ಹೊಟ್ಟೆ ನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರಿಗೆ ಅತ್ಯಂತ ಸವಾಲಿನ ರೋಬೋಟಿಕ್‌ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಮರುಜೀವ ನೀಡಿದೆ.

ಉಳ್ಳಾಲ: ಹೊಟ್ಟೆ ನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರಿಗೆ ಅತ್ಯಂತ ಸವಾಲಿನ ರೋಬೋಟಿಕ್‌ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಮರುಜೀವ ನೀಡಿದೆ.ಯಕೃತ್ತಿನ (ಲಿವರ್ ) ದೊಡ್ಡ ಗಾತ್ರದ ಗಡ್ಡೆಯಿಂದ ಬಳಲುತ್ತಿದ್ದ ರೋಗಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಅದು ಒಡೆದು ನಿಯಂತ್ರಿಸಲಾಗದ ರಕ್ತಸ್ರಾವವಾಗುವ ತೀವ್ರ ಅಪಾಯವಿತ್ತು. ಗಡ್ಡೆಯು ''''''''''''''''ವೀನಾ ಕ್ಯಾವಾ'''''''''''''''' ಎಂಬ ಪ್ರಮುಖ ರಕ್ತನಾಳಗಳ ಪಕ್ಕದಲ್ಲೇ ಇದ್ದ ಕಾರಣ ಸಾಂಪ್ರದಾಯಿಕ ಮುಕ್ತ ಶಸ್ತ್ರಚಿಕಿತ್ಸೆಯು ( ಓಪನ್ ಸರ್ಜರಿ)ಜೀವಕ್ಕೆ ಅಪಾಯಕಾರಿ ಹಾಗೂ ಅತಿಯಾದ ರಕ್ತಸ್ರಾವಕ್ಕೆ ಕಾರಣವಾಗುವ ಸಾಧ್ಯತೆಯಿತ್ತು. ಆದರೆ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.ಏನಿದು ಸಮಸ್ಯೆ: 14 ವರ್ಷದ ಬಾಲಕಿಯನ್ನು ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. ಪರಿಶೀಲನೆಯ ವೇಳೆ ಮಕ್ಕಳ ಶಸ್ತ್ರಚಿಕಿತ್ಸಕರು, ಮಕ್ಕಳ ವೈದ್ಯರು ಹಾಗೂ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟೆರಾಲಜಿ ತಜ್ಞರನ್ನೊಳಗೊಂಡ ವೈದ್ಯಕೀಯ ತಂಡ ಬಾಲಕಿಗೆ ಯಕೃತ್ತಿನ ಕಾಡೇಟ್ ಲೋಬ್‌ನಲ್ಲಿ ದೊಡ್ಡ ಗಡ್ಡೆ (ಟ್ಯೂಮರ್) ಇರುವುದನ್ನು ಪತ್ತೆ ಹಚ್ಚಲಾಯಿತು.ಮಕ್ಕಳ ಶಸ್ತ್ರಚಿಕಿತ್ಸಾ ತಂಡ ಹಾಗೂ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟೆರಾಲಜಿ ತಜ್ಞರು ಸಂಯುಕ್ತವಾಗಿ ರೋಬೋಟಿಕ್ ಸಹಾಯಕ ಯಕೃತ್ ಶಸ್ತ್ರಚಿಕಿತ್ಸೆ ನಡೆಸುವ ಮಹತ್ವದ ನಿರ್ಧಾರ ಕೈಗೊಂಡರು. ಈ ಸವಾಲಿನ ಶಸ್ತ್ರಚಿಕಿತ್ಸೆ ಸುಮಾರು 11 ಗಂಟೆಗಳ ಕಾಲ ನಡೆಯಿತು. ಪುದುಚೇರಿಯ ಜವಾಹರಲಾಲ್ ನೆಹರು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಖ್ಯಾತ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟೆರಾಲಜಿಸ್ಟ್ ಡಾ. ಕಲಾಯರಸನ್ ರಾಜ ಅವರ ಮಾರ್ಗದರ್ಶನದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿತು.

ಶಸ್ತ್ರಚಿಕಿತ್ಸೆಯ ನಂತರ ಬಾಲಕಿಯನ್ನು ಮಕ್ಕಳ ವೈದ್ಯರು ಹಾಗೂ ಮಕ್ಕಳ ಐಸಿಯು ಸಿಬ್ಬಂದಿಯ ನಿಗಾದಲ್ಲಿ ಇರಿಸಲಾಗಿದ್ದು, ಯಾವುದೇ ಅಡಚಣೆಗಳಿಲ್ಲದೆ ಚೇತರಿಸಿಕೊಂಡರು. ಶಸ್ತ್ರಚಿಕಿತ್ಸೆಯ ಐದನೇ ದಿನ ಬಾಲಕಿಯನ್ನು ಸಂಪೂರ್ಣ ಆರೋಗ್ಯ ಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.

ಕರಾವಳಿ ಕರ್ನಾಟಕದಲ್ಲಿ ಮಕ್ಕಳ ರೋಬೋಟಿಕ್ ಶಸ್ತ್ರಚಿಕಿತ್ಸೆ ಮೊದಲು ಕರಾವಳಿ ಕರ್ನಾಟಕದಲ್ಲಿ ಇಂತಹ ಜಟಿಲ ಯಕೃತ್ ಗಡ್ಡೆಗೆ ಸಂಬಂಧಿಸಿದ ಮೊದಲ ಮಕ್ಕಳ ರೋಬೋಟಿಕ್ ಶಸ್ತ್ರಚಿಕಿತ್ಸೆ ಇದಾಗಿದೆ. ಕಳೆದ ಒಂದು ವರ್ಷದಲ್ಲಿ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯಲ್ಲಿ 170ಕ್ಕೂ ಹೆಚ್ಚು ರೋಬೋಟಿಕ್ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನಡೆಸಲಾಗಿದೆ.

ಸುಮಾರು 170ಕ್ಕೂ ಅಧಿಕ ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದ ಕೆ.ಎಸ್. ಹೆಗ್ಡೆ ಆಸ್ಪತ್ರೆಯು 14 ವರ್ಷದ ಬಾಲಕಿಗೆ ಸುಮಾರು 11 ಗಂಟೆಗಳ ಕಾಲ ಮಕ್ಕಳ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಅತ್ಯಂತ ಜಟಿಲ ಯಕೃತ್ (ಲಿವರ್) ಗಡ್ಡೆಗೆ ಸಂಬಂಧಿಸಿದ ಮಕ್ಕಳ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ನಡೆಸಿದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.