ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯದ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ, ಯುಕೆಜಿ ಶಿಕ್ಷಣ ಆರಂಭಿಸಿದೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಮಕ್ಕಳಿಗೆ ಗುಣಮಟ್ಟದ ಆರಂಭಿಕ ಶಿಕ್ಷಣ ನೀಡಲು ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ (ಎಲ್‌ಕೆಜಿ, ಯುಕೆಜಿ) ಆರಂಭಿಸಲು ತಾಲೂಕಿನ 26 ಅಂಗನವಾಡಿ ಕೇಂದ್ರಗಳು ಆಯ್ಕೆಯಾಗಿವೆ.

ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯದ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ, ಯುಕೆಜಿ ಶಿಕ್ಷಣ ಆರಂಭಿಸಿದೆ, ಅದರಂತೆ ಕುಷ್ಟಗಿ ತಾಲೂಕಿನ 26 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವಂತೆ ಆದೇಶ ಹೊರಡಿಸಿದೆ.

ತಾಲೂಕಿನಾದ್ಯಂತ ಇರುವ 403 ಅಂಗನವಾಡಿ ಕೇಂದ್ರಗಳ ಪೈಕಿ ಮೂಲಭೂತ ಸೌಕರ್ಯ ಹೊಂದಿರುವ ಮೊದಲ ಹಂತದಲ್ಲಿ 26 ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು ಕಾರ್ಯಕರ್ತೆಯರು ತರಬೇತಿಗಾಗಿ ಕಾಯುತ್ತಿದ್ದಾರೆ.

ಯೋಜನೆಯ ಉದ್ದೇಶ:

ಖಾಸಗಿ ಶಾಲೆಗಳತ್ತ ಪೋಷಕರು ವಾಲುವುದನ್ನು ತಡೆಯುವುದು, ಅವರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವುದು ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯದಂತೆ ನೋಡಿಕೊಳ್ಳುವುದು ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ಬಡಮಕ್ಕಳಿಗೆ ಲಭ್ಯವಾಗಿಸುವುದು ಯೋಜನೆ ಮುಖ್ಯ ಉದ್ದೇಶವಾಗಿದೆ.

ಖಾಸಗಿ ಕಾನ್ವೆಂಟ್‌ಗಳಂತೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಅಂಗನವಾಡಿಗಳಿಗೆ ಪಠ್ಯ ಪುಸ್ತಕ, ಎಲ್ಇಡಿ ಟಿವಿ, ಪೂರ್ವ ಪ್ರಾಥಮಿಕ ಹಂತದ ಪುಸ್ತಕ, ಅಡ್ಡ ಗೆರೆಗಳ ಪುಸ್ತಕ, ನೀತಿ ಕಥೆಯ ಪುಸ್ತಕ, ಬಣ್ಣ ತುಂಬುವ ಪುಸ್ತಕ, ರೈಮ್ಸ್ ಪುಸ್ತಕ, ಮಕ್ಕಳಿಗೆ ಸಮವಸ್ತ್ರ ನೀಡಲು ಯೋಜನೆ ಹಾಕಿಕೊಳ್ಳಲಾಗಿದ್ದು ಆಟ ಪಾಠ ಹೀಗೆ ಎಲ್ಲವನ್ನೂ ಮಕ್ಕಳಿಗೆ ಇಲ್ಲಿ ಹೇಳಿಕೊಡಲಾಗುತ್ತಿದ್ದು ಎಲ್‌ಕೆಜಿ, ಯುಕೆಜಿ ಆರಂಭದ ಬೆನ್ನಲ್ಲೇ ಮಕ್ಕಳ ಆಗಮನದ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ಆಯ್ಕೆಯಾದ ಕೇಂದ್ರಗಳ ವಿವರ

ತಳುವಗೇರಾ ಕೇಂದ್ರ 1, ತಳುವಗೇರಾ-2, ಮುದೇನೂರು-1, ಮುದೇನೂರು-2, ಪುರ-1, ಪುರ-2, ಹಿರೇಮನ್ನಾಪೂರ-3, ಹಿರೇಮನ್ನಾಪೂರ-4, ಗುಮಗೇರಾ-1, ಗುಮಗೇರಾ-3, ಕೋರಡಕೇರಾ-3, ಕೋರಡಕೇರಾ-2, ನಿಲೋಗಲ್-4, ನಿಲೋಗಲ್ -3, ತಾವರಗೇರಾ-16, ತಾವರಗೇರಾ-10, ಕಂದಕೂರು-2, ಕಂದಕೂರು-4, ಕಾಟಾಪೂರ-3, ಕಾಟಾಪೂರು-2, ಕುಷ್ಟಗಿ-14, ಕುಷ್ಟಗಿ-30, ಕುಷ್ಟಗಿ-32, ಕುಷ್ಟಗಿ-16, ಗೋತಗಿ-1, ಗೋತಗಿ-3,

ಕುಷ್ಟಗಿ ತಾಲೂಕಿನ 26 ಅಂಗನವಾಡಿ ಕೇಂದ್ರಗಳ ಪೈಕಿ ಎರಡು ಕೇಂದ್ರ ಸೇರಿ ಒಂದರಂತೆ ಒಟ್ಟು 13 ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲಾಗುತ್ತಿದ್ದು, ಆಯ್ಕೆಯಾದ ಕೇಂದ್ರದಲ್ಲಿ ಸಿದ್ಧತೆ ಕೈಗೊಂಡಿದೆ. ಪಿಯುಸಿ, ಪದವೀಧರ, ಸ್ನಾತಕೊತ್ತರ ಪದವೀಧರ ಕಾರ್ಯಕರ್ತೆಯರಿದ್ದು ಅವರಿಗೆ ತರಬೇತಿ ನೀಡಿ ಪರಿಣಾಮಕಾರಿ ಬೋಧನೆಗೆ ಸಜ್ಜಗೊಳಿಸುವ ಕೆಲಸ ಮಾಡಲಾಗುವದು, ತರಬೇತಿಯ ವ್ಯವಸ್ಥೆ ಮಾಡಲು ಮೇಲಾಧಿಕಾರಿಗಳ ಜತೆ ಚರ್ಚಿಸಲಾಗಿದೆ. ಈ ವಾರದಲ್ಲಿ ತರಬೇತಿ ಆಯೋಜನೆ ಮಾಡಲಾಗುತ್ತದೆ ಎಂದು ಕುಷ್ಟಗಿ ಸಿಡಿಪಿಒ ಯಲ್ಲಮ್ಮ ಹಂಡಿ ತಿಳಿಸಿದ್ದಾರೆ.