ಭಾರತ ಜಗತ್ತಿನಲ್ಲಿಯೇ ಶ್ರೇಷ್ಟ ಸಂಸ್ಕೃತಿ ಹೊಂದಿರುವ ದೇಶವಾಗಿದೆ

ಗಂಗಾವತಿ: ಅವಿಭಕ್ತ ಕುಟುಂಬದ ಪದ್ಧತಿಯಿಂದ ಭಾರತ ಜಗತ್ತಿನ ಶ್ರೇಷ್ಟ ದೇಶವಾಗಿದೆ. ಆದರೆ ಇತ್ತೀಚೆಗೆ ವಿದೇಶಿ ವ್ಯಾಮೋಹದಿಂದ ಇಂತಹ ಕುಟುಂಬ ಪದ್ಧತಿ ಕಣ್ಮರೆಯಾಗುತ್ತಿದ್ದು, ಹೀಗಾಗಿ ಪ್ರತಿಯೊಬ್ಬರು ಸಂಸ್ಕಾರಯುತ ಜೀವನ ನಡೆಸಿ ಭಾರತದ ಸಂಸ್ಕೃತಿ ಉಳಿಸಬೇಕು.ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಾಬ್ಧಿ ವರ್ಷದಲ್ಲಿ ಕೌಟುಂಬ, ಸ್ವದೇಶ, ಪರಿಸರ, ಸಾಮರಸ್ಯ ಮತ್ತು ನಾಗರಿಕ ಶಿಷ್ಟಾಚಾರ ಪಾಲನೆ ಮಾಡಬೇಕೆಂಬ ಜಾಗೃತಿ ಮೂಡಿಸಲು ಹಿಂದೂ ಸಮ್ಮೇಳನ ನಡೆಸುತ್ತಿದೆ ಎಂದು ಆರ್‌ಎಸ್‌ಎಸ್‌ನ ಅಂಗ ಸಂಸ್ಥೆಯಲ್ಲೊಂದಾಗಿರುವ ಪರ್ಯಾವರಣ ಸಂಘಟನೆಯ ರಾಜ್ಯ ಸಂಯೋಜಕ ಜಯರಾಮ ಬೊಳ್ಳಾಡೆ ಹೇಳಿದರು.

ಗಂಗಾವತಿ ನಗರದ ಉತ್ತರ ಭಾಗದ (13ರಿಂದ 25 ನೇವಾರ್ಡ್ ವ್ಯಾಪ್ತಿಯ)ಲ್ಲಿ ಸಿಬಿಎಸ್ ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಿದ್ದ ಹಿಂದೂ ಸಮ್ಮೇಳ ಉದ್ದೇಶಿಸಿ ಮಾತನಾಡಿದರು.

ಭಾರತ ಜಗತ್ತಿನಲ್ಲಿಯೇ ಶ್ರೇಷ್ಟ ಸಂಸ್ಕೃತಿ ಹೊಂದಿರುವ ದೇಶವಾಗಿದೆ.ಈ ಸಂಸ್ಕೃತಿ ಉಳಿಸುವ ಕೆಲಸ ಹಿಂದೂ ಸಮಾಜ ಮಾಡಬೇಕು. ಕೇವಲ ಸಂಸಾರ ಇದ್ದರೆ ಸಾಲದು ಮನೆಯಲ್ಲಿ ಉತ್ತಮ ಸಂಸ್ಕಾರ ಇರಬೇಕು. ರಾಮಾನುಜಾಚಾರ್ಯರು, ಶಂಕರಾಚಾರ್ಯರು, ಬುದ್ಧ, ಬಸವಣ್ಣ, ಸರ್ವಜ್ಞ, ಅಕ್ಕ ಮಹಾದೇವಿ, ಕನಕದಾಸರು ಸೇರಿದಂತೆ ಸಂತ, ಮಹಾತ್ಮರು ಹುಟ್ಟಿದ ದೇಶ ಭಾರತ. ಈ ಎಲ್ಲ ಮಹನೀಯರು ಶ್ರೇಷ್ಟರಾಗಿರುವುದು ಅವರ ತಾಯಿ ನೀಡಿದ ಸಂಸ್ಕಾರದಿಂದ. ಈ ಎಲ್ಲ ಮಹನೀಯರು ಸನಾತನ ಸಂಸ್ಕೃಯನ್ನು ಸಮಾಜಕ್ಕೆ ಸಮರ್ಪಿಸಿದ್ದಾರೆ. ಇವರೆಲ್ಲರು ಜಾತಿ ಅಳಿಸಿ ಹಾಕಲು ಪ್ರಯತ್ನಿಸಿದ್ದಾರೆ.ಇಂತಹ ಮಹನಿಯರನ್ನು ಸ್ಮರಿಸುವ ಹಿಂದು ಸಮಾಜ ಈಗಲು ಜಾತಿ ಹೆಸರಿನಲ್ಲಿ ಕಿತ್ತಾಡುತ್ತಿರುವುದು ವಿಷಾದನೀಯವಾಗಿದೆ. ಜಗತ್ತಿನಲ್ಲಿ ಎಲ್ಲ ಧಮ,ಮತಗಳಿಗೆ ಸಂಸ್ಥಾಪಕರಿದ್ದಾರೆ.ಆದರೆ ಭಾರತದ ಸನಾತನ ಹಿಂದೂ ಧರ್ಮಕ್ಕೆ ಸಂಸ್ಥಾಪಕರಿಲ್ಲ. ಅದು ತಾನಾಗಿಯೇ ಹುಟ್ಟಿದೆ.ಹೀಗಾಗಿ ಈ ಸನಾತನ ಧರ್ಮಕ್ಕೆ ಸಾವಿಲ್ಲ.ಧರ್ಮ ಎಂದರೆ ಕೇವಲ ಕೊರಳಲ್ಲಿ ಕೇಸರಿ ಶಾಲು ಹಾಕಿಕೊಂಡು ಹಣೆಗೆ ತಿಲಕ ಇಟ್ಟುಕೊಂಡು ಜೈಕಾರ ಹಾಕುವುದಲ್ಲ.ಸುಸಂಕೃತ ಜೀವನ, ಉತ್ತಮ ನಡವಳಿಕೆ ಮತ್ತು ಪರಿಸರ ಕಾಳಜಿ, ಮಿತ ನೀರು ಬಳಕೆ, ಪ್ರಮಾಣಿಕನಾಗಿರುವುದು ಧರ್ಮ ಎಂದರು.

ಸಮ್ಮೇಳನ ಪ್ರಾರಂಭದಲ್ಲಿ ನಗರದ ಭಗೀರಥ ವೃತ್ತದಿಂದ ಭಾರತ ಮಾತೆಯ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ವೇದಿಕೆಯಲ್ಲಿ ಮಕ್ಕಳಿಂದ ನಡೆದ ಭರತ ನಾಟ್ಯ, ಯೋಗ ಪ್ರದರ್ಶನ ಗಮನ ಸೆಳೆಯಿತು. ಪ್ರಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಹೆಬ್ಬಾಳ ಸ್ವಾಮಿಗಳಿಗೆ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳಿಂದ ಪಾದಪೂಜೆ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ತಂದೆ, ತಾಯಿಗಳಿಗೆ ಅವರ ಮಕ್ಕಳಿಂದ ಪಾದಪೂಜೆ ಮಾಡಿಸಲಾಯಿತು.

ಹೆಬ್ಬಾಳ ನಾಗಭೂಷಣ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡ ಗಿರೇಗೌಡ, ವಿರುಪಾಕ್ಷಪ್ಪ ಸಿಂಗನಾಳ, ಎಚ್.ಎಂ. ಸಿದ್ಧರಾಮಯ್ಯಸ್ವಾಮಿ, ಮನೋಹರಗೌಡ ಹೇರೂರು, ಅಕ್ಕಿ ಚಂದ್ರು, ಶರಣೇಗೌಡ ಪಾಟೀಲ್, ಪರಿವಾದ ಪ್ರಮುಖರಾದ ಶ್ರವಣಕುಮಾರ ರಾಯ್ಕರ್, ಅಯ್ಯನಗೌಡ ಹೇರೂರು,ನೀಲಕಂಠ ನಾಗಶೆಟ್ಟಿ, ವಿರೇಶ, ಅಶೋಕ ರಾಯ್ಕರ್, ಡಾ.ಅಮರೇಶ ಪಾಟೀಲ್, ವೆಂಕಟೇಶ ಅಮರಜ್ಯೋತಿ ಇದ್ದರು. ಮಂಜುನಾಥ ಕಟ್ಟಿಮನಿ, ಹುಸೇನಪ್ಪಸ್ವಾಮಿ, ಸಂಗಮೇಶ ಅಯೋಧ್ಯಾ, ವೀರು ಕೊಟಗಿ, ಗಾದೇಪ್ಪ, ದೇವರಾಜ ಗುಳದಳ್ಳಿ, ಶ್ರೀನಿವಾಸ ಧೂಳ, ರವೀಂದ್ರ ಹೂಲಗೇರಿ, ಗುರುರಾಜ ಶೇಟ್, ಸತೀಶ, ನಂದೀಶ ಬಳ್ಳಾರಿ ಮತ್ತಿತರು ಭಾಗವಹಿಸಿದ್ದರು.