ನಿಸರ್ಗದ ಇಚ್ಛೆಯಂತೆ ಬದುಕಿ-ಗವಿಸಿದ್ದೇಶ್ವರ ಶ್ರೀಗಳು

| Published : Nov 25 2024, 01:06 AM IST

ಸಾರಾಂಶ

ಇಚ್ಛೆಯೇ ದುಃಖದ ಮೂಲವಾಗಿದೆ. ಮನುಷ್ಯನ ಆಸೆಗೆ ಜಗತ್ತು ಸಣ್ಣದಾಗುತ್ತಿದೆ. ನನ್ನ ಶರೀರ ಹಾಗೂ ಸಂಪತ್ತು ಕರಗಬಾರದು ಎಂಬುದು ನಿಸರ್ಗಕ್ಕೆ ವಿರುದ್ಧವಾದ ನಿಯಮ, ನಾವು ತಿನ್ನುವ ಆಹಾರ ಮತ್ತು ಔಷಧಿಗಳಿಗೂ ಎಕ್ಸಪೈರಿ ಡೇಟ್ ಇದೆ ಎಂದ ಮೇಲೆ ಅವುಗಳನ್ನು ಬಳಸುತ್ತಿರುವ ಶರೀರಕ್ಕೆ ಇರದಿರಲು ಸಾಧ್ಯವೇ..? ಯಾವುದೇ ಪ್ರಾಣಿ ಪಕ್ಷಿಗಳು‌ ಕೂಡ ಹೊರತಾಗಿಲ್ಲ. ಹೀಗಾಗಿ ನನ್ನಿಚ್ಛೆಯಂತೆ ನಾನು ಬದುಕಲು ಸಾಧ್ಯವಿಲ್ಲ. ಆದರೆ ನಿಸರ್ಗದ ಇಚ್ಛೆಯಂತೆ ನಾನು ಬದುಕಬೇಕು ಎಂದು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ಬ್ಯಾಡಗಿ: ಇಚ್ಛೆಯೇ ದುಃಖದ ಮೂಲವಾಗಿದೆ. ಮನುಷ್ಯನ ಆಸೆಗೆ ಜಗತ್ತು ಸಣ್ಣದಾಗುತ್ತಿದೆ. ನನ್ನ ಶರೀರ ಹಾಗೂ ಸಂಪತ್ತು ಕರಗಬಾರದು ಎಂಬುದು ನಿಸರ್ಗಕ್ಕೆ ವಿರುದ್ಧವಾದ ನಿಯಮ, ನಾವು ತಿನ್ನುವ ಆಹಾರ ಮತ್ತು ಔಷಧಿಗಳಿಗೂ ಎಕ್ಸಪೈರಿ ಡೇಟ್ ಇದೆ ಎಂದ ಮೇಲೆ ಅವುಗಳನ್ನು ಬಳಸುತ್ತಿರುವ ಶರೀರಕ್ಕೆ ಇರದಿರಲು ಸಾಧ್ಯವೇ..? ಯಾವುದೇ ಪ್ರಾಣಿ ಪಕ್ಷಿಗಳು‌ ಕೂಡ ಹೊರತಾಗಿಲ್ಲ. ಹೀಗಾಗಿ ನನ್ನಿಚ್ಛೆಯಂತೆ ನಾನು ಬದುಕಲು ಸಾಧ್ಯವಿಲ್ಲ. ಆದರೆ ನಿಸರ್ಗದ ಇಚ್ಛೆಯಂತೆ ನಾನು ಬದುಕಬೇಕು ಎಂದು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹನ್ನೊಂದನೇ ಹಾಗೂ ಅಂತಿಮ ದಿನದ ಆಧ್ಯಾತ್ಮ ಪ್ರವಚನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಜಗತ್ತಿನ ಸಕಲ ಜೀವರಾಶಿಗಳಲ್ಲಿ ಸಾವು ಕಡಿಮೆಯಾಗಲು ಸಾಧ್ಯವೇ..? ಹುಟ್ಟಿದ ಪ್ರತಿಯೊಂದು ಜೀವ ಸಂಕುಲ ಸಾಯಬೇಕೆನ್ನುವುದು ಜಗತ್ತಿನ ನಿಯಮ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ, ನನ್ನ ಇಚ್ಛೆಯೇ ಬೇರೆ ಆದರೆ ನಿಸರ್ಗದ ಇಚ್ಛೆಯೇ ಬೇರೆಯೇ ಎಂದರು.

ಕಣ್ಣೀರಿಟ್ಟ ತೇನಸಿಂಗ್: ಸುಮಾರು 29 ಸಾವಿರ ಅಡಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನೇರಿದ ತೇನ್ ಸಿಂಗ್ ಕೊನೆಗೊಂದು ದಿವಸ 3 ಮೆಟ್ಟಿಲುಗಳನ್ನು ಏರಲಾಗದೇ ಅಳುತ್ತಿದ್ದ, ಹಾಗೆಯೇ ಯೌವನದಲ್ಲಿ ಶಕ್ತಿ ಇರುವತನಕ ಕಣ್ಮುಂದೆ ಕನ್ನಡಿ, ಬಳಿಕ ಕಣ್ಣಿನ ಮೇಲೆ ಕನ್ನಡಿ ಕೈಯಲ್ಲಿ ಸಿಗರೇಟ್ ಪ್ಯಾಕ್ ಇದ್ದರೇ, ದೇಹದಲ್ಲಿನ ಸಿಕ್ಸ ಪ್ಯಾಕ್ ಕೂಡ ಕರಗುತ್ತದೆ. ಕೂದಲು ಬೆಳ್ಳಗಾಗುವುದು ಕೂಡ ನಿಮ್ಮ ಅಂತ್ಯದ ಸಂಕೇತ. ಹಾಗಾಗಿಯೇ ನಮ್ಮ ಪೂರ್ವಜನರು ನಿಮ್ಮಲ್ಲಿರುವ ಧನ, ಸಂಪತ್ತು ಆಸ್ತಿ ಐಶ್ವರ್ಯಗಳು ನಿಮ್ಮ ಭಾಗ್ಯಗಳಲ್ಲ. ನಮ್ಮ ಆರೋಗ್ಯವೇ ಭಾಗ್ಯ ಎಂದರು.

ಸಂಬಂಧಗಳು ಉಳಿಯಬೇಕು: ದ್ರೋಣಾಚಾರ್ಯರನ್ನು ನೋಡಿದರೆ ಗುರು-ಶಿಷ್ಯರ ಸಂಬಂಧಗಳು ಉಳಿಯುವುದಿಲ್ಲ ಎಂಬುದು ಅರ್ಥವಾಗುತ್ತದೆ. ಕೌರವ ಮತ್ತು ಪಾಂಡವರ ಕುರುಕ್ಷೇತ್ರ ಯುದ್ಧವನ್ನು ನೋಡಿದರೇ ಸಹೋದರರ ನಡುವಿನ ಸಂಬಂಧಗಳು ಉಳಿಯುವುದಿಲ್ಲ ಎಂಬುದು ತಿಳಿಯುತ್ತದೆ. ಯಾವ ವ್ಯಕ್ತಿ ಕೋರ್ಟ್‌ ಮೆಟ್ಟಿಲನ್ನೇರುತ್ತಾನೆ ಅಲ್ಲಿ ಆತನಿಗೆ ನ್ಯಾಯ ಸಿಗಬಹದು. ಅವನು ಎಲ್ಲ ಸಂಬಂಧಗಳನ್ನು ಕಳೆದುಕೊಳ್ಳುತ್ತಾನೆ ಎಂದರು.

ಸಾವಿನಲ್ಲೂ ನಗುತ್ತಿದ್ದ ಸಾಕ್ರೇಟಿಸ್: ತತ್ವಜ್ಞಾನಿ ವಿಷವನ್ನು ಹಾಕಿ ಕೊಲ್ಲಲಾಗುತ್ತಿತ್ತು (ಸ್ಲೋ ಪಾಯಿಸನ್) ಆದರೆ ಆತನ ಶಿಷ್ಯನೆದುರಿಗೆ ಇದೇ ವಿಷಯವನ್ನು ತಿಳಿಸಿ ನಗುತ್ತಿದ್ದ, ಇದನ್ನು ಪ್ರಶ್ನಿಸಿದ ಕ್ರೇಟೋ ಎಂಬ ಶಿಷ್ಯನಿಗೆ ಸಾಕ್ರೇಟಿಸ್ ಹೇಳಿದ್ದಿಷ್ಟು, ನನ್ನ ಸಾವು ನಿರ್ಧಾರವಾಗಿದೆ ಹೀಗಿದ್ದ ಮೇಲೆ ಅದಕ್ಕಾಗಿ ಅಳುವುದೇಕೆ..? ಆಸ್ಥಾನಕ್ಕಾಗಿ ರಾಮ, ಭರತ ಹಾಗೂ ದಶರಥ ಮಹಾರಾಜ ಮೂವರ ಇಚ್ಛೆಯಾಗಿತ್ತು. ಆದರೆ ಭಗವಂತನ ಇಚ್ಛೆಯೇ ಬೇರೆಯಾಗಿತ್ತು. ಜೀವ ಇಲ್ಲದ ಪಾದುಕೆಗಳು ಪಟ್ಟವನ್ನೇರಿ ಅಯೋಧ್ಯೆಯ ಆಡಳಿತವನ್ನು ನಡೆಸಿದವು. ಭಗವಂತ ನಿನ್ನ ಇಚ್ಛೆಯಂತೆ ನಡೆಯುತ್ತೇನೆ. ಸ್ವಲ್ಪ ಶಕ್ತಿಯನ್ನು ಕೊಡು ಎನ್ನುವುದಷ್ಟೇ ನಮ್ಮಿಚ್ಚೆಯಾಗಬೇಕು ಎಂದು ಮಾರ್ಮಿಕವಾಗಿ ನುಡಿದರು.

ಆತ್ಮಹತ್ಯೆ ಎನ್ನುವ ಪದವೇ ತಪ್ಪು: ಆತ್ಮಕ್ಕೆ ಸಾವಿಲ್ಲ ಹೀಗಾಗಿ ಹತ್ಯೆಯಾಗುವುದು ಇಲ್ಲಿ ದೇಹ ಮಾತ್ರ ಆತ್ಮಹತ್ಯೆ ಎಂಬ ಪದದ ಬಳಕೆಯೇ ಸಮಾಜದ ನೀತಿಗೆ ವಿರುದ್ಧವಾಗಿದೆ. ಜೀವನ ಅರ್ಥ ಮಾಡಿಕೊಳ್ಳದಿದ್ದರೇ ನಿತ್ಯವೂ ಹತ್ಯೆಯಾದಂತೆ, ಹೀಗಾಗಿ ದೇಹ ರಚನೆಯಲ್ಲಿ ದೇವರು ಕಣ್ಣನ್ನು ಮುಂದಿಟ್ಟಿದ್ದಾನೆ, ಕಾರಣವಿಷ್ಟೇ ಹಿಂದಿನದನ್ನು ಕೇವಲ ನೆನಪಿಸಿಕೊಂಡರಷ್ಟೇ ಸಾಕು, ಹಿಂದೆ ನೋಡದಂತೆ ಮುಂದಕ್ಕೆ ಸಾಗಲಿ ಎಂಬುದು ಇದರ ತಾತ್ಪರ್ಯವಾಗಿದೆ ಎಂದರು.

ಜೀವಕ್ಕೆ ಕಳೆ ಬರದಂತೆ ನೋಡಿಕೊಳ್ಳಿ:ಸಣ್ಣ ಸಣ್ಣ ವಿಷಯಗಳಿಗೆ ಮನಸ್ಸಿಗೆ ಮಕ್ಕಳು ಪ್ರಸ್ತುತ ಸಮಾಜದಲ್ಲಿ ಸೋಲುತ್ತಿದ್ದಾರೆ, ಇದೊಂದು ದೊಡ್ಡ ದುರಂತ. ಐಪಿಎಲ್ ಆಡಿ‌ ಕೆಟ್ಟವರೆಷ್ಟು, ಇಸ್ಪೀಟ್ ಆಡಿ ಕೆಟ್ಟವರೆಷ್ಟು, ಇದನ್ನು ನಾವು ಖಂಡಿಸುತ್ತಿಲ್ಲ. ಜೋಳ ಬಿತ್ತಿದರೂ ಅದರ ಜೊತೆಗೆ ಕಳೆ ಬೆಳೆಯುತ್ತದೆ. ಅವುಗಳ ನಡುವೆಯೂ ಜೋಳ ಬೆಳೆಯುತ್ತಲಿದೆ, ಹೀಗಾಗಿ ನಮ್ಮ ಜೀವನದಲ್ಲಿ ಕೂಡ ಕಳೆ ಬರದಂತೆ ನೋಡಿಕೊಳ್ಳಬೇಕು. ಅವುಗಳ ಜೊತೆಯೂ ನಾವು ಬೆಳೆಯಬೇಕಾಗುತ್ತದೆ ಎಂದರು. ಆಧಾತ್ಮ ಪ್ರವಚನದ ಕೊನೆ ದಿನವಾದ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಶುಭ ಕೋರಿದರು.