ಗಬ್ಬದ ಹಸು ಹತ್ಯೆ ನಡೆಸಿ ವಿಕೃತಿ ಮೆರೆದವರನ್ನು ಬಂಧಿಸಲು ಹಿಂಜಾವೇ ಆಗ್ರಹ

| Published : Apr 20 2025, 01:55 AM IST

ಗಬ್ಬದ ಹಸು ಹತ್ಯೆ ನಡೆಸಿ ವಿಕೃತಿ ಮೆರೆದವರನ್ನು ಬಂಧಿಸಲು ಹಿಂಜಾವೇ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮನವಿಯಲ್ಲಿ ಭಟ್ಕಳದಲ್ಲಿ ಗೋ ಹತ್ಯೆ ಮಾಡಲು ಹಲವು ಭಾಗಗಳಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸಿದ್ದು ಹಾಗೂ ಗೋವುಗಳನ್ನು ಕೂಡಿಟ್ಟು ಗೋ ಹತ್ಯೆ ಮಾಡುತ್ತಿರುವ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿವೆ.

ಭಟ್ಕಳ; ಇಲ್ಲಿನ ವೆಂಕಟಾಪುರದ ಕುಕನೀರದಲ್ಲಿ ಮಾಂಸಕ್ಕಾಗಿ ಗಬ್ಬದ ಹಸುವನ್ನು ಹತ್ಯೆಗೈದು ಕರುವಿನ ಭ್ರೂಣ ಹಾಗೂ ಗೋಮಾಂಸದ ತ್ಯಾಜ್ಯವನ್ನು ಸಾರ್ವಜನಿಕ ಪ್ರದೇಶದಲ್ಲಿ ಎಸೆದು ವಿಕೃತಿ ಮೆರೆದಿರುವವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.ಮನವಿಯಲ್ಲಿ ಭಟ್ಕಳದಲ್ಲಿ ಗೋ ಹತ್ಯೆ ಮಾಡಲು ಹಲವು ಭಾಗಗಳಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸಿದ್ದು ಹಾಗೂ ಗೋವುಗಳನ್ನು ಕೂಡಿಟ್ಟು ಗೋ ಹತ್ಯೆ ಮಾಡುತ್ತಿರುವ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿವೆ. ಅಲ್ಪಸಂಖ್ಯಾತರನ್ನು ಓಲೈಸಲು ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆಗೆ ಪರೋಕ್ಷವಾಗಿ ಸಹಕರಿಸುವ ಮೂಲಕ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿರುವುದನ್ನು ಹಿಂದೂ ಜಾಗರಣಾ ವೇದಿಕೆ ಹಾಗೂ ಭಟ್ಕಳದ ಸಮಸ್ತ ಹಿಂದೂ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು.

ತಾಲೂಕಿನ ಎಲ್ಲ ಚೆಕ್ ಪೋಸ್ಟ್ ಗಳನ್ನು ಚುರುಕುಗೊಳಿಸಿ ಅಕ್ರಮ ಗೋ ಸಾಗಾಟಕ್ಕೆ ಕಡಿವಾಣ ಹಾಕುವುದರ ಜೊತೆಗೆ ರಾತ್ರಿ ಸಮಯದಲ್ಲಿ ಮನೆಯಲ್ಲಿ ಸಾಕಿದ ಗೋವುಗಳನ್ನು ಕಳ್ಳತನ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

ಈ ಹಿಂದೆಯೂ ಸಹ ಹಲವು ಭಾರಿ ಭಟ್ಕಳದಲ್ಲಿ ಪ್ರತಿಭಟನೆ ಮಾಡಿ ತಾಲೂಕು ಆಡಳಿತಕ್ಕೆ ಮನವಿ ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರೂ ತಾಲೂಕು ಆಡಳಿತವು ಪೊಲೀಸ್ ಇಲಾಖೆಯೊಂದಿಗೆ ಸೂಕ್ತ ಸಮನ್ವಯ ಸಾಧಿಸಿ ಅಕ್ರಮ ಗೋ ಸಾಗಾಟ ಹಾಗೂ ಗೋ ಹತ್ಯೆಯನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿರುವುದು ಗ್ರಾಮ ಪಂಚಾಯತ್ ಹೆಬಳೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯೇ ಸಾಕ್ಷಿಯಾಗಿರುತ್ತದೆ. ಪದೇಪದೇ ಗೋ ಹಂತಕರು ಹಿಂದೂಗಳ ಭಾವನೆಗೆ ದಕ್ಕೆ ತರಲೆಂದೇ ಇಂತಹ ಅಮಾನವಿಯ ಹೇಯ ಕೃತ್ಯವನ್ನು ಮಾಡುತ್ತಿರುವುದು ಕಂಡುಬರುತ್ತಿದೆ. ಹೊನ್ನಾವರ ಘಟನೆ ಮಾಸುವ ಮುನ್ನವೇ ಕೋಮು ಸೂಕ್ಷ್ಮ ಪ್ರದೇಶ ಭಟ್ಕಳದಲ್ಲಿ ಇಂತಹ ಘಟನೆ ಸಂಭವಿಸುತ್ತಿರುವುದು ಭಟ್ಕಳದಲ್ಲಿ ಅಶಾಂತಿ ಮತ್ತು ಗಲಭೆ ಸೃಷ್ಟಿಸುವ ಹುನ್ನಾರವೇ ಆಗಿದೆ. ಒಂದೊಮ್ಮೆ ಈ ಆಗ್ರಹವನ್ನು ನಿರ್ಲಕ್ಷ್ಯ ಮಾಡಿ ಅಮಾನವೀಯವಾಗಿ ಗೋವುಗಳನ್ನು ಹತ್ಯೆ ಮಾಡಿದ ಹಂತಕರನ್ನು ಬಂಧಿಸದೇ ಇದ್ದಲ್ಲಿ ಹಿಂದೂ ಜಾಗರಣ ವೇದಿಕೆ ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸಿಕೊಂಡು ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ಮಾಡುವುದು ಅನಿವಾರ್ಯವಾದೀತು ಎಂದರು.

ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮನವಿ ಸ್ವೀಕರಿಸಿದರು. ವೇದಿಕೆಯ ಸಂಚಾಲಕ ಜಯಂತ ನಾಯ್ಕ ಬೆಣಂದೂರು, ಸಹ ಸಂಚಾಲಕ ನಾಗೇಶ ನಾಯ್ಕ, ಮುಖಂಡರಾದ ದಿನೇಶ ನಾಯ್ಕ, ಸುಬ್ರಾಯ ದೇವಾಡಿಗ, ಶ್ರೀಕಾಂತ ನಾಯ್ಕ, ದಯಾನಂದ ನಾಯ್ಕ ಮುಂತಾದವರಿದ್ದರು.

ಭಟ್ಕಳದ ಹೆಬೆಳೆಯ ಕುಕನೀರದಲ್ಲಿ ಗಬ್ಬದ ಹಸುವನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಹಿಂಜಾವೇಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಿರುವುದು.