ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಹಿತದೃಷ್ಟಿಯಿಂದ ಹಾವೇರಿ ಜಿಲ್ಲೆಗೆ ಸ್ಥಳೀಯ ಶಾಸಕರನ್ನೇ ಸಚಿವರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ವಿನಂತಿಯ ಪೂರ್ವಕ ಒತ್ತಾಯಿಸಲಾಗಿದೆ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ರಾಣಿಬೆನ್ನೂರು: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಹಿತದೃಷ್ಟಿಯಿಂದ ಹಾವೇರಿ ಜಿಲ್ಲೆಗೆ ಸ್ಥಳೀಯ ಶಾಸಕರನ್ನೇ ಸಚಿವರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ವಿನಂತಿಯ ಪೂರ್ವಕ ಒತ್ತಾಯಿಸಲಾಗಿದೆ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ತಾಲೂಕಿನ ಬೆನಕನಕೊಂಡ ಗ್ರಾಮದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 136 ಶಾಸಕರು ಕಾಂಗ್ರೆಸ್‌ನಿಂದ ಚುನಾಯಿತರಾದಾಗ ಎರಡೂವರೆ ವರ್ಷಗಳ ಆನಂತರ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂದು ಆಗಲೇ ಒಪ್ಪಂದವಾಗಿತ್ತು. ಅದರಂತೆ ಇದೀಗ ಮೂರು ನಾಲ್ಕು ಬಾರಿ ಶಾಸಕರಾದ 45 ಶಾಸಕರು ಕೂಡಿಕೊಂಡು ದೆಹಲಿಗೆ ನಿಯೋಗದೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಣದೀಪ ಸುರ್ಜೆವಾಲಾ ಅವರನ್ನು ಭೇಟಿಯಾಗಿ ತಮ್ಮ ಅಹವಾಲುಗಳನ್ನು ಹೇಳಿದ್ದೇವೆ. ಆದಷ್ಟು ಶೀಘ್ರವೇ ತಮ್ಮ ಬೇಡಿಕೆ ಈಡೇರಿಸುವುದಾಗಿ ಹೈಕಮಾಂಡ್ ತಮ್ಮ ನಿಯೋಗಕ್ಕೆ ಭರವಸೆ ನೀಡಿದೆ. ಜಿಲ್ಲೆಯಲ್ಲಿ ಶ್ರೀನಿವಾಸ ಮಾನೆ, ಯು.ಬಿ. ಬಣಕಾರ, ರುದ್ರಪ್ಪ ಲಮಾಣಿ ಸೇರಿದಂತೆ ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಇದ್ದೇನೆ. ಜತೆಗೆ ನಾವುಗಳೆಲ್ಲರೂ ಹೆಚ್ಚು ಬಾರಿ ಶಾಸಕರಾಗಿದ್ದೇವೆ. ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ಸ್ಥಳೀಯ ಶಾಸಕರಲ್ಲಿ ಒಬ್ಬರಿಗೆ ಅವಕಾಶ ನೀಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಹೊರಗಿನವರನ್ನೇ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುತ್ತಿರುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಜತೆಗೆ ಅವಮಾನವೂ ಆಗುತ್ತಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿನ ಒಬ್ಬರನ್ನು ಸಚಿವರನ್ನಾಗಿ ಮಾಡಿದರೆ ಜಿಲ್ಲೆಯ ಸಮಸ್ಯೆಗಳನ್ನು ಅರಿತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದರು. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯ ಇಬ್ಬರು ಶಾಸಕರು ಸಚಿವರಾಗಿದ್ದು, ಒಬ್ಬರು ಮುಖ್ಯಮಂತ್ರಿಯಾಗಿದ್ದನ್ನು ನೆನಪಿಸಿಕೊಂಡ ಶಿವಣ್ಣನವರು, ಮುಂಬರುವ ದಿನಮಾನಗಳಲ್ಲಿ ಹಾವೇರಿ ಜಿಲ್ಲೆಗೆ ಮಂತ್ರಿ ಸ್ಥಾನ ನೀಡಲೇಬೇಕು. ಆದ್ದರಿಂದ ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲಾವಾರು, ಸಾಮಾಜಿಕ ನ್ಯಾಯ, ಹಿರಿಯರು, ಅರ್ಹತೆ, ಅಳತೆ ಮಾಡಿ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು. ನಗರದ ಹೊರವಲಯದ ಮೆಗಾ ಮಾರುಕಟ್ಟೆಯಲ್ಲಿ ವರ್ತಕರಿಗೆ ನಿವೇಶನ ಹಂಚಿಕೆಯ ಕುರಿತು ಏನೂ ತೊಂದರೆ ಇಲ್ಲ. ಬ್ಯಾಡಗಿಯ ವರ್ತಕರು ಮೆಣಸಿನಕಾಯಿ ವ್ಯಾಪಾರದ ಜತೆಗೆ ಇತರ ವ್ಯಾಪಾರ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ. ರಾಣಿಬೆನ್ನೂರು ಶಾಸಕರು ಮತ್ತು ನನ್ನ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಈಗಾಗಲೇ ಇಲ್ಲಿ ನಿವೇಶನ ಹಂಚಿಕೆ ಮಾಡಲಾಗಿದ್ದು, ಇದು ಗುಡ್ಡದಅನ್ವೇರಿ ಗ್ರಾಪಂ ವ್ಯಾಪ್ತಿಗೆ ಒಳಪಡುವುದರಿಂದ ನೋಂದಣಿ ಮಾಡಲು ಇ- ಸ್ವತ್ತಿನ ತೊಂದರೆ ಉಂಟಾಗಿದೆ. ಈ ಕುರಿತು ಇಬ್ಬರು ಶಾಸಕರು ಸೇರಿಕೊಂಡು ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು. ಬ್ಯಾಡಗಿಯಲ್ಲಿ ಚಿಲ್ಲಿ ಪಾರ್ಕ್ ನಿರ್ಮಾಣ ಮಾಡುವ ಕುರಿತು ಈ ಹಿಂದೆ ಮುಖ್ಯಮಂತ್ರಿಗಳಲ್ಲಿ ವಿನಂತಿಸಿಕೊಳ್ಳಲಾಗಿತ್ತು. ಕಾರಣಾಂತರಗಳಿಂದ ಅದು ಬಜೆಟ್‌ನಲ್ಲಿ ಬಾರದೆ ಇರುವುದು ನೋವುಂಟು ಮಾಡಿದೆ. ಈ ಕುರಿತು ಮತ್ತೊಮ್ಮೆ ಪರಿಶೀಲಿಸಿ ಚಿಲ್ಲಿ ಪಾರ್ಕ್ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.