ಪಿಎಂ ವಿಶ್ವಕರ್ಮ ಯೋಜನೆಯಡಿ ₹13.5 ಕೋಟಿ ಸಾಲ ವಿತರಣೆ

| Published : Mar 05 2025, 12:32 AM IST

ಸಾರಾಂಶ

ಚಿಕ್ಕಮಗಳೂರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪಿಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯ ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಸುಮಾರು ₹13.5 ಕೋಟಿ ಸಾಲ ಸೌಲಭ್ಯ ಕಲ್ಪಿಸಿ ಆರ್ಥಿಕ ಸಬಲರಾಗಲು ಪ್ರೋತ್ಸಾಹ ನೀಡಲಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹೇಶ್ ಹೇಳಿದರು.

- ಚಿಕ್ಕಮಗಳೂರಿನಲ್ಲಿ ನಡೆದ ಕಾರ್ಯಾಗಾರ । ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಮಹೇಶ್‌ ಮಾಹಿತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪಿಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯ ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಸುಮಾರು ₹13.5 ಕೋಟಿ ಸಾಲ ಸೌಲಭ್ಯ ಕಲ್ಪಿಸಿ ಆರ್ಥಿಕ ಸಬಲರಾಗಲು ಪ್ರೋತ್ಸಾಹ ನೀಡಲಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹೇಶ್ ಹೇಳಿದರು.

ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಎಂ.ಎಸ್.ಎಂ.ಇ. ಅಭಿವೃದ್ಧಿ ಮತ್ತು ಸೌಲಭ್ಯ ಇಲಾಖೆಯಿಂದ ಮಂಗಳವಾರ ಏರ್ಪಡಿಸಿದ್ಧ ಪಿಎಂ ವಿಶ್ವಕರ್ಮ ಯೋಜನೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪೂರ್ವಿಕರ 18ಕ್ಕೂ ಹೆಚ್ಚು ಮೂಲ ಕಸುಬು ಮಾಡಿಕೊಂಡು ಬಂದಿರುವ ಜನಾಂಗಕ್ಕೆ ಪ್ರಸ್ತುತ ಆರ್ಥಿಕ ಸಹಾಯಹಸ್ತ ಇರಲಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಕೂಲಂಕಶವಾಗಿ ಪರಿಶೀಲಿಸಿ ಮೂಲ ಕಸುಬನ್ನು ಉಳಿಸುವ ನಿಟ್ಟಿನಲ್ಲಿ ವಿಶ್ವಕರ್ಮ ಯೋಜನೆ ಜಾರಿಗೆ ತಂದು ತರಬೇತಿ ನಂತರ ಆರ್ಥಿಕ ಸಹಾಯ ಧನ ಒದಗಿಸುತ್ತಿದೆ ಎಂದರು.

ಮೂಲ ಕಸುಬುದಾರರು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಹರಿಗೆ ತರಬೇತಿ ನೀಡಿ ಪ್ರಮಾಣ ಪತ್ರ ವಿತರಿಸಲಾಗುವುದು. ತದನಂತರ ಬ್ಯಾಂಕ್‌ನಿಂದ ವಾರ್ಷಿಕ ಶೇ.5ರ ಬಡ್ಡಿ ದರದಲ್ಲಿ 50 ಸಾವಿರದಿಂದ 2 ಲಕ್ಷದವರೆಗೆ ಕಸುಬಿನ ಪರಿಕರ ಖರೀದಿಸಲು ಸಾಲ ನೀಡುವುದು ಈ ಯೋಜನೆ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವವರು ಕೇಂದ್ರದ ಮುದ್ರಾ ಸೇರಿದಂತೆ ಇತರೆ ಯಾವುದೇ ಯೋಜನೆಯಲ್ಲಿ ಸಾಲ ಪಡೆದಿರಬಾರದು. ಕುಟುಂಬದ ಏಕಮಾತ್ರ ಸದಸ್ಯನಿಗೆ ಈ ಸೌಲಭ್ಯ ಅನ್ವಯ, ಸರ್ಕಾರಿ ಹುದ್ದೆ ಹೊಂದಿರುವ ವ್ಯಕ್ತಿಗೆ ಸೌಲಭ್ಯ ಲಭಿಸುವುದಿಲ್ಲ. ಸಾಲ ಪಡೆದ ಫಲಾನುಭವಿಗಳು ಸಮಯಕ್ಕೆ ಮರುಪಾವತಿಸಿದರೆ ಹೆಚ್ಚಿನ ಮೊತ್ತದಲ್ಲಿ ಸಾಲ ವಿತರಿಸಲಾಗುತ್ತದೆ ಎಂದರು.

ಎಂ.ಎಸ್.ಎಂ.ಇ. ಸಂಸ್ಥೆ ಸಹಾಯಕ ನಿರ್ದೇಶಕ ಜಿ.ನಾಗರಾಜ್ ಮಾತನಾಡಿ, ವಿಶ್ವಕರ್ಮ ಯೋಜನೆಯಲ್ಲಿ ಫಲಾನುಭವಿ ಗಳಿಗೆ ಯಾವುದೇ ಭದ್ರತೆ ಇಲ್ಲದೇ, ನಿಯಮಿತ ದಾಖಲಾತಿಗಳ ಮುಖಾಂತರ ಸಾಲ ನೀಡುವ ಉದ್ದೇಶ ಹೊಂದಲಾಗಿದೆ. ವೃತ್ತಿ ಕೌಶಲ್ಯತೆ ನಶಿಸದಂತೆ ಪ್ರಧಾನ ಮಂತ್ರಿ ಈ ಮಹತ್ವ ಪೂರ್ಣ ಯೋಜನೆ ಜಾರಿಗೊಳಿಸಿದ್ದಾರೆ ಎಂದು ಹೇಳಿದರು.

ಪಿಎಂವಿ ಯೋಜನೆ ಜಿಲ್ಲಾ ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ, ಮೂಲ ಕಸಬು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ಅನುಷ್ಟಾನಗೊಳಿಸಿದೆ. ಆದರೆ, ಕೆಲವು ಬ್ಯಾಂಕ್‌ಗಳು ಆರಂಭದಲ್ಲಿ ಒಂದು ಲಕ್ಷ ಸಾಲ ವಿತರಿಸುವ ಬದಲಾಗಿ, ಕೇವಲ 50 ಸಾವಿರ ಸಾಲ ವಿತರಿಸುತ್ತಿರುವುದು ಸರಿಯಲ್ಲ. ಕೇಂದ್ರದ ಆದೇಶನ್ವಯದಂತೆ ಬ್ಯಾಂಕ್ ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ಎಂ.ಇ. ಸಂಸ್ಥೆಯ ಜಂಟಿ ನಿರ್ದೇಶಕ ಎಂ. ಶಶಿಕುಮಾರ್ ಮಾತನಾಡಿ, ದೇಶದಾದ್ಯಂತ ಮೂಲ ಕಸುಬುದಾರರ ಜೀವನ ಭದ್ರತೆಗೆ ಕೇಂದ್ರ ಸರ್ಕಾರ ₹13 ಸಾವಿರ ಕೋಟಿ ವಿಶ್ವಕರ್ಮ ಯೋಜನೆಗೆ ಅನುದಾನ ಮೀಸಲಿಟ್ಟಿದೆ. ರಾಜ್ಯದಲ್ಲೂ ಈ ಯೋಜನೆಗೆ ಹೆಚ್ಚಿನ ಒತ್ತು ನೀಡಿ, ಮೂಲ ಕಸುಬುದಾರರಿಗೆ ಸಹಾಯಹಸ್ತ ಚಾಚಿದೆ ಎಂದರು.

ಕಾರ್ಯಕ್ರಮದಲ್ಲಿ ಪಿಎಂವಿ ಯೋಜನೆ ಜಿಲ್ಲಾ ಸದಸ್ಯ ಸಂತೋಷ್ ಕೋಟ್ಯಾನ್, ಜಿಲ್ಲಾ ಡಿಐಸಿ ಉಪ ನಿರ್ದೇಶಕ ಮಹೇಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಶಾಂತ್, ಸಿಎಸ್‌ಸಿ ಜಿಲ್ಲಾ ಸಂಯೋಜಕ ವಿಜಯಕುಮಾರ್, ಡಿಪಿಎಂಯು ರಾಕೇಶ್ ಉಪಸ್ಥಿತರಿದ್ದರು.4 ಕೆಸಿಕೆಎಂ 1ಚಿಕ್ಕಮಗಳೂರಿನ ವಿಶ್ವಕರ್ಮ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ಧ ಪಿಎಂ ವಿಶ್ವಕರ್ಮ ಯೋಜನೆ ಕಾರ್ಯಾಗಾರವನ್ನು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಮಹೇಶ್‌ ಉದ್ಘಾಟಿಸಿದರು. ಎಂ. ಶಶಿಕುಮಾರ್‌, ಪ್ರಶಾಂತ್‌, ರವೀಂದ್ರ ಬೆಳವಾಡಿ ಇದ್ದರು.