ಅಚ್ಚರಿಯ ಗೆಲುವಿನ ನಗೆ ಬೀರಿದ ‘ಮೋಹನ’

| Published : Jun 05 2024, 01:30 AM IST / Updated: Jun 05 2024, 12:00 PM IST

ಸಾರಾಂಶ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ್ದಾರೆ

 ಬೆಂಗಳೂರು :  ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರು ಅಂತಿಮ ಸುತ್ತುಗಳಲ್ಲಿ ಅಚ್ಚರಿ ಎನ್ನುವಂತೆ ಭರ್ಜರಿ ಲೀಡ್ ಪಡೆಯುವ ಮೂಲಕ ಸತತ ನಾಲ್ಕನೇ ಬಾರಿ ಗೆಲುವಿನ ನಗೆ ಬೀರಿದ್ದಾರೆ.

ಒಂದು ಹಂತದಲ್ಲಿ ಬರೋಬ್ಬರಿ 83,381 ಮತಗಳ ಲೀಡ್‌ ಪಡೆದು ಗೆದ್ದೇ ಬಿಟ್ಟೆವು ಎಂದು ಸಂಭ್ರಮಾಚರಣೆ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಕೊನೆ ಕ್ಷಣದಲ್ಲಿ ನಿರಾಸೆಗೊಂಡರು. 32,707 ಮತಗಳ ಅಂತರದಿಂದ ಗೆಲುವು ದಾಖಲಿಸುವ ಮೂಲಕ ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿತು.

ಅಂಚೆ ಮತ ಎಣಿಕೆಯಲ್ಲಿ ಮುನ್ನಡೆಯೊಂದಿಗೆ ಆರಂಭದಲ್ಲೇ ಬಿಜೆಪಿಗೆ ಮುನ್ನಡೆ ದೊರಕಿತು. ಕೆಲವು ಸುತ್ತುಗಳ ಎಣಿಕೆ ನಂತರ ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್‌ ನಿರಂತರವಾಗಿ ಲೀಡ್ ಪಡೆದುಕೊಳ್ಳುತ್ತಲೇ ಸಾಗಿದರು. ಒಂದು ಹಂತದಲ್ಲಿ 83,381 ಲೀಡ್ ಬಂದಾಗ ಬಿಜೆಪಿ ಬೆಂಬಲಿಗರ ಮುಖದಲ್ಲಿ ಆತಂಕ ಆವರಿಸಿತು. ಇತ್ತ ಕಾಂಗ್ರೆಸಿಗರು ಸಂಭ್ರಮಾಚರಣೆ ಆರಂಭಿಸಿದರು. ಆದರೆ, ಗಾಂಧಿನಗರ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳ ಎಣಿಕೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಮುನ್ನಡೆಯ ಗ್ರಾಫ್ ಕುಸಿಯುತ್ತಾ ಸಾಗಿತು.

ಸಚಿವ ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 23,324 ಲೀಡ್ ಪಡೆದರೆ ಬಿಜೆಪಿಯ ಭದ್ರಕೋಟೆ ಮಹದೇವಪುರದಲ್ಲಿ ಭರ್ಜರಿ 1.14 ಲಕ್ಷ ಮುನ್ನಡೆಯೊಂದಿಗೆ ಬಿಜೆಪಿಯ ಗೆಲುವು ದಾಖಲಿಸಿತು. ಮಹದೇವಪುರ ವಿಧಾನಸಭಾ ಕ್ಷೇತ್ರದ ಲೀಡ್ ಬಿಜೆಪಿ ಗೆಲುವಿನಲ್ಲಿ ನಿರ್ಣಾಯಕವಾಗಿತ್ತು.

2019ರಲ್ಲಿ 70,968 ಮತಗಳ ಅಂತರದಿಂದ ಪಿ.ಸಿ.ಮೋಹನ್ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಗೆಲುವಿನ ಅಂತರ ಅರ್ಧದಷ್ಟು ಕಡಿಮೆಯಾಗಿದೆ.

ಒಟ್ಟು 12,126 ಮತದಾರರು ನೋಟಾ ಒತ್ತಿದ್ದಾರೆ. ಮತ್ತೊಂದೆಡೆ ವಿವಿಧ ಪಕ್ಷಗಳು ಮತ್ತು ಸ್ವತಂತ್ರವಾಗಿ ಸ್ಪರ್ಧಿಸಿರುವ 22 ಅಭ್ಯರ್ಥಿಗಳಲ್ಲಿ ಯಾರೊಬ್ಬರು ನೋಟಾ ಸಂಖ್ಯೆಯನ್ನು ದಾಟಿಲ್ಲ. ಈ ಮೂಲಕ 22 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಸಂಭ್ರಮಾಚರಣೆ ಮಾಡಿದ್ದಕಾಂಗ್ರೆಸ್ ಬೆಂಬಲಿಗರು!

ಮನ್ಸೂರ್ ಅಲಿ ಖಾನ್ 83,381 ಮತಗಳ ಲೀಡ್ ಪಡೆದಿದ್ದರು. ಉತ್ತಮ ಲೀಡ್ ಹಿನ್ನೆಲೆಯಲ್ಲಿ ಗೆಲುವು ನಿಶ್ಚಿತ ಎಂದು ಭಾವಿಸಿದ ಕಾಂಗ್ರೆಸ್ ಬೆಂಬಲಿಗರು ಮತಎಣಿಕೆ ಕೇಂದ್ರದ ಎದುರು ಸಂಭ್ರಮಾಚರಣೆ ಆರಂಭಿಸಿದರು. ಘೋಷಣೆ ಕೂಗಿ ಗೆಲುವಿನ ಚಿಹ್ನೆ ತೋರಿಸಿದ್ದರು. ಈ ವೇಳೆ ಬಿಜೆಪಿ ಬೆಂಬಲಿಗರು ಆತಂಕಕ್ಕೆ ಒಳಗಾಗಿದ್ದರು. ಕೆಲವೇ ಹೊತ್ತಿನ ಅಂತರದಲ್ಲಿ ಖುಷಿ-ಬೇಸರದ ಮುಖದೊಂದಿಗೆ ಭಿನ್ನ ಭಾವನೆಗಳಿಗೆ ಮೌಂಟ್ ಕಾರ್ಮೆಲ್ ಕಾಲೇಜು ಮತಎಣಿಕೆ ಕೇಂದ್ರ ಸಾಕ್ಷಿಯಾಯಿತು.

ಬೆಂಗಳೂರಿನ ಜನತೆಗೆಧನ್ಯವಾದ: ಮೋಹನ್

ಸತತ ನಾಲ್ಕನೇ ಬಾರಿಗೆ ನನಗೆ ಆಶೀರ್ವಾದ ಮಾಡಿರುವ ಕ್ಷೇತ್ರದ ಎಲ್ಲ ಮತದಾರರಿಗೆ ಧನ್ಯವಾದಗಳು. ಈ ಕ್ಷೇತ್ರವನ್ನು ಸ್ಪರ್ಧಿಸಲು ನನಗೆ ಅವಕಾಶ ಮಾಡಿಕೊಟ್ಟ ನಮ್ಮ ಪಕ್ಷದ ಎಲ್ಲಾ ನಾಯಕರಿಗೆ ಧನ್ಯವಾದಗಳು ಎಂದು ಪಿ.ಸಿ. ಮೋಹನ್ ಹೇಳಿದರು.

ನಿರಾಸೆಯಿಂದ ಹೊರನಡೆದ ಮನ್ಸೂರ್

ರಾಜಕೀಯ ಹಿನ್ನೆಲೆ, ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮನ್ಸೂರ್ ಅಲಿ ಖಾನ್ ಅವರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಮಹದೇವಪುರ ಕ್ಷೇತ್ರದ ಕೊನೆಯ ಸುತ್ತುಗಳ ಎಣಿಕೆ ಆರಂ‍ಭವಾಗಿ ನಿರಂತರವಾಗಿ ಲೀಡ್ ಕಡಿಮೆಯಾಗುತ್ತಿದ್ದಂತೆ ಮನ್ಸೂರ್ ಅಲಿ ಖಾನ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಮತಎಣಿಕೆ ಕೇಂದ್ರದಿಂದ ನಿರಾಸೆಯಿಂದ ಹೊರ ನಡೆದರು.

ಯಾರಿಗೆ ಎಷ್ಟು ಮತ?

ಬಿಜೆಪಿ- ಪಿ.ಸಿ.ಮೋಹನ್ - ಪಡೆದ ಮತಗಳು- 6,58,915 (ಗೆಲುವಿನ ಅಂತರ- 32,707)

ಕಾಂಗ್ರೆಸ್- ಮನ್ಸೂರ್ ಅಲಿ ಖಾನ್ - ಪಡೆದ ಮತಗಳು- 6,26,208

ನೋಟಾ ಒತ್ತಿದವರು- 12,126 ಜನ

ಬಿಎಸ್‌ಪಿ- ಸತೀಶ್‌ಚಂದ್ರ- 3,087

4 ಕಡೆ ಕಾಂಗ್ರೆಸ್,4 ಕಡೆ ಬಿಜೆಪಿ ಲೀಡ್

ಕಾಂಗ್ರೆಸ್ ಶಾಸಕರು ಇರುವ ಸರ್ವಜ್ಞ ನಗರ, ಶಿವಾಜಿ ನಗರ, ಶಾಂತಿ ನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಪಕ್ಷಕ್ಕೆ ಲೀಡ್ ನೀಡಿದವು. ಬಿಜೆಪಿ ಶಾಸಕರಿರುವ ಸಿ.ವಿ.ರಾಮನ್ ನಗರ, ರಾಜಾಜಿನಗರ, ಮಹದೇವಪುರ ಬಿಜೆಪಿಗೆ ಲೀಡ್ ನೀಡಿದವು. ಇನ್ನು ಸಚಿವ ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ಮಾತ್ರ ಬಿಜೆಪಿಗೆ ಲೀಡ್ ಭಾರಿ ಕುತೂಹಲ ಮೂಡಿಸಿದೆ.

ಯಾವ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಲೀಡ್?

ಕ್ಷೇತ್ರಕಾಂಗ್ರೆಸ್‌ಬಿಜೆಪಿ

ಸರ್ವಜ್ಞನಗರ1,40,79466,550ಸಿ.ವಿ.ರಾಮನ್‌ನಗರ53,34673,460

ಶಿವಾಜಿನಗರ70,73143,221

ಶಾಂತಿ ನಗರ70,18449,846

ಗಾಂಧಿನಗರ51,12374,447ರಾಜಾಜಿನಗರ36,48675,917

ಚಾಮರಾಜಪೇಟೆ87,11644,163ಮಹದೇವಪುರ1,15,5862,29,632

ಅಂಚೆ ಮತಗಳು8401,679