ಸಾರಾಂಶ
ಹೊನ್ನಾವರದಲ್ಲಿ ಗರ್ಭಿಣಿ ಗೋವನ್ನು ಹತ್ಯೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಭಟ್ಕಳದಲ್ಲಿಯೂ ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದರಿಂದ ನಾಗರಿಕರು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ಭಟ್ಕಳ: ತಾಲೂಕಿನ ವೆಂಕಟಾಪುರದ ಕುಕನೀರ್ ಪ್ರದೇಶದ ವೆಂಕಟಾಪುರ ನದಿಯ ದಂಡೆಯ ಮೇಲೆ ಗಬ್ಬದ ಹಸುವನ್ನು ಕಡಿದು ಮಾಂಸ ಮಾಡಿ, ಹಸುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಚೀಲದಲ್ಲಿ ಸುತ್ತಿ ಬಿಸಾಡಿ ಹೋಗಿದ್ದ ಆರೋಪಿಯನ್ನು ಎರಡೇ ದಿನದಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಗೋವನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಹನೀಫಾಬಾದ್ ನಿವಾಸಿ ಮೊಹಮ್ಮದ್ ಇಬ್ರಾಹಿಂ ಹವ್ವಾ ಎಂದು ಗುರುತಿಸಲಾಗಿದೆ.
ಹೊನ್ನಾವರದಲ್ಲಿ ಗರ್ಭಿಣಿ ಗೋವನ್ನು ಹತ್ಯೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಭಟ್ಕಳದಲ್ಲಿಯೂ ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದರಿಂದ ನಾಗರಿಕರು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಎಸ್.ಪಿ ಎಂ.ನಾರಾಯಣ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಹೇಶ ಕೆ. ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ತನಿಖಾ ತಂಡವು ಹಗಲು ರಾತ್ರಿ ಕಾರ್ಯಾಚರಣೆ ಮಾಡಿ, ವೈಜ್ಞಾನಿಕ ಹಿನ್ನೆಲೆಯಲ್ಲಿ ಹಾಗೂ ಮಾಂಸ ಮಾರುವವರ, ಈ ಹಿಂದೆ ದನಗಳ್ಳತನ ಮಾಡಿರುವವರನ್ನು ಸೇರಿದಂತೆ ಎಲ್ಲ ಆಯಾಮಗಳಲ್ಲಿಯೂ ತನಿಖೆ ಮಾಡಿ ಗೋವನ್ನು ಹತ್ಯೆ ಮಾಡಿದವನನ್ನು ಗುರುತಿಸುವಲ್ಲಿ ಯಶಸ್ವೀಯಾಗಿದ್ದ ಶನಿವಾರ ರಾತ್ರಿಯೇ ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಭಟ್ಕಳದಲ್ಲಿ ಗೋವು ಕಳ್ಳತನ, ಗೋವು ಹತ್ಯೆ ಸಾಮಾನ್ಯವಾಗಿದ್ದು ಇತ್ತೀಚೆಗಷ್ಟೇ ಜಾಲಿಯಲ್ಲಿ ಗೋವು ಕಳ್ಳತನದ ಪ್ರಕರಣ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಪ್ರಕರಣದಲ್ಲಿಯೂ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದನ್ನು ಸ್ಮರಿಸಬಹುದು. ಆದರೂ ಪದೇಪದೇ ಗೋವು ಕಳ್ಳತನ, ಗೋವು ಹತ್ಯೆ ಮಾತ್ರ ನಿಂತಿಲ್ಲ. ಅಂತವರ ಮೇಲೆ ಕಠಿಣ ಕ್ರಮ ತೆಗೆದುಕೊಂಡಾಗ ಮಾತ್ರ ಇದನ್ನು ತಡೆಯಲು ಸಾಧ್ಯವಾಗುವುದು.