ಮನೆಗಳ ಮುಂದೆ ಸಿಸಿ ಕ್ಯಾಮರಾವನ್ನು ಅಳವಡಿಸದಿದ್ದರೆ ಕಳ್ಳರನ್ನು ಕಂಡು ಹಿಡಿಯುವುದು ಮತ್ತು ಹೊರ ಹೋದಾಗ ಮನೆಗಳ ಕಡೆ ನಿಗಾವಹಿಸುವುದು ಕಷ್ಟಕರವಾಗುತ್ತದೆ.

ಕೆಜಿಎಫ್ ಜಿಲ್ಲಾ ಪೊಲೀಸರಿಂದ ಹೊಸ ಪ್ರಯೋಗ । ಜನತೆಗೆ ಸುರಕ್ಷತೆಗೆ ಹೆಜ್ಜೆ

ಕೆ.ರಮೇಶ್

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಹೆಚ್ಚುತ್ತಿರುವ ಮನೆ ಕಳ್ಳತನವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಜಾರಿಗೆ ತರುವ ಮೂಲಕ ಪ್ರವಾಸ ಹಾಗೂ ಇತರೆ ಕಾರ್ಯಗಳ ನಿಮಿತ್ತ ಹೊರಡುವ ಜನತೆಗೆ ಸುರಕ್ಷತೆಯನ್ನು ಕಲ್ಪಿಸಲು ಮುಂದಾಗಿದೆ.

ಜನಸಾಮಾನ್ಯರು ಶುಭ ಸಮಾರಂಭ, ಪ್ರವಾಸ ಇತ್ಯಾದಿಗಳಿಗೆ ಹೋದಾಗ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾ ಖುಷಿಯನ್ನು ಹಂಚಿಕೊಳ್ಳುತ್ತಾರೆ. ಇದರೊಟ್ಟಿಗೆ ಮನೆಗೆ ಬೇಗ ಹಾಕಿ ಹೊರ ಹೋಗುವುದನ್ನು ಗಮನಿಸುತ್ತಿರುವಂತಹ ಕಳ್ಳರು ತಮ್ಮ ಕೈಚಳಕವನ್ನು ತೋರಿಸುತ್ತಾರೆ. ಮನೆಗಳ ಮುಂದೆ ಸಿಸಿ ಕ್ಯಾಮರಾವನ್ನು ಅಳವಡಿಸದಿದ್ದರೆ ಕಳ್ಳರನ್ನು ಕಂಡು ಹಿಡಿಯುವುದು ಮತ್ತು ಹೊರ ಹೋದಾಗ ಮನೆಗಳ ಕಡೆ ನಿಗಾವಹಿಸುವುದು ಕಷ್ಟಕರವಾಗುತ್ತದೆ.

ಈಗ ಅಂತಹ ದುರ್ಘಟನೆಗಳು ನಡೆದಂತೆ ಕೆಜಿಎಫ್ ಜಿಲ್ಲಾ ಪೋಲಿಸ್ ಇಲಾಖೆ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ. ನಿಮ್ಮ ಮನೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸದಿದ್ದರೂ ಮನೆಗೆ ಬೀಗ ಜಡಿದು ಹೊರಗಡೆ ಹೋದರೆ ಮನೆ ಕಳ್ಳತನದ ಬಗ್ಗೆ ಆತಂಕಪಡಬೇಕಾಗಿಲ್ಲ. ಮನೆಯವರು ಹೊರ ಹೋದಾಗ ಇನ್ನು ಮುಂದೆ ಪೊಲೀಸರು ನಿಮ್ಮ ಮನೆಯನ್ನು ಕಾಯುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದಾರೆ. ಮನೆಗೆ ಬೀಗ ಜಡಿದು ಹೊರ ಹೋಗುವಂತಹ ನಾಗರಿಕರು ಯಾವ ದಿನಾಂಕದಿಂದ ಯಾವ ದಿನಾಂಕದವರೆಗೂ ಊರಿನಿಂದ ಹೊರ ಹೋಗುತ್ತೀರಾ? ಹೆಸರು ಪೂರ್ಣ ವಿಳಾಸ ಗೂಗಲ್ ಜಿಪಿಎಸ್ ಲೊಕೇಶನ್ ಸಂಪೂರ್ಣ ಮಾಹಿತಿಯ ಜೊತೆಗೆ ಮನೆಯ ಮುಂದೆ ನಿಂತು ಒಂದು ಸೆಲ್ಫಿ ಫೋಟೋವನ್ನು ಪೊಲೀಸರು ನೀಡುವಂತಹ ವಾಟ್ಸಾಪ್ ಸಂಖ್ಯೆಗೆ ಮಾಹಿತಿಯನ್ನ ನೀಡಬೇಕು. ಪೊಲೀಸರು ಆ ಗ್ರಾಮದ ಅಥವಾ ಆ ಏರಿಯಾದ ಬೀಟ್ ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ. ಬೀಟ್ ಸಿಬ್ಬಂದಿ ಇ ಬೀಟ್ ವ್ಯವಸ್ಥೆಯನ್ನು ಬಳಸಿಕೊಂಡು ರಾತ್ರಿ 1ರಿಂದ ಬೆಳಗ್ಗೆ 5 ಗಂಟೆಯವರೆಗೂ ಕನಿಷ್ಠ ಎರಡು ಬಾರಿ ಮನೆಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಾರೆ. ಈ ವಿನೂತನ ಕಾರ್ಯಕ್ರಮಕ್ಕಾಗಿಯೇ ಪ್ರತ್ಯೇಕ ಮೊಬೈಲ್ ಫೋನನ್ನು ಸಹ ಪೊಲೀಸರು ಬಳಸುತ್ತಿದ್ದು, ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಮಾಹಿತಿ ನೀಡಿದವರ ಹಾಗೂ ಅವರ ಕುಟುಂಬ ಸದಸ್ಯರ ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ.

ಸಾರ್ವಜನಿಕರು ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ನ ಅನುಕೂಲವನ್ನು ಪಡೆಯಲು 8277963743 ಸಂಖ್ಯೆಯ ವಾಟ್ಸಾಪ್ ಸಂಖ್ಯೆಗೆ ಮನೆಯ ಮುಂದೆ ನಿಂತು ತೆಗೆಯುವ ಸೆಲ್ಫಿ ಫೋಟೋ ಮನೆಯಿಂದ ಹೊರ ನಡೆದು ವಾಪಸ್ಸು ಬರುವ ಮಾಹಿತಿಯನ್ನು ಶೇರ್ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನಿಯಂತ್ರಣ ಕೊಠಡಿಯ 9480802700 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.ಕೋಟ್‌:

ಮನೆ ಕಳವು ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಪೊಲೀಸ್ ಇಲಾಖೆ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಜಾರಿಗೆ ತಂದಿದೆ. ಮೊದಲು ಪ್ರಾಯೋಗಿಕವಾಗಿ ಮೂರು ಜಿಲ್ಲೆಗಳಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಿ ಯಶಸ್ವಿಯಾದ ಕಾರಣ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಸಹ ಮೇ 5 ರಿಂದ ಅನುಷ್ಠಾನ ಮಾಡಲಾಗಿದೆ. ಯೋಜನೆಯ ಅನುಕೂಲವನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕು.

ಶಿವಾಂಶು ರಜಪೂತ್, ಕೆಜಿಎಫ್ ಎಸ್‌ಪಿ.