ಲೋಕ ಆದಾಲತ್: 8500+ ಪ್ರಕರಣಗಳು ಇತ್ಯರ್ಥ

| Published : Sep 14 2025, 01:04 AM IST

ಸಾರಾಂಶ

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸಾರ್ವಜನಿಕರ ಸಹಕಾರದಿಂದ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಾರುತಿ ಬಾಗಡೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸಾರ್ವಜನಿಕರ ಸಹಕಾರದಿಂದ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಾರುತಿ ಬಾಗಡೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಲೋಕ್ಅದಾಲತ್‌ನಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷದ ಮೂರನೇ ಲೋಕ ಅದಾಲತ್ಇದಾಗಿದ್ದು, ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದ್ದು, ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಇಲ್ಲಿಯವರೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ. 25 ಲಕ್ಷಕ್ಕೂ ಹೆಚ್ಚಿನ ಹಣವನ್ನು ರಾಜಿ ಸಂಧಾನದಲ್ಲಿ ಪಾವತಿ ಮಾಡಿಸಲಾಗಿದೆ. ಕೆಲ ಪ್ರಮುಖವಾಗಿದ್ದ ಪ್ರಕರಣಗಳು ಆಸ್ತಿ ಮಾರಾಟದ ವ್ಯಾಜ್ಯವೂ ರಾಜಿಯಾಗಿವೆ ಎಂದು ಹೇಳಿದರು.

ವಿಚಾರಣೆಗೆ ಬಾಕಿ ಇರುವ 8000 ಪ್ರಕರಣಗಳು ಇತ್ಯರ್ಥವಾಗುವ ನಿರೀಕ್ಷೆಯಿದೆ. ವ್ಯಾಜ್ಯ ಪೂರ್ವ ಪ್ರಕರಣಗಳು 39000 ಮೇಲ್ಪಟ್ಟು ಇತ್ಯರ್ಥಪಡಿಸಬಹುದು ಎಂದು ಅಂದಾಜಿಸಲಾಗಿದೆ. ಸಾರ್ವಜನಿಕರ ಸಹಕಾರದಿಂದ ಹೆಚ್ಚಿನ ಪ್ರಕರಣ ಇತ್ಯರ್ಥಗೊಳಿಸಗುತ್ತದೆ ಎಂದು ತಿಳಿಸಿದರು.

ಡಿಸೆಂಬರ್‌ನಲ್ಲಿ ಮತ್ತೊಂದು ರಾಷ್ಟೀಯ ಲೋಕ ಅದಾಲತ್ ಏರ್ಪಡಿಸಲಾಗುವುದು. ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡದಲ್ಲಿ ಶೇ.50ರಷ್ಟು ರಿಯಾಯತಿ ನೀಡಲಾಗಿದೆ.

ಕರ್ನಾಟಕದ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಲೋಕ ಅದಾಲತ್‌ ನಡೆಯುತ್ತಿದೆ. ಅದೇ ರೀತಿಯಾಗಿ ಹೊರ ರಾಜ್ಯಗಳಲ್ಲಿಯೂ ಲೋಕ್ ಅದಾಲತ್, ರಾಜಿ ಮಾಡಲು ಪ್ರಯತ್ನ ಮಾಡಲಾಗುತ್ತದೆ. ಆದರೆ ಒಂದೇ ದಿನದಲ್ಲಿ ರಾಜಿಯಾಗುವುದಿಲ್ಲ. ನ್ಯಾಯಾಧೀಶರೂ ರಾಜಿ ಮಾಡಲು ಪ್ರಯತ್ನಿಸುತ್ತಾರೆ. ಸಾರ್ವಜನಿಕರೂ ಲೋಕ್ ಅದಾಲತ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್, ಕ್ರಿಮಿನಲ್, ಮೋಟಾರು ವಾಹನ ಪ್ರಕರಣ ಹಾಗೂ ಕುಟುಂಬ ನ್ಯಾಯಾಲಯದ ಒಟ್ಟು ಸುಮಾರು 8500 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

ಆಸ್ತಿ ವಿಚಾರವಾಗಿ ಒಂದು ವರ್ಷದಿಂದ ನಡೆಯುತ್ತಿದ್ದ ಹಾಗೂ ಬಾಕಿ ಇದ್ದ ಒಂದು ಸಿವಿಲ್‌ ಪ್ರಕರಣವನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಗೊಳಿಸ ಲಾಯಿತು. ಆಸ್ತಿಯಲ್ಲಿ ಹಿಸ್ಸಾಗಳನ್ನು ಪ್ರತ್ಯೇಕ ಮಾಡಿ, ಆಸ್ತಿಯನ್ನು ಹಂಚಲಾಯಿತು. ಆಸ್ತಿಗಳ ಜೊತೆಗೆ ಕೆಲವೊಂದು ಹಣದ ಮಾತುಕತೆಯೂ ಆಗಿದ್ದು, ಆಯಾ ಕಕ್ಷಿದಾರರಿಗೆ ಹಣವನ್ನು ಕೊಡಿಸಿ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು. ಇದರ ಜೊತೆಗೆ ಟ್ರೇಡ್ ಮಾರ್ಕ್ ಕಾಯ್ದೆಯಡಿ ಹೂಡಲಾಗಿದ್ದ ದಾವೆಯನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದರು. ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಚ್.ಎನ್.ಸಾತ್ವಿಕ್, ವಕೀಲರು, ಕಕ್ಷಿದಾರರು, ನ್ಯಾಯಾಲಯ ಸಿಬ್ಬಂದಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಹಾಗೂ ಪೊಲೀಸರು ಇದ್ದರು.