ಕಾರ್ಮಿಕ ಮಕ್ಕಳ ಶಿಶುಪಾಲನಾ ಕೇಂದ್ರಗಳಿಗೆ ಬೀಗ

| Published : Nov 12 2023, 01:01 AM IST

ಸಾರಾಂಶ

ಬೆಳಗಾವಿ ಪ್ರಾದೇಶಿಕ ವ್ಯಾಪ್ತಿಯಲ್ಲಿದ್ದ ೨೭ ಕಿತ್ತೂರು ರಾಣಿ ಚೆನ್ನಮ್ಮ ಶಿಶು ಪಾಲನಾ ಕೇಂದ್ರ ಸೇರಿದಂತೆ ಎಲ್ಲ ಕೇಂದ್ರ ರದ್ದುಪಡಿಸಲು ಆದೇಶಿಸಿದ ನಂತರ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.

ಶಂಕರ ಭಟ್ಟ ತಾರೀಮಕ್ಕಿ

ಯಲ್ಲಾಪುರ:

ಕಾರ್ಮಿಕರ ಮಕ್ಕಳಿಗಾಗಿ ಕಾರ್ಮಿಕ ಇಲಾಖೆ ಪ್ರಾರಂಭಿಸಿದ ಶಿಶುಪಾಲನಾ ಕೇಂದ್ರಗಳಿಗೆ ಇದೀಗ ಬೀಗ ಬೀದಿದ್ದು ಸಾವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬೀದಿಗೆ ಬಂದಿದ್ದಾರೆ.

ಮಧ್ಯಾಹ್ನ ಖಾಸಗಿ ಶಾಲೆಗಿಂತಲೂ ಉತ್ತಮ ಗುಣಮಟ್ಟದ ಊಟ-ಉಪಹಾರ ನೀಡಿ ಸಾವಿರಾರು ಬಡಮಕ್ಕಳಿಗೆ ನೀಡಲಾಗುತ್ತಿದ್ದ ಎಲ್ಲ ವ್ಯವಸ್ಥೆ ಮತ್ತು ಶಿಶುಪಾಲನಾ ಕೇಂದ್ರಗಳನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಆದೇಶ ನೀಡಿದ್ದಾರೆ. ಇದು ಕಾರ್ಮಿಕರಿಗೆ ಬರಸಿಡಿಲು ಬಡಿದಂತೆ ಆಗಿದೆ.ಕಾರ್ಮಿಕ ಇಲಾಖೆಯ ಮುಖ್ಯ ನಿರ್ವಹಣಾಧಿಕಾರಿ ಭಾರತಿ ಡಿ. ಅ.31ರಂದು ಎಲ್ಲ ಶಾಲಾ ವ್ಯವಹಾರ ಸ್ಥಗಿತಗೊಳಿಸಿ, ಕಾರ್ಮಿಕ ಕಚೇರಿಗೆ ಶಾಲೆಯಲ್ಲಿರುವ ಸಾಮಗ್ರಿಗಳನ್ನು ಯಥಾಸ್ಥಿತಿಯಲ್ಲಿ ಮರಳಿಸುವಂತೆ ಆದೇಶಿಸಿದ್ದಾರೆ. ಇವರ ಆದೇಶದಂತೆ ಬೆಳಗಾವಿ ಪ್ರಾದೇಶಿಕ ವ್ಯಾಪ್ತಿಯಲ್ಲಿದ್ದ ೨೭ ಕಿತ್ತೂರು ರಾಣಿ ಚೆನ್ನಮ್ಮ ಶಿಶು ಪಾಲನಾ ಕೇಂದ್ರ ಸೇರಿದಂತೆ ಎಲ್ಲ ಕೇಂದ್ರ ರದ್ದುಪಡಿಸಲು ಆದೇಶಿಸಿದ ನಂತರ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.ಎಲ್ಲಿಯೂ ದೊರೆಯದ ಗುಣಮಟ್ಟದ ಸೌಲಭ್ಯವನ್ನು ಕಾರ್ಮಿಕರಿಗಾಗಿಯೇ ವಿಶೇಷ ಆದ್ಯತೆ ಮೇರೆಗೆ ಆರಂಭಿಸಿದ ೨೫೦ ಶಿಶುಪಾಲನಾ ಕೇಂದ್ರಗಳಲ್ಲಿ ನೀಡಲಾಗುತ್ತಿತ್ತು. ಇಲ್ಲಿ ೬ ತಿಂಗಳಿಂದ ೬ ವರ್ಷದ ಮಗುವಿನವರೆಗೆ ಪ್ರವೇಶಾವಕಾಶವಿತ್ತು. ಮಕ್ಕಳಿಗೆ ಸ್ಮಾರ್ಟ್‌ಕ್ಲಾಸ್, ೩ ಬಾರಿ ಗುಣಮಟ್ಟದ ಪೌಷ್ಟಿಕ ಆಹಾರ, ಹಣ್ಣು, ಮೊಳಕೆ ಕಾಳು ಅಲ್ಲದೇ ಸೋನಾ ಮಸೂರಿ ಅಕ್ಕಿಯ ಅನ್ನ.... ಹೀಗೆ ಅತ್ಯುತ್ತಮ ಗುಣಮಟ್ಟದ ಊಟ-ಉಪಾಹಾರ ನೀಡಲಾಗುತ್ತಿತ್ತು. ಇದರಿಂದ ಲಕ್ಷಾಂತರ ಕಾರ್ಮಿಕರು ತಮ್ಮ ಮಕ್ಕಳನ್ನು ಬೆಳಗ್ಗೆ ೯ರಿಂದ ಸಂಜೆ ೬ರ ವರೆಗೆ ವಾರದ ೬ ದಿನ ಕಳುಹಿಸಬಹುದಿತ್ತು. ಅಲ್ಲದೇ, ದಸರಾ, ಮೇ ರಜೆಗಳಲ್ಲೂ ಈ ಶಾಲೆ ತೆರೆದಿರುತ್ತಿತ್ತು. ಇದರಿಂದ ಎಲ್ಲ ಕಾರ್ಮಿಕರೂ ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಟ್ಟು ಸಂಜೆ ಮನೆಗೆ ಹೋಗುವಾಗ ಕರೆದುಕೊಂಡು ಹೋಗಲು ಅತ್ಯಂತ ಸಹಾಯಕಾರಿಯಾಗಿತ್ತು. ಇಲ್ಲಿನ ಶಿಕ್ಷಕರಿಗೆ ಬೇರೆ ಯಾವ ಕೆಲಸದ ಒತ್ತಡ ಇಲ್ಲದೇ ಮಕ್ಕಳ ಕುರಿತಾಗಿ ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗುತ್ತಿತ್ತು. ಆದ್ದರಿಂದ ಈ ಪುಟಾಣಿ ಮಕ್ಕಳು ಸರ್ಕಾರದ ಪ್ರಾಥಮಿಕ ಶಾಲಾ ಮಕ್ಕಳಿಗಿಂತಲೂ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿತ್ತು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ಅಂಗನವಾಡಿ ಕೇಂದ್ರಗಳಲ್ಲಿ ೩ರಿಂದ ೬ ವರ್ಷ ವರೆಗಿನ ಮಕ್ಕಳಿಗೆ ಮಾತ್ರ ಅವಕಾಶವಿದೆ. ಊಟ, ಗುಣಮಟ್ಟದ ಆಹಾರ ಮಕ್ಕಳಿಗೆ ದೊರಕುತ್ತಿಲ್ಲವೆಂಬ ಆಕ್ಷೇಪಗಳಿವೆ. ಆದರೆ ಇಲ್ಲಿ ಎಲ್ಲ ಸೌಲಭ್ಯವೂ ಇತ್ತು. ಕಾರ್ಮಿಕರು ನೆಮ್ಮದಿಯಿಂದ ಇಲ್ಲಿ ಮಕ್ಕಳನ್ನು ಬಿಟ್ಟು ತಮ್ಮ ಕಾರ್ಯದಲ್ಲಿ ಮುಂದುವರಿಯಬಹುದಿತ್ತು. ಇದೀಗ ಕೇಂದ್ರ ಬಂದಾಗಿದೆ. ಕಟ್ಟಡ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಪುನಃ ಶಿಶುಪಾಲನಾ ಕೇಂದ್ರ ಪ್ರಾರಂಭಿಸಿ, ಉಂಟಾಗಿರುವ ಅನ್ಯಾಯ ಬಗೆಹರಿಸಬೇಕೆಂಬುದು ಕಾರ್ಮಿಕರ ಆಗ್ರಹವಾಗಿದೆ.

ಹೆಬ್ಬಾರ ಭೇಟಿ:

ಯಲ್ಲಾಪುರದಲ್ಲಿರುವ ಶಾಸಕ ಶಿವರಾಮ ಹೆಬ್ಬಾರ ಮನೆಗೆ ನೂರಾರು ಮಕ್ಕಳ ಜತೆ ಆಗಮಿಸಿದ ಪಾಲಕರು ಶಿಶುಪಾಲನಾ ಕೇಂದ್ರಗಳನ್ನು ಪುನರಾರಂಭಿಸುವಂತೆ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಪಾಲಕರು, ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ನಾವು ಹೋರಾಟಕ್ಕೆ ಮುಂದಾಗಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ. ನಾವೆಲ್ಲ ಕಟ್ಟಡ ನಿರ್ಮಾಣ, ಮತ್ತಿತರ ವಿವಿಧ ಕಾರ್ಯಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದೇವೆ ಎಂದು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಸರ್ಕಾರ ಬದಲಾಗಿದ್ದರಿಂದ ಈ ಕೇಂದ್ರ ಸ್ಥಗಿತಗೊಳಿಸಲಾಗಿದೆ. ತಕ್ಷಣ ನಿಮ್ಮ ಬೇಡಿಕೆ ಈಡೇರಿಸುವುದು ಕಷ್ಟ. ನಾನು ಸಚಿವರ ಜತೆ ಮಾತನಾಡಿ ಶಿಶುಪಾಲನಾ ಕೇಂದ್ರ ಪುನರಾರಂಭಿಸಲು ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ನಾನು ಕಾರ್ಮಿಕರ ಸಚಿವನಾದ ವೇಳೆ ಕಾರ್ಮಿಕರ ಸ್ಥಿತಿಗತಿ ತಿಳಿದು ಈ ಶಿಶುಪಾಲನಾ ಕೇಂದ್ರವನ್ನು ಕಾರ್ಮಿಕ ಇಲಾಖೆಯ ಜನಸ್ನೇಹಿ ಯೋಜನೆಯಡಿ ಜಾರಿಗೊಳಿಸಿದೆ. ಈಗ ಸರ್ಕಾರದ ಆದೇಶದಿಂದಾಗಿ ಮಕ್ಕಳಿಗೆ ಮತ್ತು ಕಾರ್ಮಿಕರಿಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ, ಸ್ಥಗಿತವಾಗಿರುವ ಈ ಕೇಂದ್ರಗಳನ್ನು ಪುನಃ ಪ್ರಾರಂಭಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಒತ್ತಾಯಿಸಿದ್ದಾರೆ.