ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ನ್ಯಾಯಾಲಯಗಳಲ್ಲಿ 13ರಂದು ರಾಷ್ಟ್ರೀಯ ಲೋಕ ಅದಾಲತ್​ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್​ ಎಸ್​.ಗಂಗಣ್ಣನವರ್​ ತಿಳಿಸಿದ್ದಾರೆ.

ಉಡುಪಿ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿಯಾಗಿರುವ ರಾಜಿಯಾಗಬಲ್ಲ ಪ್ರಕರಣ ಇತ್ಯರ್ಥಕ್ಕಾಗಿ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ನ್ಯಾಯಾಲಯಗಳಲ್ಲಿ 13ರಂದು ರಾಷ್ಟ್ರೀಯ ಲೋಕ ಅದಾಲತ್​ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್​ ಎಸ್​.ಗಂಗಣ್ಣನವರ್​ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಈ ವರ್ಷದ ಕೊನೆಯ ಲೋಕ ಅದಾಲತ್​ ಆಗಿದ್ದು, ಈ ಬಾರಿ ರಾಜಿಯಾಗಬಲ್ಲ 7564 ಸಿವಿಲ್​ ಪ್ರಕರಣಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 2319 ಪ್ರಕರಣಗಳು ಇತ್ಯರ್ಥ ಮಾಡುವ ನಿರೀಕ್ಷೆ ಇದೆ. ಸಾರ್ವಜನಿಕರು ನ್ಯಾಯಾಲಯಗಳಲ್ಲಿ ಬಾಕಿ ಇರುವ ತಮ್ಮ ಪ್ರಕರಣಗಳನ್ನು ಶೀಘ್ರವಾಗಿ ಪರಿಹಾರ ಪಡೆದುಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ ಎಂದರು.

ಜೊತೆಗೆ ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ಪ್ರಕರಣಗಳನ್ನೂ ಇಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಅವಕಾಶ ಇದೆ, ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುತ್ತದೆ ಎಂದರು.

ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್​ ಉಪಸ್ಥಿತರಿದ್ದರು.ಮೂರು ಅದಾಲತ್: 10,598 ಇತ್ಯರ್ಥ

ಈ ವರ್ಷ ಮಾರ್ಚ್​ನಲ್ಲಿ ನಡೆದ ಲೋಕ ಅದಾಲತ್​ನಲ್ಲಿ 3399 ವಾಜ್ಯಗಳಲ್ಲಿ 2802 ಪ್ರಕರಣ, ಜುಲೈನಲ್ಲಿ ನಡೆದ ಲೋಕಅದಾಲತ್​ನಲ್ಲಿ 4626 ವ್ಯಾಜ್ಯಗಳಲ್ಲಿ 3909, ಸೆಪ್ಟೆಂಬರ್​ನಲ್ಲಿ ನಡೆದ ಲೋಕ ಅದಾಲತ್​ನಲ್ಲಿ 4501 ವ್ಯಾಜ್ಯಗಳಲ್ಲಿ 3887 ಪ್ರಕರಣ ಇತ್ಯರ್ಥವಾಗಿದೆ ಎಂದು ನ್ಯಾ. ಕಿರಣ್​ ಎಸ್​.ಗಂಗಣ್ಣನವರ್ ಮಾಹಿತಿ ನೀಡಿದರು.