ನಗರದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಶನಿವಾರ ಈ ವರ್ಷದ ಮೊದಲ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಗರದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಶನಿವಾರ ಈ ವರ್ಷದ ಮೊದಲ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ರವಿ ಚವ್ಹಾಣ ಮಾತನಾಡಿ, ಸಮಾಜದಲ್ಲಿ ವೈಮನಸ್ಸು ಕಡಿಮೆ ಮಾಡಿ ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಬೆಳೆಸಲು ಲೋಕ ಅದಾಲತ್ ಮಹತ್ವದ ವೇದಿಕೆಯಾಗಿದೆ. ಇದರಿಂದ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗಲು ಸಹಕಾರಿಯಾಗುತ್ತದೆ. ನ್ಯಾಯಾಲಯಗಳಲ್ಲಿ ದೀರ್ಘಕಾಲ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸುವುದರಿಂದ ಕಕ್ಷಿದಾರರಿಗೆ ಸಮಯ ಹಾಗೂ ಹಣದ ಉಳಿತಾಯವಾಗುವುದರ ಜೊತೆಗೆ ಪರಸ್ಪರ ಸಂಬಂಧಗಳು ಸುಧಾರಿಸುತ್ತವೆ ಎಂದು ತಿಳಿಸಿದರು.ಹಿರಿಯ ದಿವಾಣಿ ನ್ಯಾಯಾಧೀಶ ರವಿ ಚವ್ಹಾಣ, ಪ್ರಧಾನ ದಿವಾಣಿ ನ್ಯಾಯಾಧೀಶೆ ರೋಹಿಣಿ ಬಸ್ಸಾಪುರ ಹಾಗೂ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಸವರಾಜ ನಾಯಕ ಅವರ ಸಮ್ಮುಖದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 718 ಪ್ರಕರಣಗಳು ರಾಜಿಯಾಗಿ ಸುಮಾರು ₹ 7.69 ಕೋಟಿ ಮೊತ್ತದ ವ್ಯವಹಾರಗಳು ಸೆಟ್ಲ್‌ಮೆಂಟ್ ಆಗಿವೆ. ಇದೇ ವೇಳೆ ವ್ಯಾಜ್ಯಪೂರ್ವ ಹಂತದಲ್ಲಿದ್ದ 8611 ಪ್ರಕರಣಗಳು ಇತ್ಯರ್ಥಗೊಂಡು ₹ 68. 84 ಲಕ್ಷ ಮೊತ್ತ ಸೆಟ್ಲ್‌ಮೆಂಟ್ ಆಗಿದೆ. ವಿವಾಹ ವಿಚ್ಛೇದನ ಹಾಗೂ ಪೋಟಗಿ ಸಂಬಂಧಿತ ಎರಡು ಪ್ರಕರಣಗಳಲ್ಲಿ ಬೇರ್ಪಟ್ಟಿದ್ದ ದಂಪತಿಗಳನ್ನು ಸಂಧಾನದ ಮೂಲಕ ಮತ್ತೆ ಒಂದಾಗಿಸುವಲ್ಲಿ ಲೋಕ ಅದಾಲತ್ ಯಶಸ್ವಿಯಾಯಿತು. ಈ ಪ್ರಕರಣದಲ್ಲಿ ಕಕ್ಷಿದಾರರ ಪರ ವಕೀಲರು ಕೆ.ಎಸ್.ಕುಲಕರ್ಣಿ, ಎ.ಎಂ.ಕಾರೆಕಾಜಿ, ಲಕ್ಷ್ಮೀ ಭಾಂವಿಹಾಳ, ಬಿ.ಆರ್. ಅಂಗಡಿ ಹಾಗೂ ಸಂಧಾನಕಾರ ಎ.ಎಫ್.ಪಟ್ಟಿಹಾಳ ಕಾರ್ಯನಿರ್ವಹಿಸಿದರು.ಲೋಕ ಅದಾಲತ್‌ನಲ್ಲಿ ಎಸ್.ಜಿ.ಬೂದಯ್ಯನವರಮಠ, ಸಿ.ಎಸ್.ಚಿಕ್ಕನಗೌಡ್ರ, ಎಸ್.ಜೆ.ಭಾಂವಿ, ಎಂ.ಆರ್.ಸೋಮನ್ನವರ, ಡಿ.ವೈ.ಗರಗದ, ಎಸ್.ಐ.ಹೋಳಿ, ಐ.ಡಿ.ಒಂಟಿ, ಎಸ್.ಐ.ಪಾಟೀಲ, ವಿಜಯಲಕ್ಷ್ಮೀ ಹಿರೇಮಠ, ಸಂಜೀವ ಜುಮೇತ್ರಿ, ರೂಪಶ್ರೀ ಪತ್ತಾರ, ಅಪರ ಸರ್ಕಾರಿ ವಕೀಲ ರಮೇಶ ಕೋಲಕಾರ, ಶಿರಸ್ತೇದಾರ ಎಂ.ಎನ್.ಬಡವನ್ನವರ, ಹಾಲೇಶ.ಪಿ, ಉಮೇಶ ಕಾರಜೋಳ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯರು ಮತ್ತು ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.