ಲೋಕಸಭಾ ಚುನಾವಣೆ: ಚೆಕ್ ಪೋಸ್ಟ್ ನಿರ್ಮಾಣಕ್ಕೆ ಸೂಚನೆ: ಡೀಸಿ

| Published : Mar 15 2024, 01:19 AM IST

ಲೋಕಸಭಾ ಚುನಾವಣೆ: ಚೆಕ್ ಪೋಸ್ಟ್ ನಿರ್ಮಾಣಕ್ಕೆ ಸೂಚನೆ: ಡೀಸಿ
Share this Article
  • FB
  • TW
  • Linkdin
  • Email

ಸಾರಾಂಶ

ಚೆಕ್ ಪೋಸ್ಟ್‌ ಟೆಂಟ್ ಗಳ ಮೇಲೆ ಚೆಕ್ ಪೋಸ್ಟ್ ಹೆಸರು, ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಮೊಬೈಲ್ ಸಂಖ್ಯೆ, ಆದಾಯ ತೆರಿಗೆ ಹಾಗೂ ವಾಣಿಜ್ಯ ತೆರಿಗೆ ನೋಡಲ್ ಅಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವಂತೆ ಡೀಸಿ ಕುಮಾರ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಸಭಾ ಚುನಾವಣಾ ವೇಳಪಟ್ಟಿ ಪ್ರಕಟವಾದ ತಕ್ಷಣ ಚೆಕ್ ಪೋಸ್ಟ್‌ಗಳ ಕಾರ್ಯನಿರ್ವಹಣೆ ಪ್ರಾರಂಭವಾಗಬೇಕಿದ್ದು, ಚೆಕ್ ಪೋಸ್ಟ್ ನಿರ್ಮಾಣ ಕೆಲಸ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ್ ತಿಳಿಸಿದರು.

ಗುರುವಾರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪೂರ್ವ ಸಿದ್ಧತಾ ಸಭೆ ನಡೆಸಿ ಅವರು ಮಾತನಾಡಿದರು‌. ಮದ್ದೂರು-4, ಮಳವಳ್ಳಿ-5, ಶ್ರೀರಂಗಪಟ್ಟಣ- 5, ನಾಗಮಂಗಲ -4 ಹಾಗೂ ಕೆ.ಆರ್.ಪೇಟೆ‌- 3 ಒಟ್ಟು 21 ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಚೆಕ್ ಪೋಸ್ಟ್ ಗಳು ವಾಹನ ಸಂಚಾರಕ್ಕೆ ಅಡೆ ತಡೆ ಉಂಟುಮಾಡದಂತೆ ನಿರ್ಮಾಣವಾಗಬೇಕು. ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಬಿಸಿಲು ಹೆಚ್ಚಿರುವುದರಿಂದ ಉತ್ತಮ ಫ್ಯಾನ್ ವ್ಯವಸ್ಥೆ ಮಾಡುವುದು. ಚೆಕ್ ಪೋಸ್ಟ್‌ ಟೆಂಟ್ ಗಳ ಮೇಲೆ ಚೆಕ್ ಪೋಸ್ಟ್ ಹೆಸರು, ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಮೊಬೈಲ್ ಸಂಖ್ಯೆ, ಆದಾಯ ತೆರಿಗೆ ಹಾಗೂ ವಾಣಿಜ್ಯ ತೆರಿಗೆ ನೋಡಲ್ ಅಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವಂತೆ ಸೂಚಿಸಿದರು.

ಚೆಕ್ ಪೋಸ್ಟ್ ನಿರ್ಮಾಣ ಸಂದರ್ಭದಲ್ಲಿ ಆಯಾ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿ, ಪೊಲೀಸ್ ಅಧಿಕಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಒಟ್ಟಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವ್ಯವಸ್ಥಿತವಾಗಿ ಚೆಕ್ ಪೋಸ್ಟ್ ನಿರ್ಮಾಣವಾಗಬೇಕು. ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ವಿ‌.ಎಸ್.ಟಿ,, ಎಸ್.ಎಸ್.ಟಿ ಯವರಿಗಾಗಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸುವಂತೆ ತಿಳಿಸಿದರು.

ಅಬಕಾರಿ ಇಲಾಖೆಯವರು ಅಬಕಾರಿ ಸನ್ನದ್ದುಗಳಲ್ಲಿರುವ ಸ್ಟಾಕ್ ಗಳನ್ನು ಪರಿಶೀಲಿಸಬೇಕು. ಕಳೆದ ಮೂರು ತಿಂಗಳಲ್ಲಿ‌ ಸ್ಟಾಕ್ ನಲ್ಲಿ ಏರಿಳಿತವಾಗಿದ್ದಲ್ಲಿ ವರದಿ ಸಿದ್ಧಪಡಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್. ಎಲ್. ನಾಗರಾಜು, ಅಬಕಾರಿ ಇಲಾಖೆ ಅಧಿಕಾರಿ ರವಿ ಶಂಕರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಹರ್ಷ, ಚುನಾವಣಾ ತಹಸೀಲ್ದಾರ್ ವೆಂಕಟಾಚಲಪತಿ ಸೇರಿ ಇತರರಿದ್ದರು.