ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ ಸರ್ಕಾರಿ ಶಾಲೆಯಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಎಚ್.ಹನುಮಂತಪ್ಪ ಪೂರ್ವ ಪ್ರಾಥಮಿಕ ತರಗತಿಗಳ ಆರಂಭವನ್ನು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ತೆರೆಯಲು ಮುಂದಾಗಿರುವ ಸರ್ಕಾರದ ನಿರ್ಧಾರ ಸಂತೋಷ ತಂದಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಎಚ್.ಹನುಮಂತಪ್ಪ ತಿಳಿಸಿದರು.ಸಿರಿಗೆರೆ ಸಮೀಪದ ಹಿರೇಕಬ್ಬಿಗೆರೆ ಗೊಲ್ಲರಹಟ್ಟಿಯಲ್ಲಿ ಆರಂಭವಾದ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಳ್ಳಿಗಳಲ್ಲಿ ಜೀವನ ಸಾಗಿಸುತ್ತಿರುವ ಬಡವರಿಗೆ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣ ಗಗನ ಕುಸುಮವಾಗಿತ್ತು. ಈಗ ಹಳ್ಳಿಯ ಶಾಲೆಗಳಲ್ಲಿ ಮಕ್ಕಳಿಗೆ ಈ ಶಿಕ್ಷಣ ದೊರಕುತ್ತಿದೆ. ಪೋಷಕರು ಸರ್ಕಾರಿ ಶಾಲೆಯಲ್ಲಿನ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.ಶಿಕ್ಷಣ ನಮ್ಮ ಬದುಕಿನಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ದೇಶವನ್ನು ಹೊಸ ದಿಕ್ಕಿನ ಕಡೆಗೆ ತೆಗೆದುಕೊಂಡು ಹೋಗುವಂತಹ ಶಕ್ತಿ ಶಿಕ್ಷಣಕ್ಕೆ ಮಾತ್ರವೇ ಇದೆ. ಇದನ್ನು ಅರಿತು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಶಾಲೆಗೆ ಅಗತ್ಯವಾದ ಪೀಠೋಪಕರಣಗಳು ಹಾಗೂ ಟಿವಿ ಕೊಡಿಸುವುದಾಗಿ ಹನುಮಂತಪ್ಪ ಭರವಸೆ ನೀಡಿದರು.ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಮಾತಾನಾಡಿ, ಎಲ್‌ಕೆಜಿ, ಯುಕೆಜಿ ಕಲಿಕೆಯ ಪರಿಣಾಮದ ಸಾಧ್ಯತೆಗಳ ಬಗ್ಗೆ ವಿವರಿಸಿದರು. ಹಳ್ಳಿ ಮಕ್ಕಳಿಗೆ ಉತ್ತಮ ಕಲಿಕೆ ಸೂಕ್ತವಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯ ಹೆಚ್ಚಳ ಆಗುವುದರ ಬಗ್ಗೆ ಗ್ರಾಮಸ್ಥರಿಗೆ ತಿಳಿ ಹೇಳಿದರು.
ಮುಖ್ಯ ಶಿಕ್ಷಕಿ ಡಿ.ಎಸ್.ಕಲ್ಪನ ಹಿಂದುಳಿದ ಪ್ರದೇಶಗಳಿಗೆ ಶಿಕ್ಷಣವೇ ಅಸ್ತ್ರ. ಇಲ್ಲಿನ ಪೋಷಕರು ಕಲಿಕೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಮುಂದೆ ಬರುವ ಕಾಲಕ್ಕೆ ನಮ್ಮ ಮಕ್ಕಳು ಹೊಂದಿಕೊಳ್ಳುವ, ಸೌಕರ್ಯಗಳಿಂದ ಬದುಕಬೇಕಾದರೆ ಶಿಕ್ಷಣ ಮಾತ್ರ ಏಕೈಕ ದಾರಿ. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಶಾಲಾ ಸಮಿತಿ ಒಂದು ಹೆಜ್ಜೆ ಮುಂದೆ ಇಟ್ಟು, ಪೂರ್ವ ಪ್ರಾಥಮಿಕ ತರಗತಿಗಳು ಆರಂಭವಾಗಲು ಕಾರಣಕರ್ತರಾಗಿದ್ದೀರಿ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಬಿ.ಮಹಾಂತೇಶ್, ಖಜಾಂಚಿ ಎ.ಮಲ್ಲಿಕಾರ್ಜುನ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೇಶವಮೂರ್ತಿ, ನಿವೃತ್ತ ಮುಖ್ಯ ಶಿಕ್ಷಕ ವೀರಣ್ಣ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಉಪಸ್ಥಿತರಿದ್ದರು.