ಶ್ರೀ ಕೋತಿ ಆಂಜನೇಯಸ್ವಾಮಿ ದೇಗುಲಕ್ಕೆ ಬೀಗ

| Published : Jan 11 2025, 12:48 AM IST

ಸಾರಾಂಶ

ರಾಮನಗರ: ಪಾದಚಾರಿಗಳ ಅನುಕೂಲಕ್ಕಾಗಿ ಸ್ಕ್ಯಾವಾಕ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಶ್ರೀ ವೀರಾಂಜನೇಯಸ್ವಾಮಿ ಟ್ರಸ್ಟ್‌ನ ಧೋರಣೆ ಖಂಡಿಸಿ ಗ್ರಾಮಸ್ಥರು ವೈಕುಂಠ ಏಕಾದಶಿ ದಿನವಾದ ಶುಕ್ರವಾರ ಮಂಚನಾಯಕನಹಳ್ಳಿಯಲ್ಲಿನ ಕೋತಿ ಆಂಜನೇಯಸ್ವಾಮಿ ದೇವಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದರು.

ರಾಮನಗರ: ಪಾದಚಾರಿಗಳ ಅನುಕೂಲಕ್ಕಾಗಿ ಸ್ಕ್ಯಾವಾಕ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಶ್ರೀ ವೀರಾಂಜನೇಯಸ್ವಾಮಿ ಟ್ರಸ್ಟ್‌ನ ಧೋರಣೆ ಖಂಡಿಸಿ ಗ್ರಾಮಸ್ಥರು ವೈಕುಂಠ ಏಕಾದಶಿ ದಿನವಾದ ಶುಕ್ರವಾರ ಮಂಚನಾಯಕನಹಳ್ಳಿಯಲ್ಲಿನ ಕೋತಿ ಆಂಜನೇಯಸ್ವಾಮಿ ದೇವಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದರು.

ತಾಲೂಕಿನ ಬಿಡದಿ ಹೋಬಳಿಯ ಮಂಚನಾಯ್ಕನಹಳ್ಳಿಯಲ್ಲಿರುವ ಶ್ರೀ ಕೋತಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಭಾಗ್ಯಮ್ಮ(47)ಗುರುವಾರ ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ದಾಟುವಾಗ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಭಾಗ್ಯಮ್ಮ ಮೃತಪಟ್ಟಿದ್ದರು. ಈ ಘಟನೆಯಿಂದ ರೊಚ್ಚಿಗೆದ್ದ ಮಂಚನಾಯಕನಹಳ್ಳಿ ಗ್ರಾಪಂ ವ್ಯಾಪ್ತಿಯ ವಾಜರಹಳ್ಳಿ, ಹನುಮಂತನಗರ ಸೇರಿದಂತೆ ಹಲವು ಗ್ರಾಮಗಳ ನೂರಾರು ಗ್ರಾಮಸ್ಥರು ಶುಕ್ರವಾರ ಬೆಳಗ್ಗೆ ಕೋತಿ ಆಂಜನೇಯಸ್ವಾಮಿ ದೇವಾಲಯ ಬಳಿ ಜಮಾಯಿಸಿ ಟ್ರಸ್ಟ್ ನ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗುತ್ತಾ ದೇಗುಲಕ್ಕೆ ಬೀಗ ಜಡಿಯಲು ಮುಂದಾದರು.

ಟ್ರಸ್ಟ್ ಅಧ್ಯಕ್ಷ ತಿಮ್ಮೇಗೌಡ ಮತ್ತು ದೇವಾಲಯದ ಸಿಬ್ಬಂದಿ ಪ್ರತಿರೋಧ ತೋರಿದಾಗ ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟ ನಡೆಯಿತು. ತಿಮ್ಮೇಗೌಡ ಅವರನ್ನು ಮಹಿಳೆಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇದರಿಂದ ಮುಜುಗರಕ್ಕೊಳಗಾದ ತಿಮ್ಮೇಗೌಡರು ಸ್ಥಳದಿಂದ ಹೊರಟು ಹೋದರು.

ಆನಂತರವೂ ಪ್ರತಿಭಟನೆ ಮುಂದುವರಿಸಿದ ಗ್ರಾಮಸ್ಥರು ದೇವಾಲಯದಲ್ಲಿ ಭಕ್ತರು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಪೂಜಾರಿಗಳು ಹಾಗೂ ಭಕ್ತರನ್ನು ಹೊರಕ್ಕೆ ಕಳುಹಿಸಿ ದೇವಾಲಯಕ್ಕೆ ಬೀಗ ಜಡಿದರು. ಅಲ್ಲದೆ, ಬೆಂಗಳೂರು - ಮೈಸೂರು ಸರ್ವಿಸ್ ರಸ್ತೆಯಲ್ಲಿ ವಾಹನಗಳನ್ನು ತಡೆದು ತಿಮ್ಮೇಗೌಡ, ಆಂಜನಪ್ಪ ಹಾಗೂ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಇದರಿಂದ ಸರ್ವಿಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಯಿತು. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ವಾಹನ ಸಂಚಾರ ಸುಗಮಗೊಳಿಸಿದರು.

ಕೋತಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಪಾದಚಾರಿಗಳು ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ಅಪಘಾತಗಳಾಗಿ ಸಾವು ನೋವುಗಳು ಸಂಭವಿಸುತ್ತಿವೆ. ಆದ ಕಾರಣ ಮಾಜಿ ಸಂಸದ ಡಿ.ಕೆ.ಸುರೇಶ್ ದೇವಾಲಯದ ಬಳಿ ಸ್ಕೈವಾಕ್ ನಿರ್ಮಾಣಕ್ಕೆ ಮಂಜೂರಾತಿ ಕೊಡಿಸಿದರೆ, ಶಾಸಕ ಬಾಲಕೃಷ್ಣ 2024ರ ಆಗಸ್ಟ್ ನಲ್ಲಿ ಸ್ಥಳ ಗುರುತಿಸಿದ್ದರು. ಆದರೆ, ಟ್ರಸ್ಟ್ ಅಧ್ಯಕ್ಷ ತಿಮ್ಮೇಗೌಡರು ಸ್ಕೈವಾಕ್ ನಿರ್ಮಾಣಕ್ಕೆ ಅವಕಾಶ ನೀಡದೆ ತಕರಾರು ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

15 ದಿನಗಳ ಹಿಂದೆಯಷ್ಟೇ ಯುವತಿಯೊಬ್ಬಳು ತನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ವಾಪಸ್ಸಾಗಲು ಹೆದ್ದಾರಿ ದಾಟುವಾಗ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು. ಈ ರೀತಿ ಇಲ್ಲಿವರೆಗೆ 17 ರಿಂದ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈಗಲೂ ಪಾದಚಾರಿಗಳ ಹಿತದೃಷ್ಟಿಯಿಂದ ಸ್ಕೈ ವಾಕ್ ನಿರ್ಮಾಣಕ್ಕೆ ವೀರಾಂಜನೇಯ ಟ್ರಸ್ಟ್ ಸಹಕರಿಸಬೇಕು. ಇಲ್ಲದಿದ್ದರೆ ಕೋತಿ ಆಂಜನೇಯಸ್ವಾಮಿ ದೇವಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಚಿಕ್ಕಬ್ಯಾಟಪ್ಪ, ಯೋಗಾನಂದ, ಭದ್ರಣ್ಣ, ಮೂರ್ತಿ, ವಾಜರಹಳ್ಳಿ ಮಂಜುನಾಥ್ , ಕೃಷ್ಣ, ಬೇಟೆ, ಲಕ್ಷ್ಮಮ್ಮ, ಮಂಜುಳಾ, ವೆಂಕಟಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.

ಬಾಕ್ಸ್ ...................

ದೇಗುಲವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆಯರಿ

ರಾಮನಗರ: ಬಿಡದಿ ಹೋಬಳಿ ಮಂಚನಾಯಕನಹಳ್ಳಿಯಲ್ಲಿನ ಶ್ರೀ ಕೋತಿ ಆಂಜನೇಯಸ್ವಾಮಿ ದೇವಾಲಯದ ಶ್ರೀ ವೀರಾಂಜನೇಯ ಟ್ರಸ್ಟ್ ಅನ್ನು ವಜಾಗೊಳಿಸಿ ದೇವಾಲಯವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆಯದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ಗ್ರಾಮದ ಮುಖಂಡ ಚಿಕ್ಕಬ್ಯಾಟಪ್ಪ ಎಚ್ಚರಿಕೆ ನೀಡಿದರು.

ದೇವಾಲಯದ ಬಳಿ ಸ್ಕೈವಾಕ್ ನಿರ್ಮಾಣಕ್ಕಾಗಿ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದ ಮೇಲೆ ದೇವಾಲಯದ ಬಾಗಿಲಲ್ಲಿ 17 ಮಂದಿ ಅಪಘಾತಗಳಲ್ಲಿ ಸಾವಪ್ಪಿದ್ದಾರೆ. ಸಾರ್ವಜನಿಕರ ಉಪಯೋಗಕ್ಕಾಗಿ ಸ್ಕೈ ವಾಕ್ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಈಗ ಬೀಗ ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತೆಗೆದುಕೊಳ್ಳುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.

ಈ ಹಿಂದೆ ವಾರದಲ್ಲಿ ಎರಡು ದಿನ ಭಕ್ತರಿಗೆ ಅನ್ನ ದಾಸೋಹ ನಡೆಯುತ್ತಿತ್ತು. ತಿಮ್ಮೇಗೌಡರು ಅಧ್ಯಕ್ಷರಾದ ಮೇಲೆ ಅದಕ್ಕೆ ಬ್ರೇಕ್ ಹಾಕಿದ್ದಾರೆ. ಟ್ರಸ್ಟ್‌ನಲ್ಲಿದ್ದ ಸ್ಥಳೀಯ ಸದಸ್ಯರನ್ನು ಹೊರ ಹಾಕಿ ದೌರ್ಜನ್ಯ ಹಾಕಿದ್ದಾರೆ. ಅಲ್ಲದೆ, ಸ್ಥಳೀಯರ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ದೇವಾಲಯವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆಯಬೇಕು ಎಂದು ಚಿಕ್ಕ ಬ್ಯಾಟಪ್ಪ ಒತ್ತಾಯಿಸಿದರು.

ಬಾಕ್ಸ್ .....................

ದೇಗುಲದ ಜಾಗ ಬಲಾಢ್ಯರ ಪಾಲು: ಯೋಗಾನಂದ

ರಾಮನಗರ: ಭಕ್ತಾದಿಗಳ ಅನುಕೂಲಕ್ಕಾಗಿ ಶ್ರೀ ಕೋತಿ ಆಂಜನೇಯಸ್ವಾಮಿ ದೇವಾಲಯ ಬಳಿ ಸ್ಕೈವಾಕ್ ನಿರ್ಮಾಣಕ್ಕೆ ಅನಧಿಕೃತ ಟ್ರಸ್ಟ್‌ನ ಅಧ್ಯಕ್ಷ ತಿಮ್ಮೇಗೌಡರು ಅಡ್ಡಿಪಡಿಸುತ್ತಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಪೊಲೀಸ್ ಇಲಾಖೆ ಹಾಗೂ ಮಂಚನಾಯಕನಹಳ್ಳಿ ಗ್ರಾಪಂ ಗಂಭೀರವಾಗಿ ಪರಿಗಣಿಸಿ ಸ್ಕೈವಾಕ್ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಗ್ರಾಮದ ಮುಖಂಡ ಯೋಗಾನಂದ ಒತ್ತಾಯಿಸಿದರು.

ದೇವಾಲಯ ಬಳಿ ಸ್ಕೈವಾಕ್ ನಿರ್ಮಾಣಕ್ಕಾಗಿ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣ ವೇಳೆ ಸಂಸದರಾಗಿದ್ದ ಡಿ.ಕೆ.ಸುರೇಶ್ ಮೇಲೆ ಗ್ರಾಮಸ್ಥರೆಲ್ಲರು ಒತ್ತಡ ಹೇರಿ ಕೋತಿ ಆಂಜನೇಯಸ್ವಾಮಿ ದೇವಾಲಯದ ಎಡಭಾಗದಲ್ಲಿ ಸ್ಕೈವಾಕ್ ಗೆ ಅನುಮೋದನೆ ಪಡಿಸಿಕೊಂಡಿದ್ದೆವು. 5 ತಿಂಗಳ ಹಿಂದೆ ಶಾಸಕ ಬಾಲಕೃಷ್ಣರವರು ಅಧಿಕಾರಿಗಳೊಂದಿಗೆ ಸ್ಥಳ ಗುರುತಿಸಿದ್ದರು. ಆದರೀಗ ವೀರಾಂಜನೇಯ ಟ್ರಸ್ಟಿನೊಳಗೆ ಸೇರಿಕೊಂಡಿರುವ ಅನಧಿಕೃತ ವ್ಯಕ್ತಿಗಳು ಸ್ಕೈವಾಕ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಟ್ರಸ್ಟ್ ಅಧ್ಯಕ್ಷ ತಿಮ್ಮೇಗೌಡರವರು ದೇವಾಲಯಕ್ಕಾಗಿ ಒಂದು ರುಪಾಯಿ ಖರ್ಚು ಮಾಡಿಲ್ಲ. ಮಂಚನಾಯಕನಹಳ್ಳಿ ಗ್ರಾಮಸ್ಥರು ದೇವಾಲಯಕ್ಕೆ ಜಾಗ ನೀಡಿದರೆ, ವಿ.ಸಂಪತ್ತು ದೇಗುಲ ನಿರ್ಮಾಣ ಮಾಡಿಸಿದರು. ಶ್ರೀ ವೀರಾಂಜನೇಯಸ್ವಾಮಿ ಟ್ರಸ್ಟ್ ಹೆಸರಿನಲ್ಲಿರುವ ಜಮೀನು ಹಳೆಯ ಪಹಣಿಯಲ್ಲಿ ವಿ.ಸಂಪತ್ ಹೆಸರಿನಲ್ಲಿಯೇ ಬರುತ್ತಿದೆ. 10 ವರ್ಷಗಳಿಂದ ಈಚೆಗೆ ಮಾರುತಿ ಮತ್ತು ಆಂಜನಪ್ಪ ಸ್ವಂತ ಹೆಸರಿನಲ್ಲಿ ದಾಖಲೆ ಮಾಡಿಸಿಕೊಂಡಿದ್ದಾರೆ. ಗ್ರಾಮಸ್ಥರು ಕೊಡುಗೆ ನೀಡಿದ ಭೂಮಿ ಬಲಾಢ್ಯರ ಪಾಲಾಗುತ್ತಿದೆ ಎಂದು ಯೋಗಾನಂದ ಕಿಡಿಕಾರಿದರು.

10ಕೆಆರ್ ಎಂಎನ್ 1ಜೆಪಿಜಿ

ಮಂಚನಾಯಕನಹಳ್ಳಿಯ ಕೋತಿ ಆಂಜನೇಯಸ್ವಾಮಿ ದೇವಾಲಯ ಬಳಿ ಗ್ರಾಮಸ್ಥರು ವಾಹನ ತಡೆದು ಪ್ರತಿಭಟನೆ ನಡೆಸಿದರು.