ಸಾರಾಂಶ
ಶಿವಮೊಗ್ಗ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ ರಾಜಿಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಇತ್ಯರ್ಥಪಡಿಸಲು ‘ಲೋಕ್ ಅದಾಲತ್’ ಕಾರ್ಯಕ್ರಮವನ್ನು ಮಾ.8 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಪಕ್ಷಗಾರರು ಪಾಲ್ಗೊಂಡು ತಮ್ಮ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ತಿಳಿಸಿದರು.ಇಲ್ಲಿನ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಲೋಕ್ ಅದಾಲತ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್ ಬೌನ್ಸ್, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು ಹಾಗೂ ಕಲಂ 6 ಹಿಂದೂ ವಾರಸು ಕಾಯ್ದೆಗೆ ಸಂಬಂಧಿಸಿದಂತೆ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ವಿನೀತ ಶರ್ಮ ವಿರುದ್ಧ ರಾಕೇಶ್ ಶರ್ಮ ಮತ್ತು ಇತರರು ಪ್ರಕರಣದಲ್ಲಿ 2020ರ ಆಗಸ್ಟ್ 11ರಂದು ನೀಡಿರುವ ತೀರ್ಪಿನನ್ವಯ ಹೆಣ್ಣು ಮಕ್ಕಳಿಗೂ ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಸಮ ಪಾಲಿಗೆ ಸಂಬಂಧಿಸಿದ್ದು, ವಿಭಜನಾ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳನ್ನು ಗುರುತಿಸಿ, ಈ ಪ್ರಕರಣಗಳ ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ಅವರ ಒಪ್ಪಿಗೆಯ ಪ್ರಕಾರ ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥ ಮಾಡಲಾಗುವುದು ಎಂದರು.2024ರ ಡಿಸೆಂಬರ್ 14 ರಂದು ನಡೆದ ಲೋಕ್ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ನ್ಯಾಯವಾದಿಗಳು, ವಿಮೆ ಕಂಪನಿಯ ಅಧಿಕಾರಿಗಳು, ಪ್ಯಾನಲ್ ವಕೀಲರುಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರದಿಂದ 15383 ಪ್ರಕರಣಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಅವುಗಳ ಪೈಕಿ 13393 ವಿಲೇವಾರಿಗೊಂಡಿದೆ ಎಂದು ವಿವರಿಸಿದರು.ಪ್ರಸ್ತುತ ನಮ್ಮ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿನ ಬಾಕಿ ಇರುವ ಪ್ರಕರಣಗಳ ಒಟ್ಟು ಸಂಖ್ಯೆ 50 ಸಾವಿರ ಇದ್ದು, ಅವುಗಳ ಪೈಕಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಿಂದ ಒಟ್ಟು 15 ಸಾವಿರ ಪ್ರಕರಣಗಳನ್ನು ಮಾ.8 ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್‌ಗಾಗಿ ಗುರುತಿಸಲಾಗಿದ್ದು, ಅವುಗಳನ್ನು ಇತ್ಯರ್ಥಗೊಳಿಸಲಾಗುತ್ತದೆ ಎಂದ ಅವರು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಆ ಪ್ರಕರಣಗಳನ್ನು ರಾಜಿಸಂಧಾನಕ್ಕಾಗಿ ಚಾಲ್ತಿಯಲ್ಲಿರುತ್ತದೆ ಎಂದರು.ಸಂಧಾನಕ್ಕೆ ಮಹಿಳಾ ವಕೀಲರಿಗೆ ಮಾನ್ಯತೆ:ಮಾ.8 ರಂದು ರಾಷ್ಟ್ರೀಯ ಮಹಿಳಾ ದಿನಾಚರಣೆ ಇರುವುದರಿಂದ ಅಂದೇ ಲೋಕ್ ಅದಾಲತ್ ನಡೆಯುತ್ತಿದ್ದು, ಜಿಲ್ಲಾ ನ್ಯಾಯಾಲಯವು ಮಹಿಳಾ ಗೌರವ ಸಮರ್ಪಣೆಗಾಗಿ ಎಲ್ಲಾ ಪ್ರಕರಣಗಳ ಸಂಧಾನಕ್ಕೆ ಮಹಿಳಾ ವಕೀಲರನ್ನು ನೇಮಿಸಿದೆ. ತಾಲೂಕು ಒಳಗೊಂಡಂತೆ ಒಟ್ಟು 38 ಬೆಂಜ್‌ಗಳನ್ನು ಸಿದ್ಧಪಡಿಸಿದ್ದು, ಮಹಿಳಾ ವಕೀಲರಿಗೆ ಮಾನ್ಯತೆ ನೀಡಿಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಕುಮಾರ್ ಇದ್ದರು.