7 ಅಂತಸ್ತಿನ ಕಟ್ಟಡ ತೆರವಿಗೆ ಬಂದ ಬಿಬಿಎಂಪಿ ವಿರುದ್ಧ ಸ್ಥಳೀಯರ ಧರಣಿ

| Published : Jul 11 2024, 01:34 AM IST

7 ಅಂತಸ್ತಿನ ಕಟ್ಟಡ ತೆರವಿಗೆ ಬಂದ ಬಿಬಿಎಂಪಿ ವಿರುದ್ಧ ಸ್ಥಳೀಯರ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮವಾಗಿ 7 ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ ಎಂದು ಬೆಂಗಳೂರಿನ ದಾಸರಹಳ್ಲಿ ಕ್ಷೇತ್ರದ ಎಚ್‌ಎಂಟಿ ಲೇಔಟ್‌ನಲ್ಲಿ ಕಟ್ಟಡ ತೆರವಿಗೆ ಬಂದ ಪಾಲಿಕೆ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಕಾನೂನು ಉಲ್ಲಂಘಿಸಿ ಅಕ್ರಮವಾಗಿ 7 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಬಿಬಿಎಂಪಿ ವತಿಯಿಂದ ಕಟ್ಟಡ ಕೆಡವಲು ಮುಂದಾದ ವೇಳೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಚೊಕ್ಕಸಂದ್ರ ವಾರ್ಡ್ ಎಚ್‌ಎಂಟಿ ಬಡಾವಣೆಯಲ್ಲಿ ನಡೆಯಿತು.

ಎಚ್‌ಎಂಟಿ ಬಡಾವಣೆಯಲ್ಲಿ ನಿರ್ಮಿಸಿರುವ ಕಟ್ಟಡ ಅಕ್ರಮವಾಗಿದೆ ಎಂದು ಆರೋಪಿಸಿ ಬಿಬಿಎಂಪಿ ಅಧಿಕಾರಿಗಳು ತೆರವು ಕಾರ್ಯಕ್ಕಾಗಿ ಆಗಮಿಸಿದ್ದರು. ಈ ವೇಳೆ ಅನುಮತಿ ಪಡೆದು ಕಟ್ಟಡ ಕಟ್ಟಿದ್ದರೂ, ಈಗ ಅಕ್ರಮ ಎಂದು ಅಧಿಕಾರಿಗಳು ಹೇಳುತ್ತಿರುವುದಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಡಿಸಿದರು.

ದಾಸರಹಳ್ಳಿ ಕ್ಷೇತ್ರದಲ್ಲಿ ಅನೇಕ ವಾಣಿಜ್ಯ ಕಟ್ಟಡ, ಸರ್ಕಾರಿ ಜಾಗ ಕಬಳಿಕೆ, ರಸ್ತೆ ಒತ್ತುವರಿ, ರಾಜಕಾಲುವೆ ಒತ್ತುವರಿ, ಅಕ್ರಮ ಕಟ್ಟಡಗಳಿವೆ. ಅವುಗಳನ್ನು ತೆರವುಗೊಳಿಸದೇ ಬಡ ಹಾಗೂ ಮಧ್ಯಮ ವರ್ಗದ ಜನರು ವಾಸಮಾಡುವ ಮನೆಗಳನ್ನು ತೆರವು ಮಾಡುವುದು ಸರಿಯಾದ ಕ್ರಮವಲ್ಲ ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಬಿಬಿಎಂಪಿ ಅಧಿಕಾರಗಳನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು. ಮೊದಲು ಸರ್ಕಾರಿ ಒತ್ತುವರಿ ತೆರವುಗೊಳಿಸಿ. ಅದನ್ನು ಬಿಟ್ಟು ಸ್ವಂತ ಕಟ್ಟಡ ನಿರ್ಮಾಣ ಮಾಡುತ್ತಿರುವವರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಈ ಕೂಡಲೇ ವಲಯ ಅಪರ ಅಯುಕ್ತ ಬಾಲಶೇಖರ್ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟುಹಿಡಿದು ಪ್ರತಿಭಟನೆ ಮಾಡಿದರು.

ಕಟ್ಟಡ ಕಟ್ಟುವಾಗ ಸುಮ್ಮನಿದ್ದು, ಈಗ ಏಕಾಏಕಿ ತೆರವಿಗೆ ಮುಂದಾಗಿರುವುದು ಸರಿಯಲ್ಲ. ಈ ಪ್ರದೇಶದಲ್ಲಿ ನೂರಾರು ಅಕ್ರಮ ಕಟ್ಟಡಗಳಿವೆ. ಆದರೆ ಇದನ್ನೇ ಗುರಿಯಾಗಿಸಿಕೊಂಡು ತೆರವುಗೊಳಿಸುವುದು ಎಷ್ಟು ಸರಿ? ಅಕ್ರಮ ಕಟ್ಟಡ ತೆರವುಗೊಳಿಸುವುದಾದರೆ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಲಿ, ಮಾಹಿತಿ ಕೇಳೋಣವೆಂದರೆ ಅಪರ ಆಯುಕ್ತ ಬಾಲಶೇಖರ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅವರ ಕಚೇರಿಗೆ ಭೇಟಿ ನೀಡಿದರೂ ಅವರ ಅಲ್ಲಿ ಇರಲಿಲ್ಲ ಎಂದು ಜನರು ದೂರಿದರು.ಅಧಿಕಾರಿಗಳ ಬೇಜವಾಬ್ದಾರಿ: ಮುನಿರಾಜು

ದಾಸರಹಳ್ಳಿಯಲ್ಲಿ ಹಲವಾರು ಅನಧಿಕೃತ ಕಟ್ಟಡಗಳಿವೆ. ಶಾಸಕನಾಗಿ ಬಂದ ಮೇಲೆ ಇದರ ಬಗ್ಗೆ ವಲಯ ಆಯುಕ್ತರ ಗಮನಕ್ಕೆ ತಂದಿದ್ದೆ, ಆದರೆ ಅಪರ ಆಯುಕ್ತ, ಅಧಿಕಾರಗಳ ಬೇಜವಾಬ್ದಾರಿತನದಿಂದ ಇದುವರೆಗೂ ತೆರವುಗೊಳಿಸಿಲ್ಲ. ಸಾಮಾನ್ಯ ಜನರು ಕಟ್ಟಡ ನಿರ್ಮಾಣದ ವೇಳೆ ಅನುಮತಿ ಪಡೆದಿಲ್ಲ ಎಂಬ ಕಾರಣ ನೆಪವೊಡ್ಡಿ ಕಟ್ಟಡ ಕೆಡವಲು ಆದೇಶಿಸಿರುವ ಅಧಿಕಾರಿಗಳ ನಡೆ ನಿಜಕ್ಕೂ ಅನುಮಾನ ತಂದಿದೆ. ಇದು ಸಾರ್ವಜನಿಕ ವಲಯದಲ್ಲಿ ಕೂಡ ಅಕ್ರೋಶಕ್ಕೆ ಕಾರಣವಾಗಿದೆ ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು.

ಹೆಸರಘಟ್ಟ ಮುಖ್ಯರಸ್ತೆಯ ಬಿಬಿಎಂಪಿ ಪಕ್ಕದಲ್ಲೇ 6 ಅಂತಸ್ತಿನ ಅಕ್ರಮ ಕಟ್ಟಡ ನಿರ್ಮಾಣಗೊಂಡಿದೆ. ಗಮನಕ್ಕೆ ತಂದರೂ ಇದುವರೆಗೂ ತೆರವುಗೊಳಿಸಿಲ್ಲ ಎಂದು ದೂರಿದರು.