ಸಾರಾಂಶ
ಧಾರವಾಡ:
ವಾಲ್ಮೀಕಿ ಸಮುದಾಯವು ವೀರ-ಧೀರರು. ಅನೇಕ ಕೋಟೆ, ನಾಡನ್ನು ಆಳಿದ ರಾಜ ವಂಶಜರು. ಆದಿಕವಿ ಮಹರ್ಷಿ ವಾಲ್ಮೀಕಿ ಈ ಸಮುದಾಯಕ್ಕೆ ಆದರ್ಶಪ್ರಾಯರು. ಅವರಂತೆ ಸ್ವಾಭಿಮಾನಿ ಬದುಕು ನಮ್ಮದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಹೇಳಿದರು. ಜಿಲ್ಲಾಡಳಿತ ಮಂಗಳವಾರ ಆಯೋಜಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿದ ಅವರು, ವಾಲ್ಮೀಕಿ ಅವರನ್ನು ನಾವು ಭಾವನಾತ್ಮಕವಾಗಿ ಕಟ್ಟಿಕೊಳ್ಳಬೇಕು. ಅವರ ರಾಮಾಯಣ ಮಹಾಕಾವ್ಯದ ಸಾಧನೆಯು ಇಡೀ ಜನಾಂಗಕ್ಕೆ ಪ್ರೇರಣೆ ಆಗಬೇಕು. ಮಹರ್ಷಿ ವಾಲ್ಮೀಕಿ ಓರ್ವ ಪ್ರಖಾಂಡ ಪಂಡಿತರು. ರಾಮಾಯಣದಲ್ಲಿನ ಶ್ಲೋಕ, ಖಂಡ ವಾಲ್ಮೀಕಿಯವರ ಪಾಂಡಿತ್ಯವನ್ನು ತೋರಿಸಿದ್ದು, ವಿಶ್ವಮಟ್ಟದಲ್ಲಿ ಭಾರತದ ಘನತೆ, ಗೌರವ ಹೆಚ್ಚಿಸಿದೆ ಎಂದರು.ದೇಶದಲ್ಲಿ 18 ಕೋಟಿ ವಾಲ್ಮೀಕಿ ಸಮುದಾಯವಿದ್ದು, ತಳ ಸಮುದಾಯಗಳು ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಬೆಳೆದು ಬರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು.ಮುಖಂಡ ಚಂದ್ರಶೇಖರ ಜುಟ್ಟಲ ಮಾತನಾಡಿ, ವಾಲ್ಮೀಕಿ ಇಡೀ ವಿಶ್ವಕ್ಕೆ ರಾಮಾಯಣ ಮಹಾಕಾವ್ಯ ನೀಡಿ, ಸರ್ವ-ಧರ್ಮಿಯರಿಗೂ ಪೂಜ್ಯರಾಗಿದ್ದಾರೆ. ಅವರ ಜೀವನದ ಪಾಠವು ಬದುಕಿನ ಬದಲಾವಣೆಗೆ ನಾಂದಿ ಆಗಬೇಕು. ವಾಲ್ಮೀಕಿ ನೀಡಿರುವ ರಾಮಾಯಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನವು ನಮ್ಮ ಸಾಧನೆಗೆ ದಾರಿಯಾಗಬೇಕೆಂದರು. ಕವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ. ಕಲ್ಮೇಶ ಹಾವೇರಿಪೇಟ ಮಾತನಾಡಿ, ಕವಿವಿಯ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠದ ಕಟ್ಟಡ ಕಾಮಗಾರಿ ಬೇಗ ಆರಂಭಿಸಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಮೋಹನ ಗುಡಿಸಲಮನಿ ಮಾತನಾಡಿದರು. ಉಪನ್ಯಾಸಕ ಡಾ. ಶರಣು ಮುಷ್ಠಿಗೇರಿ ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ಬದುಕು ಹಾಗೂ ವಾಲ್ಮೀಕಿ ರಾಮಾಯಣ, ವಾಲ್ಮೀಕಿ ಸಮುದಾಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿರು.ಎಸ್ಪಿ ಗುಂಜನ್ ಆರ್ಯ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮುಖಂಡರಾದ ಎಂ. ಅರವಿಂದ, ಪರಮೇಶ ಕಾಳೆ, ಸುಶೀಲಾ ಚಲವಾದಿ, ಪರಮೇಶ ಕಟ್ಟಿಮನಿ ಮತ್ತಿತರರು ಇದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ನಿರ್ದೇಶಕಿ ಎಂ.ಬಿ. ಸಣ್ಣೇರ ವಂದಿಸಿದರು. ಪ್ರವೀಣ ಮಸ್ಕಿ ನಿರೂಪಿಸಿದರು. ವಾಲ್ಮೀಕಿ ಸಮುದಾಯದ ಸಾಧಕರನ್ನು ಮತ್ತು ಕಳೆದ ಸಾಲಿನಲ್ಲಿ ಎಸ್ಸೆಸ್ಲೆಲ್ಸಿ, ಪಿಯುಸಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ ಮತ್ತು ಮಾಜಿ ಸೈನಿಕರಿಗೆ ಸನ್ಮಾನಿಸಲಾಯಿತು.
ಭವ್ಯ ಮೆರವಣಿಗೆ...ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಭವ್ಯ ಮೆರವಣಿಗೆಯು ಧಾರವಾಡ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ, ಕಲಾಭವನ ಆವರಣದಲ್ಲಿ ಮುಕ್ತಾಯಗೊಂಡಿತು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯುದ್ದಕ್ಕೂ ಸಂಚರಿಸಿ, ಭಾವಚಿತ್ರದ ಮೆರವಣಿಗೆಗೆ ಮೆರಗು ತಂದವು.