ಕೋಟ್ಯಂತರ ರು. ಮೌಲ್ಯದ ಆಸ್ತಿ ಹೊಂದಿರುವ ಮುಂಗಳಮುಖಿ ಹತ್ಯೆ : ಪತಿ ಮೇಲೆ ಅನುಮಾನ

| N/A | Published : Apr 21 2025, 01:32 AM IST / Updated: Apr 21 2025, 06:45 AM IST

ಕೋಟ್ಯಂತರ ರು. ಮೌಲ್ಯದ ಆಸ್ತಿ ಹೊಂದಿರುವ ಮುಂಗಳಮುಖಿ ಹತ್ಯೆ : ಪತಿ ಮೇಲೆ ಅನುಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಯಲ್ಲೇ ಕೋಟ್ಯಂತರ ರು. ಮೌಲ್ಯದ ಆಸ್ತಿ ಹೊಂದಿರುವ ಮಂಗಳಮುಖಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  ಬೆಂಗಳೂರು : ಮನೆಯಲ್ಲೇ ಕೋಟ್ಯಂತರ ರು. ಮೌಲ್ಯದ ಆಸ್ತಿ ಹೊಂದಿರುವ ಮಂಗಳಮುಖಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್‌.ಪುರದದ ಸೀಗೆಹಳ್ಳಿ ನಿವಾಸಿ ತನುಶ್ರೀ(45) ಕೊಲೆಯಾದ ಮಂಗಳಮುಖಿ. 3 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ತನುಶ್ರೀ ಮುಂಗಳಮುಖಿ ಎಂಬ ವಿಚಾರ ಗೊತ್ತಿದ್ದೂ ಮೂರು ತಿಂಗಳ ಹಿಂದೆಯಷ್ಟೇ ಜಗದೀಶ್‌ ಎಂಬಾತ ಮದುವೆಯಾಗಿದ್ದ ಎನ್ನಲಾಗಿದೆ. ಸದ್ಯ ಜಗದೀಶ್‌ ನಾಪತ್ತೆಯಾಗಿದ್ದು, ಆತನೇ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ವಿವರ:

ಸೀಗೆಹಳ್ಳಿಯಲ್ಲಿ ತನುಶ್ರೀಗೆ ಸ್ವಂತ ಮನೆಯಿದ್ದು, ನೆಲಮಹಡಿಯಲ್ಲಿ ಜಗದೀಶ್‌ ಜತೆಗೆ ನೆಲೆಸಿದ್ದರು. ಮೂರು ದಿನಗಳ ಹಿಂದೆ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿರುವ ಸಾಧ್ಯತೆಯಿದೆ. ಈ ವೇಳೆ ಜಗದೀಶ್‌ ಚಾಕುವಿನಿಂದ ತನುಶ್ರೀಯನ್ನು ಇರಿದು ಕೊಲೆ ಮಾಡಿ ಬಳಿಕ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮುಂಗಳಮುಖಿ ಸ್ನೇಹಿತೆಯರು ಹಲವು ಬಾರಿ ತನುಶ್ರೀಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಭಾನುವಾರ ಬೆಳಗ್ಗೆ ಮನೆ ಬಳಿ ಬಂದು ನೋಡಿದಾಗ ಮನೆಗೆ ಬೀಗ ಹಾಕಿರುವುದು ಕಂಡು ಬಂದಿದೆ.

ಕೊಳೆತ ಸ್ಥಿತಿಯಲ್ಲಿ ಮೃತದೇಹ:

ಈ ಬಗ್ಗೆ ಅನುಮಾನಗೊಂಡು ಬಳಿಕ ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ನೆಲೆಸಿದ್ದ ತನುಶ್ರೀಯ ಸಹೋದರನ ಸಹಾಯ ಪಡೆದು ಮನೆಯ ಬೀಗ ಮುರಿದು ಒಳಗೆ ಹೋಗಿ ನೋಡಿದಾಗ ತನುಶ್ರೀ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಕೆ.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಜಿಒ ನಡೆಸುತ್ತಿದ್ದಕೋಟ್ಯಾಧೀಶೆ ತನುಶ್ರೀ

ಕೊಲೆಯಾದ ಮಂಗಳಮುಖಿ ತನುಶ್ರೀ ಕೋಟ್ಯಂತರ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. ಸ್ವಂತ ಮನೆ, ವಾಣಿಜ್ಯ ಕಟ್ಟಡಗಳು ಸೇರಿದಂತೆ ಸಾಕಷ್ಟು ಹಣ ಹಾಗೂ ಚಿನ್ನಾಭರಣ ಹೊಂದಿದ್ದರು. ಕನ್ನಡಪರ ಸಂಘಟನೆಗಳಲ್ಲಿ ತನುಶ್ರೀ ಗುರುತಿಸಿಕೊಂಡಿದ್ದರು. ಜತೆಗೆ ತಾವೇ ಒಂದು ಸರ್ಕಾರೇತರ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು. ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ನಡುವೆ ಮೂರು ತಿಂಗಳ ಹಿಂದೆ ಜಗದೀಶ್‌ ಮದುವೆಯಾಗಿ ತನುಶ್ರೀ ಮನೆಯಲ್ಲೇ ನೆಲೆಸಿದ್ದ. ಆತನಿಗೆ ಇದು ಎರಡನೇ ಮದುವೆ ಎನ್ನಲಾಗಿದೆ. ಆಸ್ತಿ ವಿಚಾರವಾಗಿ ಆತನೇ ತನುಶ್ರೀಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.