ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಸ್ತೆ ಒತ್ತುವರಿ ತೆರವುಗೊಳಿಸಲು ತೆರಳಿದ ನಗರಸಭೆ ಅಧಿಕಾರಿಗಳು ಸ್ಥಳೀಯರ ವಿರೋಧದಿಂದಾಗಿ ವಾಪಸ್ಸಾದ ಘಟನೆ ನಗರದ ಹಾಲಹಳ್ಳಿ ಬಡಾವಣೆಯಲ್ಲಿ ನಡೆದಿದೆ.ನಗರಸಭೆ 21ನೇ ವಾರ್ಡಿಗೆ ಸೇರಿದ ಹಾಲಹಳ್ಳಿ ಬಡಾವಣೆಯ 4ನೇ ಕ್ರಾಸ್‌ನಲ್ಲಿ ರಸ್ತೆಯಲ್ಲೇ ಮನೆ ನಿರ್ಮಿಸಿಕೊಂಡಿರುವುದನ್ನು ತೆರವುಗೊಳಿಸಲು ಯತ್ನಿಸಿದಾಗ ಸ್ಥಳೀಯರ ವಿರೋಧದಿಂದ ನಗರಸಭೆ ಅಧಿಕಾರಿಗಳು ವಾಪಸ್ಸಾಗಿದ್ದಾರೆ.
ಈ ಬಗ್ಗೆ ಸ್ಥಳೀಯ ನಗರಸಭಾ ಸದಸ್ಯ ರಸ್ತೆ ತೆರವಿಗಾಗಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆಂದು ಹೇಳಲಾಗಿದೆ. ಮನೆ ಮಾಲೀಕರಿಗೆ ಹಲವು ನೋಟಿಸ್‌ಗಳನ್ನೂ ನೀಡಲಾಗಿದೆ. ಆದರೂ ತೆರವು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಇಂದು ನಗರಸಭೆ ಅಧಿಕಾರಿಗಳು ಜೆಸಿಬಿ ಹಾಗೂ ಪೊಲೀಸರ ಸಹಾಯದೊಂದಿಗೆ ತೆರವಿಗೆ ಮುಂದಾದರು.ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು, ಈ ರಸ್ತೆ 21 ಅಡಿ ಇದೆ. ಇದೇ ಬಡಾವಣೆಯ ಬೇರೆ ಬೇರೆ ರಸ್ತೆಗಳಲ್ಲಿ ಕೇವಲ 14, 12, 11 ಅಡಿಗಳಷ್ಟು ಇದೆ. ಅದನ್ನು ಮೊದಲು ತೆರವುಗೊಳಿಸಿ, ನಂತರ ನಮ್ಮ ರಸ್ತೆ ತೆರವು ಮಾಡಿ ಎಂದು ನಗರಸಭೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಆದರೂ ಒತ್ತುವರಿ ತೆರವಿಗೆ ಮುಂದಾದಾಗ ಸ್ಥಳೀಯರು ರಸ್ತೆಯಲ್ಲೇ ಜೆಸಿಬಿಗೆ ಅಡ್ಡಲಾಗಿ ಮಲಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಮಾಜಿ ಹಾಗೂ ಹಾಲಿ ಸದಸ್ಯರ ನಡುವಿನ ರಾಜಕೀಯ ದ್ವೇಷಕ್ಕೆ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ, ಹಾಲಿ ಸದಸ್ಯ ಎಚ್.ಎಂ. ರವಿ ರಾಜಕೀಯ ದ್ವೇಷಕ್ಕಾಗಿ ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಕಿಡಿಕಾರಿದರು.ಹಾಲಹಳ್ಳಿ ಅಷ್ಟೇ ಅಲ್ಲದೆ ಹೊಸಹಳ್ಳಿ ಬಡಾವಣೆಯಲ್ಲೂ ಸಹ ಚಿಕ್ಕ ಚಿಕ್ಕ ರಸ್ತೆಗಳಿವೆ. ಅವುಗಳನ್ನೂ ಸಹ ತೆರವುಗೊಳಿಸಿ, ರಸ್ತೆ ಅಭಿವೃದ್ಧಿ ಮಾಡಲಿ. ಅದು ಬಿಟ್ಟು ಇರುವ ರಸ್ತೆಯನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವಾದರೂ ಏನಿದೆ. ಇಲ್ಲಿ ದೊಡ್ಡ ಪ್ರಮಾಣದ ವಾಹನಗಳ ಸಂಚಾರವಿಲ್ಲ. ಇಲ್ಲವೇ ಹೆದ್ದಾರಿಗೆ ಸಂಪರ್ಕವೂ ಇಲ್ಲ. ಹೀಗಿರುವಾಗ ಒಂದೆರಡು ಅಡಿಗಳಷ್ಟು ರಸ್ತೆ ಬದಿಯಲ್ಲಿ ಕಾಂಪೌಂಡ್ ಅಥವಾ ಮನೆ ಗೋಡೆಯನ್ನು ಹಲವು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ಈಗ ರಾಜಕೀಯ ನಡೆಸುವುದು ಸರಿಯಲ್ಲ ಎಂದು ದೂರಿದರು.
ಹೆಚ್ಚಿನ ಪೊಲೀಸ್ ಭದ್ರತೆ ಇಲ್ಲದ ಕಾರಣ ಈ ತೆರವು ಕಾರ್‍ಯಾಚರಣೆ ವಿಫಲವಾಗಿದೆ. ಮೂರು ದಿನಗಳ ನಂತರ ಹೆಚ್ಚಿನ ಪೊಲೀಸ್ ಭದ್ರತೆಯೊಂದಿಗೆ ರಸ್ತೆ ಒತ್ತುವರಿ ತೆರವು ಮಾಡಲಾಗುವುದು ಎಂದು ನಗರಸಭೆ ಸದಸ್ಯ ಎಚ್.ಎಂ.ರವಿ ತಿಳಿಸಿದರು.ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ 7 ಜನರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿಯೂ ಹೇಳಿದರು.
ಪ್ರತಿಭಟನೆಯಲ್ಲಿ ಬಡಾವಣೆ ನಿವಾಸಿಗಳಾದ ಜೆಡಿಎಸ್ ಮುಖಂಡ ಶಂಕರ್, ಕುಟುಂಬಸ್ಥರಾದ ಗಿರೀಶ್, ಸಂತೋಷ, ಕಾಂಬೆಗೌಡ, ನರಸಿಂಹಯ್ಯ , ಮಹೇಶ್, ಪುಷ್ಪ , ರಾಧಾ, ಚೆನ್ನಯ್ಯ ಸೇರಿದಂತೆ ಹಲವರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))