ಲೋಕಸಭಾ ಚುನಾವಣೆ: ಅಧಿಕಾರಿಗಳಿಂದ ಮತಗಟ್ಟೆ ವೀಕ್ಷಣೆ, ಸಭೆ

| Published : Mar 19 2024, 12:50 AM IST

ಲೋಕಸಭಾ ಚುನಾವಣೆ: ಅಧಿಕಾರಿಗಳಿಂದ ಮತಗಟ್ಟೆ ವೀಕ್ಷಣೆ, ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಆಯೋಗ ಲೋಕಸಭೆ ಚುನಾವಣಾ ದಿನಾಂಕವನ್ನು ನಿಗದಿಪಡಿಸಿ, ರಾಷ್ಟ್ರದಲ್ಲಿ ಒಟ್ಟು ಏಳು ಹಂತಗಳ ಚುನಾವಣೆಯಲ್ಲಿ 2ನೇ ಹಂತದಲ್ಲೇ ಚಿತ್ರದುರ್ಗ ಲೋಕಸಭಾ ಚುನಾವಣೆ ನಡೆಯಲಿದೆ. ಏ.26ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಮತಗಟ್ಟೆಗಳನ್ನು ಪರಿಶೀಲಿಸಲಾಯಿತು.

ಚಳ್ಳಕೆರೆ: ಚುನಾವಣಾ ಆಯೋಗ ಲೋಕಸಭೆ ಚುನಾವಣಾ ದಿನಾಂಕವನ್ನು ನಿಗದಿಪಡಿಸಿ, ರಾಷ್ಟ್ರದಲ್ಲಿ ಒಟ್ಟು ಏಳು ಹಂತಗಳ ಚುನಾವಣೆಯಲ್ಲಿ 2ನೇ ಹಂತದಲ್ಲೇ ಚಿತ್ರದುರ್ಗ ಲೋಕಸಭಾ ಚುನಾವಣೆ ನಡೆಯಲಿದೆ. ಏ.26ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಬಿ.ಆನಂದ್ ಚುನಾವಣೆಗಾಗಿ ನಿಯೋಜನೆಗೊಂಡ ವಿವಿಧ ವಿಭಾಗಗಳ ಅಧಿಕಾರಿಗಳ ತುರ್ತು ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚುನಾವಣಾ ಕರ್ತವ್ಯಕ್ಕೆ ಈಗಾಗಲೇ ನಿಗದಿಗೊಳಿಸಿದ ಎಲ್ಲಾ ಅಧಿಕಾರಿಗಳು ಕಾರ್ಯವ್ಯಾಪ್ತಿಯಲ್ಲಿ ತಾವು ನಿರ್ವಹಿಸುವ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸಬೇಕಿದೆ. ಯಾವುದೇ ಲೋಪವಾದರೆ ಚುನಾವಣಾ ಆಯೋಗಸಹಿಸುವುದಿಲ್ಲ. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಪ್ರತಿಯೊಬ್ಬ ಅಧಿಕಾರಿಯೂ ಚುನಾವಣಾ ನಿಯಮಗಳ ಬಗ್ಗೆ ಮಾಹಿತಿ ಪಡೆದು ಯಾವುದೇ ಲೋಪವಿಲ್ಲದಂತೆ ಕರ್ತವ್ಯ ನಿರ್ವಹಿಸಬೇಕು. ಲೆಕ್ಕಪತ್ರ ವಿಭಾಗ, ವಾಹನ ಪರವಾನಿಗೆ ವಿಭಾಗ, ಸೆಕ್ಟರ್ ಅಧಿಕಾರಿಗಳು ಹಾಗೂ ಇನ್ನಿತರ ಎಲ್ಲಾ ಚುನಾವಣಾ ಸಿಬ್ಬಂದಿ ಯಾವುದೇ ಸಮಸ್ಯೆ ಇದ್ದಲ್ಲಿ ಕೂಡಲೇ ತಮ್ಮ ಗಮನಕ್ಕೆ ತರುವಂತೆ ಸೂಚನೆ ನೀಡಿದರು.

ಮತಗಟ್ಟೆ ಕೇಂದ್ರಕ್ಕೆ ಭೇಟಿ: ನಗರದ ಹೊರವಲಯದ ಕಾಟಪ್ಪನಹಟ್ಟಿ, ಚಿತ್ರಯ್ಯನಹಟ್ಟಿ ಬೂತ್‌ಗಳಿಗೆ ತೆರಳಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಮತಗಟ್ಟೆ ಕೇಂದ್ರಗಳಲ್ಲಿ ಚುನಾವಣಾ ಆಯೋಗ ನಿರ್ದೇಶನ ನೀಡಿದಂತೆ ಸಂಬಂಧಪಟ್ಟ ಅಧಿಕಾರಿಗಳು ಕೆಲಸ ಮಾಡಬೇಕಾಗುತ್ತದೆ. ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ಶಾಂತಿ, ಸುವ್ಯವಸ್ಥಿತವಾಗಿ ನಡೆಯಲು ಅಗತ್ಯಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆ ನಿರ್ದೇಶನ ನೀಡಲಾಗಿದೆ. ಮತಗಟ್ಟೆ ಕೇಂದ್ರಗಳಲ್ಲಿ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದರು.

ತಹಸೀಲ್ದಾರ್ ರೇಹಾನ್‌ ಪಾಷ, ಠಾಣಾ ಇನ್ಸ್‌ಪೆಕ್ಟರ್‌ ಕೆ.ಕುಮಾರ್, ಚುನಾವಣಾ ಶಿರಸ್ತೇದಾರ್ ಹಸೀನಾ ಭಾನು, ಶ್ರೀಧರ, ಓಬಳೇಶ್, ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್ ಇದ್ದರು.