ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ 20ನೇ ಕಂತಿನ ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಕಾರ್ಯಕ್ರಮದ ನೇರ ಪ್ರಸಾರ ಹಾಗೂ ಮುಂಗಾರು ಬೆಳೆಯಲ್ಲಿ ಭತ್ತದ ಉತ್ಪಾದನಾ ತಂತ್ರಜ್ಞಾನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.ನಂಜನಗೂಡು ಕೃಷಿ ಇಲಾಖೆಯ ಕೃಷಿ ಸಹ ನಿರ್ದೇಶಕ ರವಿ ಉದ್ಘಾಟಿಸಿ ಮಾತನಾಡಿ, ರೈತರು ಇಲಾಖೆಗೆ ಬಿತ್ತನೆ ಬೀಜವನ್ನು ಸಬ್ಸಿಡಿ ರೂಪದಲ್ಲಿ ಪಡೆಯಲು ಮಾತ್ರ ಇಲಾಖೆಗೆ ಬರುತ್ತಾರೆ. ಆದರೆ, ಬೆಳೆ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆಯಲು ಮುಂದೆ ಬರುತ್ತಿಲ್ಲ ಎಂದು ಅವರು ತಿಳಿಸಿದರು.
ಅವೈಜ್ಞಾನಿಕವಾಗಿ ರಸಗೊಬ್ಬರ ಬಳಕೆಯಿಂದಾಗಿ ಇಳುವರಿ ನಷ್ಟವಾಗುತ್ತಿದೆ, ಕೆವಿಕೆಯ ತಜ್ಞರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು ಭತ್ತವನ್ನು ಬೆಳೆಯಲು ರೈತರಿಗೆ ಕಿವಿಮಾತು ಹೇಳಿದರು. ಬಿತ್ತನೆ ಬೀಜವಲ್ಲದೇ, ಜೈವಿಕ ಗೊಬ್ಬರಗಳು ಸಬ್ಸಿಡಿ ಮೊತ್ತದಲ್ಲಿ ನೀಡಲಾಗುವುದು ಹಾಗೂ ಕೃಷಿ ಪರಿಕರಗಳನ್ನು ಕಡಿಮೆ ಮೊತ್ತಕ್ಕೆ ಬಾಡಿಗೆ ನೀಡಲಾಗುವುದು. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ರೈತರಿಗೆ ಕರೆ ನೀಡಿದರು.ಪ್ರಗತಿಪರ ರೈತ ಗೋಪಾಲ ಔಷಧಿಯ ಗುಣವುಳ್ಳ ಕಪ್ಪು ಭತ್ತದ ತಳಿಗಳ ಕುರಿತು ಮಾತನಾಡಿ, ಕಪ್ಪು ಅಕ್ಕಿ ಉಪಯೋಗದಿಂದ ಆರೋಗ್ಯ ಮೇಲೆ ಆಗುವ ಪ್ರಯೋಜನಗಳು, ಮಾರುಕಟ್ಟೆ ಅವಕಾಶಗಳು ಕುರಿತು ಮಾಹಿತಿ ನೀಡಿದರು.
ಭತ್ತದಲ್ಲಿ ಯಾಂತ್ರೀಕರಣ, ಸಸಿಮಡಿ ಉತ್ಪಾದನೆ, ಸಮರ್ಪಕ ರಸಗೊಬ್ಬರ ಹಾಗೂ ಕೊಟ್ಟಿಗೆ ಗೊಬ್ಬರಗಳ ಬಳಕೆ, ಭತ್ತದ ವಿವಿಧ ತಳಿಗಳ ಕುರಿತು ಪರಿಚಯ, ಬೀಜೋತ್ಪಾದನೆ, ಬೀಜೋಪಚಾರ, ಭತ್ತದ ಬೆಳೆಗೆ ಬರುವ ವಿವಿಧ ಕೀಟ ಹಾಗೂ ರೋಗಗಳು ಮತ್ತು ಅವುಗಳ ಹತೋಟಿ ಕುರಿತು ವಿವರವಾದ ಮಾಹಿತಿಯನ್ನು ಕೆವಿಕೆಯ ವಿಷಯ ತಜ್ಞರಾದ ಶಾಮರಾಜ್, ಎಚ್.ವಿ. ದಿವ್ಯಾ ಹಾಗೂ ಡಾ.ವೈ.ಪಿ. ಪ್ರಸಾದ್ ನೀಡಿದರು.ಆರ್ಯುವೇದ ಕಾಲೇಜಿನ ಡಾ. ಪುನೀತ್ ಮಾತನಾಡಿ, ಇಂದಿನ ದಿನಗಳಲ್ಲಿ ಹೆಚ್ಚು ರಾಸಾಯನಿಕ ಔಷಧಿಗಳನ್ನು ಬೆಳೆಗೆ ಸಿಂಪಡಿಸುತ್ತಿದ್ದಾರೆ. ಇದರಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕೆಂದು ಕರೆ ನೀಡಿದರು. ವಿವಿಧ ರೋಗಗಳ ಕುರಿತು ಮಾಹಿತಿ ನೀಡುತ್ತಾ, ಮನೆ ಮದ್ದಿನಿಂದ ರೋಗಬಾಧೆಯನ್ನು ಕಡಿಮೆ ಮಾಡಿಕೊಳ್ಳುವ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಮಾತನಾಡಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ತಳಿಗಳ ಭತ್ತವನ್ನು ಬೆಳೆಯಲು ರೈತರು ಆಸಕ್ತಿ ತೋರಬೇಕು ಎಂದು ತಿಳಿಸಿದರು. ಭೌಗೋಳಿಕ ಸೂಚನೆ ಹೊಂದಿರುವ ಟ್ಯಾಗ್‌ಗಳ ಬೆಳೆಗಳನ್ನು ಬೆಳೆದು ಹೆಚ್ಚು ಲಾಭ ಪಡೆಯಲು ಕರೆ ನೀಡಿದರು. 20ನೇ ಕಂತಿನ ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ಕೇಂದ್ರ ಸರ್ಕಾರವು ರೈತರ ಅಭ್ಯುದಯಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.ಭಾರತೀಯ ಕಿಸಾನ್ ಸಂಘದ ನಂಜನಗೂಡು ಘಟಕದ ಅಧ್ಯಕ್ಷ ಪ್ರಭುಸ್ವಾಮಿ ಇದ್ದರು. ಕೃಷಿ ಇಲಾಖೆಯ ಕೃಷಿ ಅಧಿಕಾರಿಗಳು, ಕೆವಿಕೆಯ ಸಿಬ್ಬಂದಿ ವರ್ಗದವರು ಹಾಗೂ ರೈತ, ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.