ತ್ವರಿತ ನ್ಯಾಯದಾನಕ್ಕೆ ಲೋಕ ಅದಾಲತ್‌ ಸಹಕಾರಿ: ನ್ಯಾಯಾಧೀಶೆ ಜ್ಯೋತಿ

| Published : Oct 20 2025, 01:04 AM IST

ತ್ವರಿತ ನ್ಯಾಯದಾನಕ್ಕೆ ಲೋಕ ಅದಾಲತ್‌ ಸಹಕಾರಿ: ನ್ಯಾಯಾಧೀಶೆ ಜ್ಯೋತಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರು ಲೋಕ ಅದಾಲತ್‌ನಲ್ಲಿ ಪಾಲ್ಗೊಳ್ಳುವ ಮೂಲಕ ತ್ವರಿತವಾಗಿ ನ್ಯಾಯದಾನವನ್ನು ಪಡೆದುಕೊಳ್ಳಬಹುದು.

ಮುಂಡರಗಿ: ಕಾನೂನು ಸೇವಾ ಸಮಿತಿಯಿಂದ ಒದಗಿಸಲಾಗುವ ಉಚಿತ ಕಾನೂನು ನೆರವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಡಿ. 13ರಂದು ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಮುಂಡರಗಿ ಜೆಎಂಎಫ್‌ಸಿ ದಿವಾಣಿ ನ್ಯಾಯಾಧೀಶೆ ಜ್ಯೋತಿ ಕಾಗಿನಕರ ತಿಳಿಸಿದರು.ಇತ್ತೀಚೆಗೆ ತಾಲೂಕಿನ ಪೇಠಾಲೂರು ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಬಕಾರಿ ಇಲಾಖೆ, ಪೊಲೀಸ್‌ ಇಲಾಖೆ ಮತ್ತು ಗ್ರಾಪಂ ಪೇಠಾಲೂರ ಇವರ ಆಶ್ರಯದಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ಉತ್ಪಾದನೆ ಮತ್ತು ಸಾಗಾಣೆ ನಿಷೇಧ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರು ಲೋಕ ಅದಾಲತ್‌ನಲ್ಲಿ ಪಾಲ್ಗೊಳ್ಳುವ ಮೂಲಕ ತ್ವರಿತವಾಗಿ ನ್ಯಾಯದಾನವನ್ನು ಪಡೆದುಕೊಳ್ಳಬಹುದು ಎಂದರು.ವಕೀಲ ಮಂಜುನಾಥ ಅರಳಿ ಮಾತನಾಡಿ, ಮಾದಕ ದ್ರವ್ಯಗಳಾದ ಅಫೀಮು, ಗಾಂಜಾ, ಕೊಕೇನ್ ಇತ್ಯಾದಿ ಮತ್ತಿನ ಬೆಳೆಗಳನ್ನು ಬೆಳೆಯುವುದು ಮತ್ತು ಅವುಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ. ಮಾದಕ ವಸ್ತುಗಳ ಸೇವನೆಯಿಂದ ಯುವ ಜನತೆ ತಪ್ಪುದಾರಿ ಹಿಡಿಯಲು ಕಾರಣವಾಗುತ್ತಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಆದ್ದರಿಂದ ಗ್ರಾಮದ ಜನತೆ ಇಂತಹ ನಿಷೇಧಿತ ಬೆಳೆಗಳನ್ನು ಬೆಳೆಯುವುದಾಗಲಿ, ಅದಕ್ಕೆ ಪ್ರೋತ್ಸಾಹಿಸುವುದಾಗಲಿ ಮಾಡಿದವರ ವಿರುದ್ಧ ಕಾನೂನು ರೀತಿ ಶಿಕ್ಷೆ ವಿಧಿಸಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಉಡಚವ್ವ ಬೆಣಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೇಠಾಲೂರು ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮವ್ವ ಹೂಗಾರ, ಸದಸ್ಯರಾದ ಅಂದವ್ವ ಚಾಕಲಬ್ಬಿ, ನಾಗಪ್ಪ ಚಿಕ್ಕರಡ್ಡಿ, ಯಲ್ಲಪ್ಪ ಹ್ಯಾಟಿ ಅಬಕಾರಿ ನಿರೀಕ್ಷಕ ರಮೇಶ ಅಗಡಿ, ಅಬಕಾರಿ ಉಪ ನಿರೀಕ್ಷಕಿ ವಿಜಯಲಕ್ಷ್ಮೀ ಗಣತಿ, ಅಬಕಾರಿ ಇಲಾಖೆಯ ಮಲ್ಲಿಕಾರ್ಜುನ, ಪಿಡಿಒ ವಸಂತ ಗೋಕಾಕ, ಬಸವರಾಜ ಜಕ್ಕಮ್ಮನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.