ಸಾರಾಂಶ
ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ಉಗ್ರಾಣ ನಿಗಮದ ಉಗ್ರಾಣಕ್ಕೆ ಪುರಸಭೆ ಮುಖ್ಯಾಧಿಕಾರಿ ಬೀಗ ಜಡಿದಿರುವ ಹಿನ್ನೆಲೆಯಲ್ಲಿ ಸೋಮವಾರ ಶಾಸಕ ಡಾ.ಚಂದ್ರು ಲಮಾಣಿ ಭೇಟಿ ನೀಡಿದರು.
ಲಕ್ಷ್ಮೇಶ್ವರ: ಕರ್ನಾಟಕ ರಾಜ್ಯದ ಉಗ್ರಾಣ ನಿಗಮ ಪುರಸಭೆಗೆ ತೆರಿಗೆ ಕಟ್ಟದಿರುವ ಹಿನ್ನೆಲೆಯಲ್ಲಿ ಪುರಸಭೆಯ ಅಧಿಕಾರಿಗಳು ಉಗ್ರಾಣಗಳಿಗೆ ಬೀಗ ಜಡಿದಿರುವುದು ಸರಿಯಾದ ಕ್ರಮವಲ್ಲ ಎಂದು ಶಾಸಕ ಡಾ. ಚಂದ್ರು ಲಮಾಣಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆಯಿತು.
ಉಗ್ರಾಣ ನಿಮಗವು ಪುರಸಭೆಗೆ ಕಳೆದ 3 ವರ್ಷಗಳಿಂದ ಕಟ್ಟಬೇಕಾದ ₹14,19,770 ತೆರಿಗೆ ಹಣ ಕಟ್ಟದಿರುವ ಹಿನ್ನೆಲೆಯಲ್ಲಿ ಶನಿವಾರ ಪುರಸಭೆಯ ಮುಖ್ಯಾಧಿಕಾರಿಗಳ ತಂಡ ಉಗ್ರಾಣಗಳಿಗೆ ಬೀಗ ಜಡಿದಿದೆ. ಅಲ್ಲದೆ ತೆರಿಗೆ ಕಟ್ಟುವಂತೆ ಉಗ್ರಾಣ ನಿಗಮದ ವ್ಯವಸ್ಥಾಪಕರಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಸಂಸ್ಥೆಗಳಿಗೆ ಬೀಗ ಜಡಿಯುವುದು ಸರಿಯಾದ ಕ್ರಮವಲ್ಲ, ಸರ್ಕಾರಿ ಅಧಿಕಾರಿಗಳು ಸರ್ಕಾರದ ಇನ್ನೊಂದು ಸಂಸ್ಥೆಯ ವಿರುದ್ಧ ಸಂಘರ್ಷಕ್ಕೆ ಇಳಿಯುವುದು ಸರಿಯಾದ ಕ್ರಮವಲ್ಲ. ಪಟ್ಟಣದಲ್ಲಿ ಲಕ್ಷಾಂತರ ರು.ಗಳ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡಗಳ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಕಾರ್ಯ ಮಾಡಬೇಕು. ನಾವು ಈಗಾಗಲೆ ಉಗ್ರಾಣ ನಿಗಮದ ಎಂಡಿ ಜತೆ ಮಾತಾಡಿದ್ದೇವೆ. ಇನ್ನೊಂದು ವಾರದಲ್ಲಿ ತೆರಿಗೆಯ ಹಣ ಕಟ್ಟುವುದಾಗಿ ಹೇಳಿದ್ದಾರೆ. ಆದ್ದರಿಂದ ಉಗ್ರಾಣದ ಬೀಗ ತೆರೆದು ರೈತರಿಗೆ ಸೇರಿದ ಆಹಾರ ಧಾನ್ಯಗಳನ್ನು ರಕ್ಷಣೆ ಮಾಡುವ ಕಾರ್ಯಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ 1000 ಕ್ವಿಂಟಲ್ ಆಹಾರ ಧಾನ್ಯಗಳು ಹಾಳಾಗಿ ಹೋಗುವ ಸಂಭವವಿದೆ. ಪುರಸಭೆಯ ಅಧಿಕಾರಿಗಳು ಉಗ್ರಾಣ ನಿಗಮದ ಉಗ್ರಾಣಗಳ ಬೀಗ ತೆರೆಯಬೇಕು ಎಂದು ಸೂಚನೆ ನೀಡಿದರು.ಈ ವೇಳೆ ತಹಸೀಲ್ದಾರ್ ವಾಸುದೇವ ಸ್ವಾಮಿ. ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ, ಬಿಜೆಪಿ ಮುಖಂಡ ಎಂ.ಆರ್. ಪಾಟೀಲ್, ಬಸವರಾಜ ಕುಂಬಾರ ಇದ್ದರು.