ಪರೀಕ್ಷೆಗೆ ಸಿದ್ಧತೆ ಸರಿಯಾಗಿ ಮಾಡಿಕೊಳ್ಳಿ. ಸಮಯ ನಿಮ್ಮ ಪೋಷಕರು ನಿಮ್ಮ ಬಗ್ಗೆ ಇಟ್ಟಿರುವ ನಂಬಿಕೆ ಹುಸಿಯಾಗಿಸದಿರಿ, ಪರೀಕ್ಷೆ ಮುಗಿಯುವವರೆಗೂ, ಟಿವಿ, ಮೊಬೈಲ್ ದೂರವಿಡಿ, ಮನೆಯ ಊಟ ಮಾತ್ರವೇ ಮಾಡಿ, ಕರಿದ ತಿಂಡಿ ಜಂಕ್ ಫುಡ್ ತಿನ್ನದಿರಿ.
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರವಿದ್ಯಾರ್ಥಿ ಜೀವನದ ಅತಿ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ. ಪ್ರತಿನಿಮಿಷವೂ ವ್ಯರ್ಥವಾಗದಂತೆ ಅಭ್ಯಾಸ ಮಾಡಿ. ಟಿವಿ, ಮೊಬೈಲ್ ಮರೆತುಬಿಡಿ ಎಂದು ಶ್ರೀನಿವಾಸಪುರ ಬಿಇಒ ಮುನಿಲಕ್ಷ್ಮಯ್ಯ ಕರೆ ನೀಡಿದರು.ತಾಲೂಕಿನ ಸೋಮಯಾಜನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದ ನಡೆಸಿ, ಮಾರ್ಗದರ್ಶನ ನೀಡಿ ಮಾತನಾಡಿದರು.ಪರೀಕ್ಷೆಗೆ ಸಿದ್ಧತೆ ಸರಿಯಾಗಿ ಮಾಡಿಕೊಳ್ಳಿ. ಸಮಯ ನಿಮ್ಮ ಪೋಷಕರು ನಿಮ್ಮ ಬಗ್ಗೆ ಇಟ್ಟಿರುವ ನಂಬಿಕೆ ಹುಸಿಯಾಗಿಸದಿರಿ, ಪರೀಕ್ಷೆ ಮುಗಿಯುವವರೆಗೂ, ಟಿವಿ, ಮೊಬೈಲ್ ದೂರವಿಡಿ, ಮನೆಯ ಊಟ ಮಾತ್ರವೇ ಮಾಡಿ, ಕರಿದ ತಿಂಡಿ ಜಂಕ್ ಫುಡ್ ತಿನ್ನದಿರಿ ಎಂದರು.ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಗುರಿ ನಿಮ್ಮದಾಗಿರಬೇಕು. ಸಾಧಕರಾಗಿ ಹೊರಹೊಮ್ಮಲು ಪಠ್ಯಪುಸ್ತಕ ಅಭ್ಯಾಸ ಮಾಡಿ, ಪ್ರತಿಕ್ಷಣವೂ ಮಹತ್ವದ್ದಾಗಿದ್ದು, ಅನ್ವಯಿಕ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಪ್ರಶ್ನೆಪತ್ರಿಕೆ ಹೇಗೇ ಇರಲಿ ನೀವು ಪರಿಶ್ರಮ ಹಾಕಿದರೆ ಮಾತ್ರವೇ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕೇಳಿ, ಜತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ, ಅನ್ವಯಿಕ ಪ್ರಶ್ನೆಗಳಿಗೆ ಉತ್ತರ ಬರೆಯಲು ಇದು ಹೆಚ್ಚು ಸಹಕಾರಿ ಎಂದು ತಿಳಿಸಿ, ಶೇ. 100 ಸಾಧನೆಗೆ ಪಠ್ಯಪುಸ್ತಕ ಓದು ಅತಿ ಅವಶ್ಯ ಎಂದರು.ಉತ್ತಮ ಬರವಣಿಗೆ ನಿಮ್ಮ ಸಾಧನೆಗೆ ಸ್ಪೂರ್ತಿಯಾಗಲಿದೆ. ವಿದ್ಯಾರ್ಥಿಗಳು ಬರವಣಿಗೆ ಉತ್ತಮಪಡಿಸಿಕೊಳ್ಳಲು ನಿರಂತರವಾಗಿ ಪಠ್ಯದಲ್ಲಿರುವುದನ್ನೇ ಬರೆದು ಅಭ್ಯಾಸ ಮಾಡಿ, ಬರವಣಿಗೆ ಉತ್ತಮವಾಗಿದ್ದರೆ ಮಾತ್ರ ಶೇ. 100 ಅಂಕ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಫಲಿತಾಂಶ ಉತ್ತಮಪಡಿಸುವುದರ ಜತೆಗೆ ಪ್ರತಿ ವಿದ್ಯಾರ್ಥಿಯೂ ಉತ್ತಮ ಸಾಧನೆ ಮಾಡಬೇಕು ಎಂಬ ಕಾತರ ಶಿಕ್ಷಕರಲ್ಲಿದೆ. ಅವರ ಆಶಯಗಳಿಗೆ ತಕ್ಕಂತೆ ನೀಡು ನಡೆದುಕೊಳ್ಳಬೇಕು, ಶಾಲೆಗೆ ಗೈರಾಗಬಾರದು, ಅಂದಿನ ಪಾಠ ಅಂದೇ ಓದಿ ಮುಗಿಸಿ ಎಂದು ಕಿವಿಮಾತು ಹೇಳಿದರು.ಶಿಕ್ಷಕರು ಕಲಿಕೆಯಲ್ಲಿ ಪ್ರಾಯೋಗಿಕ, ಕಲಿಕೋಪಕರಣ ಬಳಸಲು ಸೂಚಿಸಿದ ಅವರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆ ಹೆಚ್ಚಿನ ಗಮನ ನೀಡಿ, ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕೇಳಿ, ತರಗತಿ ಕೊಠಡಿಯಲ್ಲಿ ನಿಮ್ಮ ಎಲ್ಲಾ ಆಲೋಚನೆ ಬದಿಗಿಡಿ, ಕೇವಲ ಶಿಕ್ಷಕರ ಮಾತು ಮಾತ್ರ ನಿಮ್ಮ ಕಿವಿಗೆ ಬೀಳುತ್ತಿರಬೇಕು ಅಂತಹ ಏಕಾಗ್ರತೆ ಸಾಧಿಸಿ ಎಂದರು.ಗ್ರಾಮೀಣ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೀಳಿರಿಮೆ ತೊರೆದು ನಗರ ಪ್ರದೇಶದ ಮಕ್ಕಳಿಗಿಂತ ಉತ್ತಮ ಸಾಧನೆ ಮಾಡಿ ಎಂದು ಶುಭ ಹಾರೈಸಿದರು. ಉಪಪ್ರಾಂಶುಪಾಲ ಎಸ್.ಜೆ.ಸಲೀಂ, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ, ಶಿಕ್ಷಕರಾದ ಎಚ್.ಜಿ.ರವೀಂದ್ರ, ಅರುಣ್ ಕುಮಾರ್, ಬಿ.ವಿ.ರೆಡ್ಡೊಪ್ಪ, ಟಿ.ಎಲ್.ಶ್ರೀಕಾಂತ್, ತೇಜಮ್ಮ, ಬಿ.ಆರ್.ಸಂಧ್ಯಾ, ಶಂಕರಪ್ಪ, ಜಗದೀಶ್, ಚಂದು, ಮೋಹನ್‌ಬಾಬು ಇದ್ದರು.