ಸಾರಾಂಶ
ಬಳ್ಳಾರಿ: ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ-ಯುಕೆಜಿ ಆರಂಭಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುತ್ತಿರುವ ಬೆನ್ನಲ್ಲೇ ಜಿಲ್ಲೆಯ 119 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ, 1ನೇ ತರಗತಿ (ದ್ವಿಭಾಷಾ) ತರಗತಿಗಳು ಶುರುಗೊಂಡಿವೆ.
ಹೊಸದಾಗಿ ಎಲ್‌ಕೆಜಿ-ಯುಕೆಜಿ ಆರಂಭಿಸಿರುವ ಶಾಲೆಗಳಲ್ಲಿ ಈಗಾಗಲೇ ಅಗತ್ಯ ಪೀಠೋಪಕರಣ ಖರೀದಿಸುವ ಪ್ರಕ್ರಿಯೆ ಮುಂದುವರಿದಿದ್ದು, ಅತಿಥಿ ಶಿಕ್ಷಕರು ಹಾಗೂ ಆಯಾಗಳನ್ನು ತಾತ್ಕಾಲಿಕ ನೇಮಕಕ್ಕೆ ಮಾಡಿಕೊಳ್ಳಲಾಗುತ್ತಿದೆ. ಶಾಲೆಯಲ್ಲಿ ದಾಖಲಾತಿ ಹೆಚ್ಚಳ, ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಕೆಕೆಆರ್‌ಡಿಬಿಯಿಂದ ಆಯಾ ಶಾಲೆಗಳಿಗೆ ₹50 ಸಾವಿರ ನೀಡಲಾಗುತ್ತಿದ್ದು, ಶಾಲೆ ಶುರುವಿಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಈಗಾಗಲೇ ಅನೇಕ ಶಾಲೆಗಳಲ್ಲಿ ಹಣ ಬಿಡುಗಡೆಯಾಗಿದೆ. ಉಳಿದ ಶಾಲೆಗಳಿಗೆ ಹಣ ಬಿಡುಗಡೆಯಾಗಬೇಕಿದೆ. ಈ ಹಣದಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಗಳಿಗೆ ಬಣ್ಣ, ಆಟದ ಸಾಮಾನುಗಳನ್ನು ಖರೀದಿಸುವಂತೆ ಆಯಾ ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಉಳಿದ ಶಾಲೆಗಳಲ್ಲಿ ಶೀಘ್ರವೇ ಹಣ ಬರಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಡೆಸ್ಕ್-ಚೇರ್‌ಗೆ ಕೊರತೆಯಿಲ್ಲ:
ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಹಾಗೂ 1ನೇ ತರಗತಿ (ದ್ವಿಭಾಷಾ) ತರಗತಿಗಳನ್ನು ಆರಂಭಿಸಲು ಯಾವುದೇ ಕೊರತೆಯಿಲ್ಲ. ಶಾಲೆಗಳಲ್ಲಿ ಈಗಾಗಲೇ ಚೇರ್, ಡೆಸ್ಕ್‌ಗಳಿವೆ. ಜೊತೆಗೆ ಕೆಕೆಆರ್‌ಡಿಬಿಯಿಂದ ಶಾಲೆಗಳಿಗೆ ₹50 ಸಾವಿರ ನೀಡುವುದರಿಂದ ಆಟದ ಸಾಮಾನುಗಳು ಸೇರಿ ಅಗತ್ಯ ಪರಿಕರಣ ಖರೀದಿಸಬಹುದು. 119 ಶಾಲೆಗಳಲ್ಲಿ ಮೂರು ತರಗತಿಗಳಿಗೆ ಸಂಬಂಧಿಸಿದಂತೆ 90 ಚೇರ್‌ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಿಕ್ಷಕರಿಗೆ ಹ್ಯಾಂಡ್ ಬುಕ್ ನೀಡಲಾಗುತ್ತಿದೆ. ಈಗಾಗಲೇ ಎಲ್ಲ ಕಡೆ ದಾಖಲಾತಿ ಶುರುಗೊಂಡಿದ್ದು ಪೋಷಕರು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಶಿಕ್ಷಣ ಕೊಡಿಸಲು ಹೆಚ್ಚು ಆಸಕ್ತಿ ತೋರಿಸಿದ್ದಾರೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಡಿ.ಉಮಾ.ಕನ್ನಡಪ್ರಭ ಜೊತೆ ಮಾತನಾಡಿದ ಅವರು, ಎಲ್‌ಕೆಜಿ-ಯುಕೆಜಿ ಹಾಗೂ 1ನೇ ತರಗತಿಗೆ ತಲಾ 30 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. 119 ಶಾಲೆಗಳಲ್ಲಿ ಬಹುತೇಕ ದಾಖಲಾತಿ ಪೂರ್ಣಗೊಂಡಿದೆ. ಮಕ್ಕಳಿಗೆ ಸಮವಸ್ತ್ರ, ಶೂ-ಸಾಕ್ಸ್, ಟೈ ಕೊಡಿಸಲು ಆಯಾ ಗ್ರಾಪಂಗಳು ಹೆಚ್ಚು ಉತ್ಸುಕ ತೋರಿಸಿವೆ. ಶಾಲೆಗೆ ಬರುವ ಮಕ್ಕಳಿಗೆ ಬಿಸಿಯೂಟ, ಹಾಲು, ರಾಗಿ ಮಾಲ್ಟ್ ನೀಡಲಾಗುತ್ತಿದ್ದು, ಮಕ್ಕಳ ಶಿಕ್ಷಣದ ಜೊತೆಗೆ ಅವರ ಆರೋಗ್ಯದ ಆರೈಕೆ ಕಡೆ ಗಮನ ನೀಡುವಂತೆ ಎಲ್ಲ ಶಾಲೆಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ಉಮಾ ತಿಳಿಸಿದರು.
ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ-ಯುಕೆಜಿ ಹಾಗೂ 1ನೇ ತರಗತಿ ಶುರುವಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗೆ ತೆರಳುತ್ತಿದ್ದಾರೆ. ಶಾಲೆಗೆ ಪಂಚಾಯಿತಿಯಿಂದ ಏನಾದರೂ ಸಹಾಯ ಬಯಸಿದರೆ ಖಂಡಿತ ನೀಡಲಾಗುವುದು ಎನ್ನುತ್ತಾರೆ ಸೋಮಸಮುದ್ರ ಗ್ರಾಪಂ ಅಧ್ಯಕ್ಷ ಶಾರದಾ ಪವಾಡಿ ರಮೇಶ್.ಜಿಲ್ಲೆಯ 119 ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ, 1ನೇ ತರಗತಿ ಆರಂಭಿಸಲಾಗಿದೆ. ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಗ್ರಾಪಂಗಳು ಪ್ರೋತ್ಸಾಹ ನೀಡುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎನ್ನುತ್ತಾರೆ ಡಿಡಿಪಿಐ ಡಿ.ಉಮಾದೇವಿ.
ಸರ್ಕಾರ ಶಾಲೆಯಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಿರುವುದು ಹೆಚ್ಚು ಖುಷಿ ನೀಡಿದೆ. ಖಾಸಗಿ ಶಾಲೆಗಳಲ್ಲಿ ದುಬಾರಿ ಡೊನೇಷನ್ ನೀಡಲು ಬಡವರಿಗೆ ಕಷ್ಟವಾಗುತ್ತದೆ. ಸರ್ಕಾರ ನಿರ್ಧಾರ ಹೆಚ್ಚು ಸಂತಸ ತಂದಿದೆ ಎನ್ನುತ್ತಾರೆ ಬೈಲೂರು ಗ್ರಾಮದ ಪೋಷಕ ರಾಮಣ್ಣ.;Resize=(128,128))
;Resize=(128,128))
;Resize=(128,128))
;Resize=(128,128))