ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಮದ್ಯ ವ್ಯಸನಿಗಳು ಸಮಾಜದಲ್ಲಿ ತಾವು ಗಳಿಸಿಕೊಂಡಿರುವ ಉತ್ತಮ ವ್ಯಕ್ತಿತ್ವ, ಸ್ವಾಭಿಮಾನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಎಲ್ಲ ದುಶ್ಚಟಗಳದಿಂದ ಮುಕ್ತರಾಗಿ ನೆಮ್ಮದಿ, ಶಾಂತಿಯಿಂದ ಜೀವನ ನಡೆಸಬೇಕು ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ನಗರದ ಸಿಂಗ್ರಿ ನಂಜಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಇತರೆ ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ 1800ನೇ ಮದ್ಯವರ್ಜನ ಶಿಬಿರದ ಸಾನಿಧ್ಯವಹಿಸಿ ಆಶೀರ್ವಚ ನೀಡಿದರು.ಹಿಂದಿನಿಂದಲೂ ನಮ್ಮ ಧರ್ಮ, ಸಂಸ್ಕಾರ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಸನ್ನಿವೇಶದಲ್ಲಿ ಕೆಲವರು ಮದ್ಯ ವ್ಯಸನಿಗಳಾಗಿ ಧಕ್ಕೆ ತರುವ ಕೆಲಸ ಮಾಡಿಕೊಳ್ಳಬೇಡಿ. ಕುಡಿತದ ಅಮಲಿನಿಂದ ಜೀವನವೇ ದಿಕ್ಕೆಟ್ಟು ಹೋಗಲಿದ್ದು, ವ್ಯಕ್ತಿತ್ವ ಜೊತೆಗೆ ತನ್ನ ಕುಟುಂಬದ ವಾತಾವರಣ ಹಾಗೂ ಗೌರವಕ್ಕೆ ಧಕ್ಕೆ ಬರಲಿದೆ. ಆರ್ಥಿಕ ದುರ್ಬಲತೆಯಿಂದ ನರಳುವಂತಹ ವಾತಾವರಣ ಉಂಟಾಗಲಿದೆ ಎಂದರು.
ಮನಸ್ಸನ್ನು ದುಶ್ಚಟಗಳತ್ತ ಹರಿಯಬಿಟ್ಟು ಕುಡಿತದ ದಾಸರಾಗದೆ ಪಂಚೇಂದ್ರಿಯಗಳನ್ನು ಸ್ಥಿಮಿತದಲ್ಲಿಟ್ಟುಕೊಂಡು ಪುಣ್ಯದ ಕೆಲಸದಲ್ಲಿ ಭಾಗಿಯಾಗಿ. ಪೂಜ್ಯ ವೀರೇಂದ್ರ ಹೆಗ್ಗಡೆ ಸಮಾಜಕ್ಕೆ ಮಾರಕವಾಗಿರುವ ಮದ್ಯಮುಕ್ತ ಶಿಬಿರ ಸೇರಿದಂತೆ ಇಂತಹ ಹಲವಾರು ಸಾಮಾಜಿಕ ಕಳಕಳಿಯುಳ್ಳ ಕೆಲಸಗಳನ್ನು ಮಾಡುತ್ತಾ ಎಲ್ಲರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಶಿಬಿರದಲ್ಲಿ ಪಾಲ್ಗೊಂಡಿರುವ ಶಿಬಿರಾರ್ಥಿಗಳು ಜೀವನ ಪರ್ಯಂತ ಮದ್ಯ ಮುಕ್ತರಾಗಿ ಉತ್ತಮ ಜೀವನ ನಡೆಸುವುದರ ಮೂಲಕ ಸಮಾಜದಲ್ಲಿ ಗೌರವವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಬಿಜೆಪಿ ಮುಖಂಡ ಲೋಕೇಶ್ವರ ಮಾತನಾಡಿ, ಮದ್ಯವ್ಯಸನದಂತಹ ಕೆಟ್ಟ ಅಭ್ಯಾಸ ರಾಕ್ಷಸ ಗುಣಕ್ಕೆ ಸಮಾನ. ಕುಡಿತ ದೇಹ ಹಾಳು ಮಾಡುವುದಲ್ಲದೆ ಕುಟುಂಬ ಮತ್ತು ಸಮಾಜದಿಂದ ದೂರವಿರಬೇಕಾಗುತ್ತದೆ. ಬೆಲೆ ಗೌರವಗಳನ್ನು ಕಳೆದುಕೊಂಡು ಅನಾಥರಾಗಲಿದ್ದೀರಿ. ಇಂತಹ ದುರಭ್ಯಾಸಗಳಿಂದ ದೂರವಿದ್ದು ಉತ್ತಮ ಜೀವನ ಕಟ್ಟಿಕೊಳ್ಳಬೇಕು. ಸರ್ಕಾರದ ಆದಾಯದ ಮೂಲ ಅಬಕಾರಿಯಾಗಿದ್ದು ಸರ್ಕಾರವೇ ಮದ್ಯದಂಗಡಿಗಳಿಗೆ ಪರವಾನಿಗೆ ಕೊಟ್ಟಿದೆ ಎಂದರು.ಗ್ರಾಮಾಂತರ ಪ್ರದೇಶಗಳಲ್ಲಿ ಪರವಾನಿಗೆ ಇಲ್ಲದೆ ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು, ಈ ಬಗ್ಗೆ ಯಾರು ಕ್ರಮಕೈಗೊಳ್ಳುತ್ತಿಲ್ಲ. ಪೂಜ್ಯರು ಮದ್ಯವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಿ ಮದ್ಯವ್ಯಸನಿಗಳಿಗೆ ನವ ಜೀವನವನ್ನು ಕಟ್ಟಿಕೊಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ಮದ್ಯವರ್ಜನ ಶಿಬಿರದಿಂದ ಲಕ್ಷಾಂತರ ಜನರು ಮದ್ಯಪಾನ ಬಿಟ್ಟು ಉತ್ತಮ ಬದುಕು ಕಟ್ಟಿಕೊಂಡಿದ್ದು, ಲಕ್ಷಾಂತರ ಕುಟುಂಬಗಳು ಶಾಂತಿ, ನೆಮ್ಮದಿಯಿಂದ ಜೀವನ ನಡೆಸುತ್ತಿವೆ. ನಮ್ಮ ಸಂಸ್ಥೆ ಕೇವಲ ಸಾಲ ಕೊಡುವ ಸಂಸ್ಥೆ ಅಲ್ಲ. ಹಲವಾರು ಸಾಮಾಜಿಕ ಕಳಕಳಿಯುಳ್ಳ ಯೋಜನೆಗಳನ್ನು ಜಾರಿಗೆ ತಂದು ಎಲ್ಲರ ಅಭ್ಯೂದಯಕ್ಕೆ ಶ್ರಮಿಸುತ್ತಿದೆ ಎಂದರು. ಪ್ರಾದೇಶಿಕ ಕಚೇರಿಯ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ತಿಮ್ಮಯ್ಯನಾಯ್ಕ್ ಮಾತನಾಡಿ, ಏಡ್ಸ್, ಕ್ಯಾನ್ಸರ್, ಕ್ಷಯ ರೋಗಗಳಿಗಿಂತ ಮದ್ಯವ್ಯಪಾನ ಭೀಕರ ಕಾಯಿಲೆಯಾಗಿದೆ. ಮದ್ಯ ವ್ಯಸನಿಗಳನ್ನು ಆಣೆ, ಪ್ರಮಾಣ, ಮದ್ದಿನಿಂದ ಬಿಡಿಸಲಾಗದ್ದನ್ನು ನಾವು ಅವರ ಮನಸ್ಸನ್ನು ಪರಿವರ್ತನೆ ಮಾಡಿ ಅವರಿಗೊಂದು ನವ ಜೀವನ ಕಟ್ಟಿಕೊಡುತ್ತೇವೆ. ಬದುಕಿನ ಚಿತ್ರಣವನ್ನು ಬದಲಿಸುವಂತಹ ಶಿಬಿರ ಇದಾಗಿದ್ದು, ಇದುವರೆಗೂ ೨ ಲಕ್ಷಕ್ಕೂ ಹೆಚ್ಚು ಮದ್ಯವ್ಯಸನಿಗಳನ್ನು ಕುಡಿತದ ಚಟದಿಂದ ಬಿಡಿಸಲಾಗಿದೆ ಎಂದರು.ಡಾ. ವಿವೇಚನ್, ನಗರ ಸಭಾ ಸದಸ್ಯ ಸಂಗಮೇಶ್, ಶಿಬಿರದ ಅಧ್ಯಕ್ಷ ಗಂಗಾಧರ್, ಎಪಿಎಂಸಿ ಮಾಜಿ ಸದಸ್ಯ ಮಧುಸೂದನ್, ಯೋಜನಾಧಿಕಾರಿ ಕೆ. ಉದಯ್, ಸಮನ್ವಯಾಧಿಕಾರಿ ಎಂ.ಡಿ. ಪದ್ಮಾವತಿ, ಸಮಿತಿಯ ಹೇಮಂತ್, ಮಹಾಲಿಂಗಪ್ಪ, ಓಂಕಾರ್, ಶ್ಯಾಮಸುಂದರ್ ಮತ್ತಿತರರಿದ್ದರು.