ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಅನಧಿಕೃತವಾಗಿ ನಿರ್ಮಿಸಿದ್ದ 36 ಮನೆಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಇಲ್ಲಿನ ಎಸ್.ಎ.ರವೀಂದ್ರನಾಥ ಬಡಾವಣೆಯಲ್ಲಿ ತೆರವುಗೊಳಿಸಿದ್ದನ್ನು ಎಸ್.ಎ.ರವೀಂದ್ರನಾಥ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ಸ್ವಾಗತಿಸಿದೆ.ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸಮಿತಿಯ ಎನ್.ಸಿದ್ದರಾಮಪ್ಪ, ಎಸ್.ಆರ್.ಸೋಮಶೇಖರಪ್ಪ, ಇಲ್ಲಿನ ಎಸ್.ಎ.ರವೀಂದ್ರನಾಥ ಬಡಾವಣೆಯಲ್ಲಿ ಪಾರ್ಕ್ ಜಾಗದಲ್ಲಿ ನಿರ್ಮಿಸಿದ್ದ 36 ಮನೆಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ತಾಲೂಕು ಆಡಳಿತ ತೆರವುಗೊಳಿಸಿದ್ದು ಸ್ವಾಗತಾರ್ಹ ಎಂದರು.
ಹೈಕೋರ್ಟ್ ಆದೇಶದಂತೆ ಪಾಲಿಕೆಗೆ ಪಾರ್ಕ್ ಜಾಗದಲ್ಲಿ 36 ಮನೆಗಳನ್ನು ಕಟ್ಟಿಕೊಂಡಿದ್ದು, ಅದನ್ನು ಎಸ್.ಎ.ರವೀಂದ್ರನಾಥ ಬಡಾವಣೆಯ ನಿವಾಸಿಗಳಾದ ಇಂದ್ರಮ್ಮ, ಜಗದೀಶ, ನರೇಶ, ಹನುಮಂತಪ್ಪ, ರುದ್ರಮ್ಮ ಸೇರಿ 2018ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದು, ಕಡೆಗೂ ಸ್ಥಳೀಯ ನಿವಾಸಿಗಳ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ತಿಳಿಸಿದರು.ಮನೆಗಳ ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾದ 36 ಮನೆಗಳ ವಾಸಿಗಳಿಗೆ ಪಾಲಿಕೆ, ತಾಲೂಕು ಆಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ. ಪಾರ್ಕ್ ಜಾಗವಾಗಿದ್ದರೂ ಸಹ ಹಿಂದೆ ಸ್ಥಳೀಯ ಪಾಲಿಕೆ ಸದಸ್ಯರಾಗಿದ್ದ ಶೈಲಜಾ ನಾಗರಾಜ, ನಂತರ ಶೈಲಜಾ ಪತಿ ಪಾಮೇನಹಳ್ಳಿ ನಾಗರಾಜ ಸಹ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದ ಬಡವರಿಗೆ ದಿಕ್ಕು ತಪ್ಪಿಸಿದ್ದರು. ಇಂತಹವರ ಮಾತುಗಳನ್ನು ಕೇಳಿ, ಅಲ್ಲಿ ಬಡವರು ಮನೆ ಕಟ್ಟಿಕೊಂಡಿದ್ದರು ಎಂದು ದೂರಿದರು.
ಪಾಮೇನಹಳ್ಳಿ ನಾಗರಾಜ ಪಾಲಿಕೆ ಸ್ಥಾಯಿ ಸಮಿತಿಯಿಂದ ಆದೇಶ ಮಾಡಿಸಿ, ಅಕ್ರಮ ಸಕ್ರಮ ಯೋಜನೆಯಡಿ ಹಕ್ಕುಪತ್ರ ಕೊಟ್ಟು, ಕಾಪಾಡದೇ ಅಥವಾ ಕಂದಾಯ ಕಾಯ್ದೆ ವಿಧಿ 94ರ ಅಡಿಯಲ್ಲಿ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ನಿವೇಶನ ಅಥವಾ ಮನೆ ನೀಡದೇ, ವಿವೇಚನೆಯಿಂದ ಆಶ್ರಯ ಯೋಜನೆಯಲ್ಲಾದರೂ ವಸತಿ ಕಲ್ಪಿಸದೇ ಕೈಬಿಟ್ಟಿದ್ದರಿಂದ 36 ಕುಟುಂಬ ಸದಸ್ಯರೂ ಇಂದು ಸಂಕಷ್ಟ ಅನುಭವಿಸುವಂತಾಗಿದೆ. ಸರ್ಕಾರ ಈ ಕುಟುಂಬಗಳಿಗೆ ಸೂರು ಕಲ್ಪಿಸಲಿ ಎಂದು ಆಗ್ರಹಿಸಿದರು.ಪಾಲಿಕೆ ಪಾರ್ಕ್ ಜಾಗವೆಂಬ ಸತ್ಯ ಗೊತ್ತಿದ್ದರೂ ಅಲ್ಲಿನ ಮಾಜಿ ಪಾಲಿಕೆ ಸದಸ್ಯರು ಅಕ್ರಮವಾಗಿ ಮನೆ ಕಟ್ಟಿಕೊಳ್ಳುವಂತೆ ಮಾಡಿದ್ದರು. ನ್ಯಾಯಾಲಯದ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ 2024ರಲ್ಲೇ ಅಕ್ರಮ ಮನೆಗಳ ತೆರವುಗೊಳಿಸುವಂತೆ ನ್ಯಾಯಾಲಯದಿಂದ ಆದೇಶವಾಗಿದೆ. ಆದರೂ, ವಿಳಂಬ ನೀತಿ ಅನುಸರಿಸಿ, ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹೇಳಲಾಗಿತ್ತು. ಆದರೆ, ಯಾವುದೇ ಆಡಳಿತವೂ ಈ ಬಗ್ಗೆ ಸ್ಪಂದನೆ ತೋರಲಿಲ್ಲ ಎಂದು ಹೇಳಿದರು.
ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಮತ್ತೆ ಹೈಕೋರ್ಟ್ ಮೊರೆ ಹೋಗಿ, ನ್ಯಾಯಾಲಯದ ಆದೇಶ ಪಾಲಿಸದ ಕಾರಣ ಅಂತಹವರ ವಿರುದ್ಧ ನ್ಯಾಯಾಂಗ ನಿಂದನೆಯಡಿ ಜೈಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದರು. ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಎಚ್ಚೆತ್ತ ತಹಸೀಲ್ದಾರರು ತಮ್ಮದೇ ನೇತೃತ್ವದಲ್ಲಿ 36 ಅಕ್ರಮ ಮನೆಗಳನ್ನು ತೆರವುಗೊಳಿಸಿದ್ದಾರೆ. ಸ್ಥಳೀಯ ನಿವಾಸಿಗಳ ಪರ ಹೈಕೋರ್ಟ್ ಹಿರಿಯ ವಕೀಲ ರೇವಣ್ಣ ಬಳ್ಳಾರಿ ವಕಾಲತ್ತು ವಹಿಸಿದ್ದರು ಎಂದು ತಿಳಿಸಿದರು.ಸ್ಥಳೀಯ ನಿವಾಸಿಗಳಾದ ನಿವೃತ್ತ ಶಿಕ್ಷಕ ಬಿ.ಕರಿಬಸಪ್ಪ, ಸಿ.ಕೆ.ಶಿವಪ್ಪ, ಆರ್.ಜಗದೀಶ, ಜಿ.ಹನುಮಂತಪ್ಪ ಇತರರು ಇದ್ದರು.