ವಿವಿ ಸಾಗರ ಜಲಾಶಯದಿಂದ ಜೀವಜಲ ಪೋಲು

| Published : Apr 12 2024, 01:02 AM IST

ಸಾರಾಂಶ

ವಿವಿ ಸಾಗರ ಜಲಾಶಯದ ಎಡನಾಲೆಯಿಂದ ಅನಧಿಕೃತವಾಗಿ ನೀರು ಹರಿಸಲಾಗಿದೆ ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಆರೋಪಿಸಿದ್ದಾರೆ.

ಹಿರಿಯೂರು: ವಿವಿ ಸಾಗರ ಜಲಾಶಯದ ಎಡನಾಲೆಯಿಂದ ಅನಧಿಕೃತವಾಗಿ ನೀರು ಹರಿಸಲಾಗಿದೆ ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿವಿ ಸಾಗರ ಜಲಾಶಯದಿಂದ ದಿನಾಂಕ ೦9-೦4-2024 ರಂದು ಸಂಜೆ 6 ಗಂಟೆಯಿಂದ ವಾಣಿವಿಲಾಸ ಸಾಗರ ಜಲಾಶಯ ದಿಂದ ಕೆಕೆ ಅಣೆಕಟ್ಟಿಗೆ ನೀರು ಹರಿಸಿ ಅಲ್ಲಿಂದ ಮುಂದಕ್ಕೆ ಬಲನಾಲೆ ಮುಖಾಂತರ ಕೂನಿಕೆರೆ, ಲಕ್ಕವನಹಳ್ಳಿ, ಹಿರಿಯೂರು , ಬಬ್ಬೂರು, ಫಾರಂ, ಆಲೂರು ಮುಖಾಂತರ ಸುಮಾರು 250 ಕ್ಯೂಸೆಕ್ಸ್ ನಷ್ಟು ನೀರನ್ನು ಹರಿಸಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳ ಆದೇಶವಾಗಲಿ ಅಥವಾ ಪ್ರಾದೇಶಿಕ ಆಯುಕ್ತರ ಆದೇಶ ವಾಗಲಿ ಇಲ್ಲ. ಇಂತಹ ಕಠಿಣ ಬೇಸಿಗೆ ದಿನಗಳಲ್ಲಿ ನೀರಿನ ಅಭಾವದಿಂದ ತಾಲೂಕಿನ ನೂರಾರು ಹಳ್ಳಿಗಳ ಜನ ಪ್ರತಿದಿನ ಸರ್ಕಾರಕ್ಕೆ ನೀರು ಕೇಳಿ ಪ್ರತಿಭಟನೆ, ಮನವಿ, ಲೋಕಸಭಾ ಚುನಾವಣೆ ಬಹಿಷ್ಕಾರ ಮತ್ತಿತರ ರೀತಿಯಲ್ಲಿ ಮೊರೆ ಇಡುತ್ತಿ ದ್ದಾರೆ. ಆದರೆ ವಾಣಿವಿಲಾಸ ಸಾಗರ ಜಲಾಶಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಹಾಯಕ ಕಾರ್ಯಪಾಲಕ ಅಭಿಯಂತರರು ಯಾರ ಆದೇಶವೂ ಇಲ್ಲದೆ ಅನಧಿಕೃತವಾಗಿ ನೀರನ್ನು ಹರಿಸುವ ಮೂಲಕ ಅಮೂಲ್ಯವಾದ ಜೀವಜಲವನ್ನು ತಮಗೆ ತಿಳಿದ ಹಾಗೆ ವ್ಯರ್ಥ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬರುವ ಜಲ ಸಂಕಷ್ಟಗಳಿಗೆ ಪರಿಹಾರ ಹುಡುಕಬೇಕಾದ ಅಧಿಕಾರಿಗಳು ಹೀಗೆ ಬೇಜವಾಬ್ದಾರಿಯಿಂದ ನೀರನ್ನು ಹರಿಸುವ ಮೂಲಕ ಜೀವಜಲ ಪೋಲು ಮಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ತುರ್ತಾಗಿ ಸಂಬಂಧಪಟ್ಟ ಇಂಜಿನಿಯರ್‌ ಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಕಸವನಹಳ್ಳಿ ರಮೇಶ್, ಕೆ.ಸಿ.ರುದ್ರೇಶ್ ಬಾಬು, ವಿ.ಆಂಜನೇಯ, ರಾಮಚಂದ್ರ ಕಸವನಹಳ್ಳಿ ಒತ್ತಾಯಿಸಿದ್ದಾರೆ.

ಇನ್ನು, ತಾಲೂಕಿನ ವಾಣಿವಿಲಾಸ ಜಲಾಶಯದಿಂದ ಈಗಾಗಲೇ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಿಗೆ ನದಿಪಾತ್ರದ ಮೂಲಕ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಸುಮಾರು 5 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ದಿನಾಂಕ 21-3-2024 ರಿಂದ 9-4-2024 ರವರೆಗೆ ಹರಿಸಲಾಗಿದೆ. ಇನ್ನೂ 80 ಕಿ.ಮೀ. ನೀರು ಹರಿಯುವುದರಿಂದ ಮೊಳಕಾಲ್ಮುರು ತಾಲೂಕು ದಾಟಿ ಆಂಧ್ರಕ್ಕೆ ಹರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಆದರೆ ನಮ್ಮ ತಾಲೂಕಿನ ಕೆಲವು ಗ್ರಾಮಗಳ ಕೆರೆಗಳಿಗೆ ನೀರು ಹರಿಸಲು ಅಧಿಕಾರಿಗಳಿಗೆ ಸರ್ಕಾರದ ಆದೇಶ ಬೇಕಿದೆ ಎನ್ನಲಾಗಿದೆ. ಬೇರೆ ತಾಲೂಕುಗಳಿಗೆ ನೀರು ಹರಿಸುವಾಗ ಯಾವುದೇ ಆದೇಶ ವಿಲ್ಲದೆ ಹೆಚ್ಚುವರಿ ನೀರನ್ನು ಹರಿಸಲಾಗಿದ್ದು, ಇದೀಗ ಕೇವಲ 200 ಕ್ಯೂಸೆಕ್ಸ್ ನೀರು ಹರಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹಿರಿಯೂರು ತಾಲೂಕಿನ ಎಲ್ಲಾ ಭಾಗದ ರೈತರು ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸಬೇಕು ಎಂದು ಅನೇಕ ರೀತಿಯ ಹೋರಾಟ ಚಳವಳಿಗಳನ್ನು ನಡೆಸಿದ್ದರು. ಆದರೆ ಹೋರಾಟ ನಡೆಸಿದ ರೈತರಿಗೆ ನೀರು ಕೊಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ದುರಂತವೆಂದರೆ ವಾಣಿವಿಲಾಸ ಜಲಾಶಯದ ಬಗ್ಗೆ ಯಾವುದೇ ಹೋರಾಟ ಮಾಡದೆ ತುಟಿ ಪಿಟಿಕ್ ಎನ್ನದೇ ಇರುವ ರೈತರ ಹೆಸರಿನಲ್ಲಿ ಸಾವಿರಾರು ಕ್ಯೂಸೆಕ್ಸ್ ನೀರನ್ನು ನದಿ ಮೂಲಕ ಆಂಧ್ರಕ್ಕೆ ಹರಿಸಲಾಗುತ್ತದೆ. ಅಧಿಕಾರಿಗಳು ಸಂವಿಧಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೋ ಅಥವಾ ಯಾವುದೋ ರಾಜಕಾರಣಿಗಳಿಗೆ ಅಥವಾ ದೊಡ್ಡ ದೊಡ್ಡ ಕುಳಗಳಿಗೆ ಮಣೆ ಹಾಕುತ್ತಾರೋ ಎಂಬ ಯಕ್ಷಪ್ರಶ್ನೆ ಉದ್ಭವಿಸಿದೆ. ಇದು ಹೀಗೆಯೇ ಮುಂದುವರೆದರೆ ಕಾನೂನು ಕಾಯಿದೆಗಳನ್ನು ಗಾಳಿಗೆ ತೂರಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ವಿರುದ್ಧ ರಾಜ್ಯ ಮಟ್ಟದ ಚಳವಳಿಯನ್ನು ಹಮ್ಮಿಕೊಂಡು ಅವರನ್ನು ಅಮಾನತುಗೊಳಿಸುವವರೆಗೂ ನಿರಂತರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಹೇಳಿದ್ದಾರೆ.