ಕ್ಷಣಿಕ ಸುಖದ ಚಟಗಳಿಂದ ಜೀವನ ನಾಶ: ಡಾ. ವೀರೇಂದ್ರ ಹೆಗ್ಗಡೆ

| Published : Jun 23 2024, 02:03 AM IST

ಕ್ಷಣಿಕ ಸುಖದ ಚಟಗಳಿಂದ ಜೀವನ ನಾಶ: ಡಾ. ವೀರೇಂದ್ರ ಹೆಗ್ಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಉಜಿರೆ ಲಾಯಿಲ ಗ್ರಾಮದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 222ನೇ ವಿಶೇಷ ಮದ್ಯವರ್ಜನ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ನಮ್ಮ ಮೇಲಿನ ನಿಯಂತ್ರಣವನ್ನು ನಾವೇ ಸಾಧಿಸಬೇಕು. ಯಾವುದೇ ವ್ಯಸನದಿಂದ ಸಾಧಿಸುತ್ತೇನೆಂಬ ಭ್ರಮೆಯಿಂದ ಹೊರಗೆ ಬಂದು ಸದೃಢ ಮನಸ್ಸಿನಿಂದ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಕ್ಷಣಿಕ ಸುಖವನ್ನು ನೀಡುವ ಈ ಚಟಗಳು ನಮ್ಮ ಜೀವನವನ್ನೇ ವಿನಾಶಕ್ಕೆ ಕೊಂಡೊಯ್ಯುವುದರಲ್ಲಿ ಅನುಮಾನವಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಅವರು ಉಜಿರೆ ಲಾಯಿಲ ಗ್ರಾಮದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 222ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವ್ಯಸನಗಳ ಬಳಕೆಯ ಪ್ರಮಾಣ ಜಾಸ್ತಿಯಾಗುತ್ತಿದ್ದು, ಮಾದಕ ವಸ್ತುಗಳ ದಂಧೆಯ ಪ್ರಕರಣಗಳೂ ಹೆಚ್ಚಾಗುತ್ತಿವೆ. ಕುತೂಹಲ, ಆಕರ್ಷಣೆ, ತಪ್ಪು ನಿರ್ಧಾರಗಳಿಂದ ವ್ಯಸನಕ್ಕೆ ಬಲಿ ಬೀಳುವವರೇ ಜಾಸ್ತಿ. ಈ ನಿಟ್ಟಿನಲ್ಲಿ ಡ್ರಗ್ಸ್ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಜನಜಾಗೃತಿ ವೇದಿಕೆ, ಶಿಬಿರಗಳು ಮಹತ್ತರ ಪಾತ್ರವನ್ನು ವಹಿಸುತ್ತಿದ್ದು, ಇಂದು ಸಾವಿರಾರು ಜನರ ಪರಿವರ್ತನೆಗೆ ಮತ್ತು ಜಾಗೃತಿಗೆ ಸಾಕ್ಷಿಯಾಗಿದೆ. ಜಾಗೃತ ಸಮಾಜದಿಂದ ವ್ಯಸನಮುಕ್ತ ದೇಶ ನಿರ್ಮಾಣ ಸಾಧ್ಯ ಎಂದರು.

ಈ ವಿಶೇಷ 8 ದಿನದ ಶಿಬಿರದಲ್ಲಿ ರಾಜ್ಯಾದ್ಯಂತ 74 ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಮನೋವೈದ್ಯಕೀಯ ಚಿಕಿತ್ಸೆ, ಯೋಗ ಕಾರ್ಯಕ್ರಮ, ಸಲಹಾ ಕಾರ್ಯಕ್ರಮಗಳನ್ನು ಪ್ರಮುಖವಾಗಿ ನಡೆಸಿ ಮನಪರಿವರ್ತನೆಗೆ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್‌, ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ದಿನೇಶ್ ಮರಾಠಿ, ಚಿತ್ತರಂಜನ್, ಆರೋಗ್ಯ ಸಹಾಯಕರಾದ ಜಯಲಕ್ಷ್ಮೀ, ಶ್ವೇತಾ ಸಹಕರಿಸಿದರು.