ಜಿಲ್ಲೆಯೆ ನಾಲ್ವರು ಕಾಂಗ್ರೆಸ್ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ಕೆ.ವೈ. ನಂಜೇಗೌಡ, ಕೊತ್ತೂರು ಮಂಜುನಾಥ್ ಹಾಗೂ ರೂಪಕಲಾ ಶಶಿಧರ್ ಪೈಕಿ ಕೆಜಿಎಫ್ ಶಾಸಕಿ ರೂಪಕಲಾ ಬಿಟ್ಟು ಮೂವರು ಶಾಸಕರಿಂದ ತಾಲೀಮು ಶುರುವಾಗಿದೆ.

ಕನ್ನಡಪ್ರಭ ವಾರ್ತೆ, ಬಂಗಾರಪೇಟೆ

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಗಾದಿಗೇರಲು ಸಿದ್ಧತೆಯಲ್ಲಿ ತೊಡಗಿರುವಂತೆಯೇ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಶಾಸಕರ ತಾಲೀಮು ಜೋರಾಗಿ ನಡೆಯುತ್ತಿದೆ. ಹಾಗೆಯೇ ಕೋಲಾರ ಜಿಲ್ಲೆಯ ಶಾಸಕರಿಂದ ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಲಾಬಿ ಬಿರುಸು ಪಡೆದುಕೊಂಡಿದೆ.

ಮುಂದಿನ ವಾರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದ್ದು, ಅವರ ಸಂಪುಟದಲ್ಲಿ ಸ್ಥಾನ ಪಡೆಯಲು ಜಿಲ್ಲೆಯೆ ನಾಲ್ವರು ಕಾಂಗ್ರೆಸ್ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ಕೆ.ವೈ. ನಂಜೇಗೌಡ, ಕೊತ್ತೂರು ಮಂಜುನಾಥ್ ಹಾಗೂ ರೂಪಕಲಾ ಶಶಿಧರ್ ಪೈಕಿ ಕೆಜಿಎಫ್ ಶಾಸಕಿ ರೂಪಕಲಾ ಬಿಟ್ಟು ಮೂವರು ಶಾಸಕರಿಂದ ತಾಲೀಮು ಶುರುವಾಗಿದೆ. ಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ಸಂಪುಟದಲ್ಲಿ ಯಾರಿಗೂ ಸಚಿವ ಸ್ಥಾನ ನೀಡಿಲ್ಲ, ಡಿಕೆಶಿ ಸಂಪುಟದಲ್ಲಾದರೂ ಅವಕಾಶ ನೀಡಿ ಹಿಂದುಳಿದ ಜಿಲ್ಲೆ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶಾಸಕರು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.

ಎಸ್‌ಸಿ ಕೋಟಾದಲ್ಲಿ ಮೂರು ಬಾರಿ ಶಾಸಕರಾಗಿರುವ ಎಸ್.ಎನ್. ನಾರಾಯಣಸ್ವಾಮಿಗೆ ಅವಕಾಶ ನೀಡಬೇಕು, ಸಾಮಾನ್ಯ ವರ್ಗದಿಂದ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಹಾಗೂ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂದು ಮೂವರು ಶಾಸಕರು ಇಬ್ಬರು ವಿಧಾನಪರಿಷತ್ ಸದಸ್ಯರು ಹಾಗೂ ಮಾಜಿ ಜಿಲ್ಲಾಧ್ಯಕ್ಷರು ಸಹಿ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಸಮಾಜದ ಬಲಗೈ ವರ್ಗಕ್ಕೆ ಸೇರಿರುವ ಶಾಸಕರಿಗೆ ಪಕ್ಷದಿಂದ ಇದುವರೆಗೂ ಮಾಜಿ ಸಚಿವ ದಿ. ಚನ್ನಯ್ಯ ನಂತರ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಆರೋಪವಿದೆ. ಈಗ ಶಾಸಕ ಎಸ್.ಎನ್. ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡುವ ಮೂಲಕ ಆ ಆರೋಪದಿಂದ ಮುಕ್ತರಾಗಬೇಕು ಎಂದು ಒತ್ತಾಯಿಸಿದ್ದಾರೆಲ್ಲದೆ ನಂಜೇಗೌಡ ಹಾಗೂ ಕೊತ್ತೂರು ಮಂಜುನಾಥ್‌ರಿಗೂ ಸಚಿವ ಸ್ಥಾನ ಅವಕಾಶ ನೀಡುವ ಮೂಲಕ ಕೋಲಾರ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಹಾಗೂ ಪಕ್ಷದ ಬೆಳವಣಿಗೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ವೇಳೆ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ಕೆ.ವೈ. ನಂಜೇಗೌಡ, ಎಂಎಲ್‌ಸಿ ಅನಿಲ್ ಕುಮಾರ್, ಪಕ್ಷದ ಜಿಲ್ಲಾ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ,ಹಾಗೂ ವಿ. ಆದಿನಾರಾಯಣ ಇದ್ದರು.29ಕೆಬಿಪಿಟಿ.1. ಕೋಲಾರ ಜಿಲ್ಲೆಗೆ ಮೂವರು ಸಚಿವ ಸ್ಥಾನ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾಲ್ವರು ಶಾಸಕರು ಮನವಿ ಸಲ್ಲಿಸಿದರು.