ಬ್ರಹ್ಮಾವರ ಲಾಕಪ್‌ ಡೆತ್‌: ಸಿಐಡಿ ತನಿಖೆ ಶುರು

| Published : Nov 11 2024, 11:49 PM IST

ಬ್ರಹ್ಮಾವರ ಲಾಕಪ್‌ ಡೆತ್‌: ಸಿಐಡಿ ತನಿಖೆ ಶುರು
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಭಾನುವಾರ ಮುಂಜಾನೆ ನಡೆದ ಲಾಕಪ್ ಡೆತ್ ಪ್ರಕರಣವನ್ನು ಸಿಐಡಿ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಸೋಮವಾರ ಉಡುಪಿಗೆ ಆಗಮಿಸಿರುವ ಬೆಂಗಳೂರಿನ ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಭಾನುವಾರ ಮುಂಜಾನೆ ನಡೆದ ಲಾಕಪ್ ಡೆತ್ ಪ್ರಕರಣವನ್ನು ಸಿಐಡಿ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಸೋಮವಾರ ಉಡುಪಿಗೆ ಆಗಮಿಸಿರುವ ಬೆಂಗಳೂರಿನ ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯ ಎಸೈ ಮಧು ಮತ್ತು ಪ್ರಭಾರ ಠಾಣಾಧಿಕಾರಿಯಾಗಿದ್ದ ಸುಜಾತ ಅವರನ್ನು ಅಮಾನತುಗೊಳಿಸಲಾಗಿದೆ.ಘಟನೆಯ ಹಿನ್ನೆಲೆಯಲ್ಲಿ, ಆರೋಪಿಗಳನ್ನು ಬಂಧಿಸುವಾಗ ತೆಗೆದುಕೊಳ್ಳಬೇಕಾಗುವ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪೂರ್ಣವಾಗಿ ಪಾಲಿಸಿದೇ ಇರುವ ಕುರಿತು ಎಸೈ ಮತ್ತು ಠಾಣಾಧಿಕಾರಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಡಾ.ಅರುಣ್ ತಿಳಿಸಿದ್ದಾರೆ.ಶವ ಹಸ್ತಾಂತರ: ಮೃತರ ಚಿಕ್ಕಪ್ಪನ ಮಗ ಅನೀಶ್ ಡೆನಿಲ್ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜಿಲ್ಲಾ ಹೆಚ್ಚುವರಿ ಸಿವಿಲ್ - ಜೆಎಂಎಫ್‌ಸಿ ನ್ಯಾಯಾಧೀಶರ ಸಮ್ಮುಖದಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆಯನ್ನು ನಡೆಸಲಾಗಿದೆ. ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಅವರು ಶವವನ್ನು ಕೇರಳಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಕೇರಳದ ಕೊಲ್ಲಂ ಜಿಲ್ಲೆ ಮೂಲದ ಬಿಜು ಮೋಹನ್ (44) ಎಂಬಾತ ಭಾನುವಾರ ಮುಂಜಾನೆ ಲಾಕಪ್ ನಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದ. ಪೊಲೀಸರ ವಶದಲ್ಲಿ ಆರೋಪಿಗಳು ಮೃತಪಟ್ಟಾಗ ನಿಯಮದಂತೆ ಸಿಐಡಿ ತನಿಖೆ ನಡೆಸಬೇಕಾಗಿದೆ.

ಶನಿವಾರ ಸಂಜೆ ಬಿಜು ಮೋಹನ್ ಇಲ್ಲಿನ ಚೇರ್ಕಾಡಿ ಎಂಬಲ್ಲಿನ ಮನೆಯೊಂದರ ಸಿಟೌಟ್ ನಲ್ಲಿ ಕುಳಿತಿದ್ದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದ. ಆತನನ್ನು ಸ್ಥಳೀಯರು ಹಿಡಿದು ಬ್ರಹ್ಮಾವರ ಪೊಲೀಸರಿಗೆ ಒಪ್ಪಿಸಿದ್ದರು. ಮದ್ಯಪಾನ ಮಾಡಿದ್ದ ಅತ ಲಾಕಪ್‌ ನಲ್ಲಿ ಕುಸಿದುಬಿದ್ದಿದ್ದ, ತಕ್ಷಣ ಅತನನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆಯೊಯ್ಯವಷ್ಟರಲ್ಲಿ ಮೃತಪಟ್ಟಿದ್ದ.

ಸೋಮವಾರ ಬ್ರಹ್ಮಾವರ ಠಾಣೆಗೆ ಬಂದ ಸಿಐಡಿ ಅಧಿಕಾರಿಗಳು ಪೊಲೀಸರಿಂದ ಪ್ರಾಥಮಿಕ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ನಂತರ ಬ್ರಹ್ಮಾವರ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಪಿಯ ಶವವನ್ನು ಪರಿಶೀಲಿಸಿ, ವೈದ್ಯರಿಂದಲೂ ಮಾಹಿತಿ ಪಡೆದಿದ್ದಾರೆ.

ಘಟನೆಯ ಬಗ್ಗೆ ಪೊಲೀಸರ ಮಾಹಿತಿಯಂತೆ ಮೃತ ಆರೋಪಿಯ ಮನೆಯವರು ಕೇರಳದಿಂದ ಬ್ರಹ್ಮಾವರಕ್ಕೆ ಆಗಮಿಸಿದ್ದಾರೆ. ಶವವನ್ನು ಅವರಿಗೆ ಹಸ್ತಾಂತರಿಸುವಲ್ಲಿ ಸಹಕರಿಸುತ್ತಿರುವ ಕೇರಳ ಸಮಾಜದ ಉಪಾಧ್ಯಕ್ಷ ಕುಮಾರನ್ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇಲ್ಲಿನ ಕೊಚ್ಚಿನ್ ಶಿಪ್‌ಯಾರ್ಡ್ ನಲ್ಲಿ ಕೆಲಸಕ್ಕೆಂದು ಕೇರಳದಿಂದ ಬಂದು, ಇದೀಗ ಹೇಗೆ ಮೃತಪಟ್ಟಿದ್ದಾರೆ ಎಂಬುದಕ್ಕೆ ಕಾರಣ ತಿಳಿಯಬೇಕಾಗಿದೆ. ಆದ್ದರಿಂದ ಮರಣೋತ್ತರ ಪರೀಕ್ಷೆ ಮಾಡಬೇಕು, ಈಗಾಗಲೇ ಪೊಲೀಸ್ ಠಾಣೆಯಲ್ಲಿ ಮನವಿ ಕೊಡಲಾಗಿದೆ ಎಂದವರು ತಿಳಿಸಿದ್ದಾರೆ.