ಹುಲಿದೇವರವಾಡದ ಬಳಿ ಏಕಾಏಕಿ ರಸ್ತೆ ಅಗಲೀಕರಣಕ್ಕೆ ಸ್ಥಳೀಯರ ವಿರೋಧ

| Published : Nov 27 2024, 01:06 AM IST

ಸಾರಾಂಶ

ಮೇಲ್ಸೇತುವೆ ಅಥವಾ ಅಂಡರ್‌ ಪಾಸ್ ನಿರ್ಮಾಣ ಮಾಡುವವರೆಗೆ ರಸ್ತೆ ಕೆಲಸವನ್ನು ಸ್ಥಗಿತಗೊಳಿಸಲು ಸ್ಥಳೀಯರು ಆಗ್ರಹಿಸಿದರು.

ಅಂಕೋಲಾ: ಕಳೆದ ಹಲವು ವರ್ಷಗಳಿಂದ ಹುಲಿದೇವರವಾಡದ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನಕ್ಕೆ ತೆರಳುವ ಚತುಷ್ಪಥ ಹೆದ್ದಾರಿಯಲ್ಲಿ ಏಕಾಏಕಿ ರಸ್ತೆ ಅಗಲೀಕರಣ ಮಾಡುವ ನಿರ್ಧಾರ ಖಂಡಿಸಿ ಹಾಗೂ ಮೇಲ್ಸೇತುವೆ ಅಥವಾ ಅಂಡರ್‌ ಪಾಸ್ ನಿರ್ಮಿಸುವವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಮಂಗಳವಾರ ನಾಗರಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು.

ಸ್ಥಳಕ್ಕಾಗಮಿಸಿದ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಪ್ರೊಜೆಕ್ಟ್ ಡೈರೆಕ್ಟರ್ ಶಿವಕುಮಾರ ಮಾತನಾಡಿ, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಐಆರ್‌ಬಿ ಕಂಪನಿ ಗುತ್ತಿಗೆ ಪಡೆದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈ ಕಂಪನಿಗೆ ಹಣ ನೀಡುತ್ತಿಲ್ಲ. ಐಆರ್‌ಬಿ ಕಂಪನಿಯೇ ಕಾಮಗಾರಿಯನ್ನು ನಿರ್ವಹಣೆ ಮಾಡಿ ಟೋಲ್ ಸುಂಕದಿಂದ ಹಣವನ್ನು ಭರಣ ಮಾಡಿಕೊಳ್ಳಬೇಕಿದೆ. ಸಾರ್ವಜನಿಕರ ಹಣ, ಸಾರ್ವಜನಿಕರ ಕೆಲಸಕ್ಕೆ ವಿನಿಯೋಗವಾಗುತ್ತಿದೆ. ಈ ಕಾಮಗಾರಿಗಳನ್ನು ಪೂರೈಸಬೇಕಾದುದ್ದು ಐಆರ್‌ಬಿ ಕಂಪನಿಯ ಜವಾಬ್ದಾರಿ ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ ಮಾತನಾಡಿ, 14 ವರ್ಷ ವನವಾಸದಂತೆ ಸಾರ್ವಜನಿಕರು ಸಮಸ್ಯೆ ಅನುಭವಿಸಿದರೂ ಕ್ಯಾರೆ ಎನ್ನದ ಐಆರ್‌ಬಿ ಕಂಪನಿ ಕೆಲಸವನ್ನು ಕುಂಟುತ್ತಾ- ತೆವಳುತ್ತಾ ಮಾಡುತ್ತಲೇ ಇದೆ. ಇದು ಪೂರ್ತಿಗೊಳ್ಳುವುದು ಯಾವಾಗ? ಇಲ್ಲಿಯ ಪ್ರಯಾಣಿಕರ ವನವಾಸ ಈ 14 ವರ್ಷದಲ್ಲಾದರೂ ಪೂರ್ತಿಗೊಳ್ಳುತ್ತದೆಯೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಮೇಲ್ಸೇತುವೆ ಅಥವಾ ಅಂಡರ್‌ ಪಾಸ್ ನಿರ್ಮಾಣ ಮಾಡುವವರೆಗೆ ರಸ್ತೆ ಕೆಲಸವನ್ನು ಸ್ಥಗಿತಗೊಳಿಸಿ. ಸಂಬಂಧಿಸಿದ ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಸ್ಥಳೀಯ ಪ್ರತಿನಿಧಿಗಳು ಮತ್ತು ಪ್ರಮುಖರು ಸಭೆ ನಡೆಸಿ ನಮಗೆ ವ್ಯವಸ್ಥೆಯನ್ನು ಕಲ್ಪಿಸಿ ಎಂದು ಸಾರ್ವಜನಿಕರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ವಿಜುಪಿಟರ ಪಿಳ್ಳೆ, ಪುರಸಭಾ ಸದಸ್ಯ ಸಬೀರ ಶೇಖ, ಅಶೋಕ ಶೆಡಗೇರಿ, ಐಆರ್‌ಬಿ ಕಂಪನಿಯ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಶಿರಸಿ: ತಾಲೂಕಿನ ಹುತ್ಗಾರದಲ್ಲಿ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕಳೆದ ಒಂದು ವಾರದ ಹಿಂದೆ ಹುತಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಪರಾರಿಯಾಗಿದ್ದ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ನಾಪತ್ತೆಯಾದ ಆರೋಪಿ ಕೃಷ್ಣ ಮೊಗೇರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಇನ್ಸಪೆಕ್ಟರ್ ಸೀತಾರಾಮ್ ಪಿ. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಪ್ರತಾಪ ಪಿಎಸ್‌ಐ ದಯಾನಂದ ಜೋಗಳೇಕರ, ಸಿಬ್ಬಂದಿಗಳಾದ ಸಂತೋಷ್ ಶೆಟ್ಟಿ, ಗಣಪತಿ ಪಟಗಾರ, ರವಸಾಹೇಬ್ ಕಿತ್ತೂರು, ದಯಾನಂದ ಹುಂಡೇಕರ್ ಪಾಲ್ಗೊಂಡಿದ್ದರು.