ಈ ಹಿಂದೆ ಶಾಸಕ ಕೊತ್ತೂರು ಮಂಜುನಾಥ್ ಅವರು ಗುದ್ದಲಿ ಪೂಜೆ ನಡೆಸಲು ಮುಂದಾಗಿದ್ದ ಸಂದರ್ಭದಲ್ಲೂ ಸ್ಥಳೀಯರು, ದಲಿತ ಸಮುದಾಯದವರು ವಿರೋಧ ವ್ಯಕ್ತಪಡಿಸಿದರು.

ಶಾಸಕ ಕೊತ್ತೂರು ಮಂಜುನಾಥ್ ಹಠಮಾರಿ ಧೋರಣೆ ಖಂಡಿಸಿ ದಲಿತ ಮುಖಂಡರಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಕೋಲಾರ

ನಗರದ ಪಿಸಿ ಬಡಾವಣೆಯಲ್ಲಿರುವ ದಲಿತರ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯ ನಿವಾಸಿಗಳು ಸ್ಮಶಾನದಲ್ಲಿ ನಗರಸಭೆ ನಾಮನಿರ್ದೇಶನ ಸದಸ್ಯ ಸುರೇಶ್ ಕುಮಾರ್, ಗಣೇಶ್, ಮಹೇಶ್, ಮಂಜುನಾಥ್, ಚಿನ್ನ ನೇತೃತ್ವದಲ್ಲಿ ಅಂಬೇಡ್ಕರ್ ಭಾವಚಿತ್ರವಿಟ್ಟುಕೊಂಡು ತಮಟೆ ಬಾರಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ನಗರದ ಪಿ.ಸಿ.ಬಡಾವಣೆಯಲ್ಲಿರುವ ಈ ಸ್ಮಶಾನ ದಲಿತರದ್ದಾಗಿದೆ, ದಲಿತರಲ್ಲಿ ಮೃತದೇಹವನ್ನು ಸುಡುವ ಸಂಪ್ರದಾಯವೂ ಇಲ್ಲ, ಆದರೂ ಇಲ್ಲೇ ಚಿತಾಗಾರ ನಿರ್ಮಿಸುವ ಹಠ ಏಕೆ ಎಂದು ಪ್ರಶ್ನಿಸಿದರು.

ಈ ಹಿಂದೆ ಶಾಸಕ ಕೊತ್ತೂರು ಮಂಜುನಾಥ್ ಅವರು ಗುದ್ದಲಿ ಪೂಜೆ ನಡೆಸಲು ಮುಂದಾಗಿದ್ದ ಸಂದರ್ಭದಲ್ಲೂ ಸ್ಥಳೀಯರು, ದಲಿತ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಶಾಸಕರು ಸ್ಥಳಾಂತರ ಮಾಡುವ ಬಗ್ಗೆ ಭರವಸೆ ನೀಡಿದ್ದರು ಎಂದು ತಿಳಿಸಿದರು.

ಆದರೆ ಇದೀಗ ದೌರ್ಜನ್ಯದಿಂದ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದ ಅವರು, ಜಾತಿಯ ಪ್ರಮಾಣ ಪತ್ರ ಕಸಿದ ಶಾಸಕ ಕೊತ್ತೂರು ಮಂಜುನಾಥ್ ಇದೀಗ ದಲಿತರ ಸ್ಮಶಾನ ಕದಿಯಲು ಬಂದಿದ್ದಾರೆ. ಚಿತಾಗಾರ ನಿರ್ಮಿಸುವ ಉದ್ದೇಶ ಕೈಬಿಡದಿದ್ದಲ್ಲಿ ದಲಿತ ಸಂಘಟನೆಗಳ ಜತೆಗೂಡಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ದಲಿತರ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರದ ಅಗತ್ಯವಿಲ್ಲ. ಜತೆಗೆ ಪಕ್ಕದಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನವೂ ಇದ್ದು, ಇಲ್ಲಿ ವ್ಯಾಯಾಮ ಮಾಡಲು ನಿತ್ಯ ಸಾವಿರಾರು ಮಂದಿ ವೃದ್ದರು, ಮಕ್ಕಳು ಬರುತ್ತಾರೆ ಇಂತಹ ಜಾಗದಲ್ಲೇ ಇಂತಹ ಚಿತಾಗಾರದ ಅಗತ್ಯವಿದೆಯೇ ಎಂದು ಕಿಡಿಕಾರಿದರು.

ಈ ಸ್ಮಶಾನದಲ್ಲಿ ಇರುವ ಜಾಗವೂ ಕಡಿಮೆ, ಈ ಹಿನ್ನೆಲೆ ವಿದ್ಯುತ್ ಚಿತಾಗಾರ ನಿರ್ಮಾಣ ಬೇಡ ಎಂದು ಪ್ರತಿಭಟನೆ ನಡೆಸುತ್ತಿರುವ ನಿವಾಸಿಗಳು, ಕೂಡಲೇ ಕಾಮಗಾರಿ ನಿಲ್ಲಿಸಿ ಎಂದು ಘೋಷಣೆ ಕೂಗಿದರು.

ಈ ಸ್ಮಶಾನದ ಪಕ್ಕದಲ್ಲೇ ಜನ ವಸತಿಗಳಿವೆ, ಸೂಕ್ತ ರಸ್ತೆ ಸಂಪರ್ಕವೂ ಇಲ್ಲ ಎಂದು ತಿಳಿಸಿ, ಈಗಾಗಲೇ ಹಿಂದೂ ರುದ್ರಭೂಮಿಯಲ್ಲಿ ಅನಿಲಚಿತಾಗಾರ ವಿದ್ದು, ಅದು ಕೆಟ್ಟಿದೆ. ಅಲ್ಲಿಯೇ ಅಗತ್ಯ ಮೂಲ ಸೌಕರ್ಯಗಳಿರುವುದರಿಂದ ವಿದ್ಯುತ್ ಚಿತಾಗಾರವನ್ನು ಅಲ್ಲೇ ನಿರ್ಮಿಸಲಿ ಎಂದು ಆಗ್ರಹಿಸಿದರು.

ಇಲ್ಲಿ ಸಮರ್ಪಕ ರಸ್ತೆಯೂ ಇಲ್ಲ, ಇದೇ ಜಾಗದಲ್ಲೇ ಚಿತಾಗಾರ ನಿರ್ಮಿಸುವ ಹಠವೇಕೆ ಎಂದು ಪ್ರಶ್ನಿಸಿದ ಅವರು, ದಲಿತರ ಸ್ಮಶಾನದಲ್ಲಿ ಇಂತಹ ಒತ್ತುವರಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಶಾಸಕರಿಗೆ ನಿಜಕ್ಕೂ ಕೋಲಾರ ನಗರಕ್ಕೆ ಒಳ್ಳೆಯದು ಮಾಡಬೇಕಿದ್ದರೆ ಅನೇಕ ಕೆಲಸಗಳು ಬಾಕಿ ಇವೆ, ಅಗತ್ಯವಿರುವ ಕಡೆ ಸ್ಮಶಾನಗಳಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಿ ಅಂತಹ ಸಂಪ್ರದಾಯ ಇರುವವರಿಗೆ ನೆರವಾಗಲಿ, ಅದು ಬಿಟ್ಟು ವಿದ್ಯುತ್ ಚಿತಾಗಾರಕ್ಕೆ ದಲಿತರ ಸ್ಮಶಾನವೇ ಬೇಕೆ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಗಂಗಾಧರ್, ಅನಿಲ್,ನಾರಾಯಣಸ್ವಾಮಿ, ಮಹೇಶ್, ರಮೇಶ್, ವೆಂಕಟೇಶ್ ಮತ್ತಿತರರಿದ್ದರು.