ಸಾರಾಂಶ
ಪ್ರಾಧಿಕಾರಕ್ಕೆ ಸೇರಿದ್ದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಶೆಡ್ ಮತ್ತು ಕಾಂಪೌಂಡ್ ತೆರವುಗೊಳಿಸಿ ₹3.10 ಕೋಟಿ ಮೌಲ್ಯದ ಆಸ್ತಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಕ್ಕೆ ಪಡೆದಿದೆ.
ಬೆಂಗಳೂರು : ಪ್ರಾಧಿಕಾರಕ್ಕೆ ಸೇರಿದ್ದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಶೆಡ್ ಮತ್ತು ಕಾಂಪೌಂಡ್ ತೆರವುಗೊಳಿಸಿ ₹3.10 ಕೋಟಿ ಮೌಲ್ಯದ ಆಸ್ತಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಕ್ಕೆ ಪಡೆದಿದೆ.
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ, ಹೆಮ್ಮಿಗೆಪುರ ಗ್ರಾಮದಲ್ಲಿ 2100 ಚದರ ಅಡಿ ಜಾಗದಲ್ಲಿ ಒತ್ತುವರಿದಾರರು ಅನಧಿಕೃತವಾಗಿ ಶೆಡ್ ಮತ್ತು ಕಾಂಪೌಂಡನ್ನು ನಿರ್ಮಿಸಿದ್ದರು. ಬಿಡಿಎ ಒತ್ತುವರಿ ತೆರವುಗೊಳಿಸುವಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಒತ್ತುವರಿ ತೆರವು ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಬಿಡಿಎ ಅಧಿಕಾರಿಗಳು ಜೆಸಿಬಿ ನೆರವಿನಿಂದ ಅನಧಿಕೃತ ಕಾಂಪೌಂಡ್, ಶೆಡ್‌ಗಳನ್ನು ತೆರವುಗೊಳಿಸಿದರು. ಪ್ರಸ್ತುತ ಮಾರುಕಟ್ಟೆಯಲ್ಲಿ ಈ ಜಾಗದ ಮೌಲ್ಯ ₹3.10 ಕೋಟಿ ಎಂದು ಅಂದಾಜಿಸಲಾಗಿದೆ.
ಬಿಡಿಎ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ದಕ್ಷಿಣ ವಿಭಾಗದ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರರ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದರು ಎಂದು ಬಿಡಿಎ ಪ್ರಕಟಣೆ ತಿಳಿಸಿದೆ.