಾರಿ ಜನಾಂಗದ ಹುಸೇನಪ್ಪ ಪಡಗೇರಿ ತಿಳಿಸಿದ್ದಾರೆ.