ಸಾರಾಂಶ
ಬೆಂಗಳೂರು : ಆದಾಯಕ್ಕಿಂತ ಆಸ್ತಿ ಗಳಿಕೆ ಆರೋಪದ ಮೇಲೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಲೋಕಾಯುಕ್ತ ಪೊಲೀಸರು, ರಾಜ್ಯದ ನಾಲ್ವರು ಅಧಿಕಾರಿಗಳಿಗೆ ಸೇರಿದ 24 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ 26.55 ಕೋಟಿ ರು. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬೆಂಗಳೂರು, ಕೋಲಾರ, ದಾವಣಗೆರೆ ಮತ್ತು ಯಾದಗಿರಿಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬೆಂಗಳೂರಲ್ಲಿ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಶ್ರೀನಿವಾಸಮೂರ್ತಿ, ಕೋಲಾರದ ಸಮೀಕ್ಷೆ ಸೂಪರ್‌ವೈಸರ್ ಜಿ.ಸುರೇಶ್ ಬಾಬು, ದಾವಣಗೆರೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಬಿ.ರವಿ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪನಾಯಕ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ನಾಲ್ವರು ಅಧಿಕಾರಿಗಳಿಗೆ ಸೇರಿದ ನಿವಾಸ, ಕಚೇರಿ, ಸಂಬಂಧಿಕರ ಮನೆಗಳು ಸೇರಿ 24 ಸ್ಥಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ದಾಳಿ ವೇಳೆ ನಡೆದ ಶೋಧ ಕಾರ್ಯದಲ್ಲಿ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಶ್ರೀನಿವಾಸ ಮೂರ್ತಿ ನಿವಾಸದಲ್ಲಿ 10 ಲಕ್ಷ ರು. ನಗದು ಹಣ ಲಭ್ಯವಾಗಿದೆ. ಇನ್ನು, ಯಾದಗಿರಿಯ ಡಾ.ರಾಜಾ ವೆಂಕಪ್ಪನಾಯಕ್ ಬಳಿ 11.05 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಲಭ್ಯವಾಗಿದೆ. ಇವರಿಬ್ಬರ ಬಳಿಯೇ ಅತ್ಯಧಿಕ ಚಿನ್ನಾಭರಣ ಸಹ ದೊರತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಕುರಿತು ಶೋಧ ಕಾರ್ಯ ಮುಂದುವರಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ನಾಲ್ವರು ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ಶೋಧ ಕಾರ್ಯ ನಡೆಸಿದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಬಾಕ್ಸ್-
ಯಾರ ಮೇಲೆ ದಾಳಿ? ಎಷ್ಟು ಸಂಪತ್ತು ಪತ್ತೆ?
1. ಜಿ.ಶ್ರೀನಿವಾಸಮೂರ್ತಿ, ಕಾರ್ಯನಿರ್ವಾಹಕ ಎಂಜಿನಿಯರ್, ಬಿಬಿಎಂಪಿ, ಮಲ್ಲೇಶ್ವರ ವಲಯ, ಬೆಂಗಳೂರು
ಒಟ್ಟು 9 ಸ್ಥಳಗಳ ಮೇಲೆ ಕಾರ್ಯಾಚರಣೆ, 4 ಸೈಟ್, 6 ವಾಸದ ಮನೆ ಸೇರಿ 2.49 ಕೋಟಿ ರು.ಮೌಲ್ಯದ ಸ್ಥಿರಾಸ್ತಿ, 10 ಲಕ್ಷ ರು. ನಗದು, 72 ಲಕ್ಷ ರು. ಮೌಲ್ಯದ ಚಿನ್ನಾಭರಣ, 12.70 ಲಕ್ಷ ರು. ಮೌಲ್ಯದ ವಾಹನಗಳು ಸೇರಿ 95.70 ಲಕ್ಷ ರು. ಮೌಲ್ಯದ ಚರಾಸ್ತಿ. ಒಟ್ಟು 3.45 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.
2. ಜಿ.ಸುರೇಶ್ ಬಾಬು, ಸಮೀಕ್ಷೆ ಸೂಪರ್‌ವೈಸರ್, ಕೋಲಾರ
ಒಟ್ಟು ಆರು ಸ್ಥಳಗಳ ಮೇಲೆ ದಾಳಿ. 3 ನಿವೇಶನ, 5 ವಾಸದ ಮನೆ, 5 ಎಕರೆ ಕೃಷಿ ಜಮೀನು ಸೇರಿ 6.50 ಕೋಟಿ ರು. ಮೌಲ್ಯದ ಸ್ಥಿರಾಸ್ತಿ, ಮೂರು ಲಕ್ಷ ರು. ನಗದು, 18.24 ಲಕ್ಷ ರು. ಮೌಲ್ಯದ ಚಿನ್ನಾಭರಣ, 80 ಲಕ್ಷ ರು. ಮೌಲ್ಯದ ವಾಹನ, 66.87 ಲಕ್ಷ ರು. ಮೌಲ್ಯದ ಗೃಹೋಪಯೋಗಿ ವಸ್ತು ಸೇರಿ 1.68 ಕೋಟಿ ರು. ಮೌಲ್ಯದ ಚರಾಸ್ತಿ ಪತ್ತೆ. ಒಟ್ಟು 8.18 ಕೊಟಿ ರು. ಮೌಲ್ಯದ ಆಸ್ತಿ ಪತ್ತೆ. 3. ಎಂ.ಬಿ.ರವಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಮಡಿ ಮಂಡಳಿ, ದಾವಣಗೆರೆ
ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ. 4 ನಿವೇಶನ, 2 ವಾಸದ ಮನೆ ಸೇರಿ 1.25 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಪತ್ತೆ. 31.500 ರು. ನಗದು, 35.72 ಲಕ್ಷ ರು. ಮೌಲ್ಯದ ಚಿನ್ನಾಭರಣ, 20.77 ಲಕ್ಷ ರು. ಮೌಲ್ಯದ ವಾಹನಗಳು, 50 ಲಕ್ಷ ರು. ಮೌಲ್ಯದ ಗೃಹಪಯೋಗಿ ವಸ್ತುಗಳು ಸೇರಿ 1.06 ಕೋಟಿ ರು. ಮೌಲ್ಯದ ಚರಾಸ್ತಿ. ಒಟ್ಟು ಆಸ್ತಿ ಮೌಲ್ಯ 2.31 ಕೋಟಿ ರು.
4. ಡಾ.ರಾಜಾ ವೆಂಕಪ್ಪ ನಾಯಕ, ಸುರಪುರ ತಾಲೂಕು ಆರೋಗ್ಯಾಧಿಕಾರಿ, ಯಾದಗಿರಿ
ಐದು ಸ್ಥಳಗಳಲ್ಲಿ ತಪಾಸಣೆ. 11 ನಿವೇಶನ, 2 ವಾಸದ ಮನೆ, 13 ಎಕರೆ ಕೃಷಿ ಜಮೀನು, 1 ಪೆಟ್ರೋಲ್ ಬಂಕ್, 1 ನರ್ಸಿಂಗ್ ಹೋಂ, 1 ಲಾಡ್ಜ್ ಮತ್ತು ಬಾರ್ ಸೇರಿ 11.05 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಪತ್ತೆ. 4.10 ಲಕ್ಷ ರು. ನಗದು, 60 ಲಕ್ಷ ರು. ಮೌಲ್ಯದ ಚಿನ್ನಾಭರಣ, 70 ಲಕ್ಷ ರು. ಮೌಲ್ಯದ ವಾಹನಗಳು, 20 ಲಕ್ಷ ರು. ಮೌಲ್ಯದ ಗೃಹೋಪಯೋಗಿ ವಸ್ತುಗಳ ಸೇರಿ 1.54 ಕೋಟಿ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು 12.59 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.