ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಅರೇಹಳ್ಳಿ ಪಟ್ಟಣದ ಸಮೀಪದ ಸ್ಮಶಾನದ ತಿರುವಿನಲ್ಲಿ ಗುಂಡಿಬಿದ್ದ ರಸ್ತೆಗೆ ಸ್ಥಳೀಯ ಯುವಕರು ಮಣ್ಣು ತುಂಬಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಪಟ್ಟಣದ ಹೊರ ವಲಯದ ಲಿಂಗಾಪುರ ಗ್ರಾಮ ವ್ಯಾಪ್ತಿಯ ಸ್ಮಶಾನದ ತಿರುವಿನಲ್ಲಿ ಕೆಲ ತಿಂಗಳ ಹಿಂದೆ ಜೆಜೆಎಮ್ ಪೈಪ್ ಅಳವಡಿಸುವ ಕಾಮಗಾರಿಗೆ ರಸ್ತೆಯನ್ನು ಅಗೆದಿದ್ದ ಪರಿಣಾಮವಾಗಿ ರಸ್ತೆ ಮಧ್ಯ ದೊಡ್ಡ ಗಾತ್ರದ ಗುಂಡಿ ಬಿದ್ದು ದಿನನಿತ್ಯ ಸಂಚರಿಸುವ ನೂರಾರು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದಾಗ ಸಂಬಂಧಪಟ್ಟ ಇಲಾಖೆಯವರು ನಾಮ್‌ಕಾವಸ್ತೆಗೆ ಸ್ವಲ್ಪ ಮಟ್ಟಿಗೆ ಕಾಂಕ್ರೀಟ್ ತುಂಬಿಸಿ ಕೈ ತೊಳೆದು ಕೊಂಡಿದ್ದರು. ಇದಾದ ನಂತರವೂ ಗುಂಡಿಗಳು ಮಾತ್ರ ಹಾಗೆಯೇ ಇದ್ದವು. ಗುಂಡಿ ಬಿದ್ದ ರಸ್ತೆಯ ಅವ್ಯವಸ್ಥೆಯನ್ನು ಮನಗಂಡ ಪಟ್ಟಣದ ಪುಟ್ಟರಾಜು, ವಿರಾಜು ಹಾಗೂ ರುದ್ರೇಶ್ ಎಂಬುವರು ತಿರುವಿನಲ್ಲಿ ಅಪೂರ್ಣವಾಗಿದ್ದ ಗುಂಡಿಗೆ ಹಾಗೂ ರಸ್ತೆಯ ಹಲವೆಡೆ ದೊಡ್ಡ ಗಾತ್ರದ ಗುಂಡಿಗೆ ಮಣ್ಣು ತುಂಬಿಸಿ ಸಮತಟ್ಟು ಮಾಡಿದ್ದು ವಾಹನ ಸವಾರರು ತುಸು ನಿಟ್ಟುಸಿರು ಬಿಡುವಂತಾಗಿದೆ.ಬೇಲೂರಿನಿಂದ ಸಕಲೇಶಪುರಕ್ಕೆ ತೆರಳುವ ರಸ್ತೆಯ ಮಧ್ಯಂತರದಲ್ಲಿರುವ ಅರೇಹಳ್ಳಿ ಪಟ್ಟಣದ ಹತ್ತಿರ ಈ ಹಿಂದೆ ಸುಸ್ಥಿತಿಯಲ್ಲಿದ್ದ ರಸ್ತೆಯ ಹಲವೆಡೆ ಇದೀಗ ಗುಂಡಿ ಬಿದ್ದು ವಾಹನ ಸವಾರರ ಸಂಚಾರಕ್ಕೆ ಸಂಚಕಾರ ತರುವಂತಿದೆ. ಅಲ್ಲದೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ನೂರಾರು ವಾಹನ ಸವಾರರು ಚಲಿಸುವ ರಸ್ತೆಯ ಗುಂಡಿಗಳಿಗೆ ಮಣ್ಣು ತುಂಬಿಸಿ ತಾತ್ಕಾಲಿಕ ಪರಿಹಾರ ಒದಗಿಸಿದ ಯುವಕರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.