ಸಾರಾಂಶ
ಭಟ್ಕಳ: ತಾಲೂಕಿನ ಹೆಬಳೆ ಗ್ರಾಪಂ ವ್ಯಾಪ್ತಿಯ ಕುಕ್‌ನೀರ್‌ನ ವೆಂಕಟಾಪುರ ನದಿಯ ದಂಡೆಯ ಮೇಲೆ ಗಬ್ಬದ ಹಸುವನ್ನು ಕಡಿದು ಮಾಂಸ ಮಾಡಿ, ಗೋವಿನ ಹೊಟ್ಟೆಯೊಳಗಿದ್ದ ಕರುವನ್ನು ಚೀಲದಲ್ಲಿ ಸುತ್ತಿ ಬಿಸಾಡಿದ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಆರೋಪಿಗಳ ಪತ್ತೆಗೆ ಹೆಚ್ಚುವರಿ ಎಸ್.ಪಿ. ನೇತೃತ್ವದಲ್ಲಿ ತಂಡ ರಚಿಸಿದೆ.
ಗುರುವಾರ ಗೋವಿನ ಕರುವಿನ ಕಳೇಬರ ಪತ್ತೆಯಾದ ಬೆನ್ನಲ್ಲೇ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕನ ಮಾಡಿದರು. ತಕ್ಷಣ ಕರುವಿನ ಕಳೇಬರವನ್ನು ಹೂಳುವಲ್ಲಿ ಕ್ರಮ ಕೈಗೊಂಡಿದ್ದಲ್ಲದೇ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ಎಂ.ನಾರಾಯಣ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಗೋವು ಹಂತಕರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಯಾರೇ ಕೃತ್ಯ ಮಾಡಿದ್ದರೂ ಕೂಡ ಅವರನ್ನು ಪತ್ತೆ ಹಚ್ಚಿ, ಬಂಧಿಸಿ ಕಾನೂನು ಕುಣಿಕೆಯೊಳಗೆ ತರುವಲ್ಲಿ ಇಲಾಖೆಗೆ ಮಾರ್ಗದರ್ಶನ ನೀಡಿದ್ದಾರೆ. ಈ ಬಗ್ಗೆ ತಕ್ಷಣ ಜಿಲ್ಲಾ ಹೆಚ್ಚುವರಿ ಪೊಲಿಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಮಾರ್ಗದರ್ಶನದಲ್ಲಿ ಭಟ್ಕಳ ಡಿವೈಎಸ್ಪಿ ಮಹೇಶ ಕೆ. ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ್ದು ತಂಡವು ಶುಕ್ರವಾರದಿಂದಲೇ ಕಾರ್ಯಾಚರಣೆ ಕೈಗೊಂಡಿದೆ. ಶೀಘ್ರ ಗೋ ಹಂತಕರನ್ನು ಬಂಧಿಸುವ ವಿಶ್ವಾಸ ಹೊಂದಿದೆ.
ಕಠಿಣ ಕ್ರಮಕ್ಕೆ ಆಗ್ರಹ:ಪದೇಪದೇ ಗೋವುಗಳನ್ನು ಹತ್ಯೆ ಮಾಡುವುದಲ್ಲದೇ ಸಾರ್ವಜನಿಕ ಪ್ರದೇಶದಲ್ಲಿ ಹಾಕಿ ವಿಕೃತಿಯನ್ನು ಮೆರೆಯುತ್ತಿರುವ ಇಂತಹ ಗೋ ಹಂತಕರು, ಗೋ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಂತವರ ಮೇಲೆ ಗೂಂಡಾ ಕಾನೂನು ಜಾರಿ ಮಾಡಿ ಮುಂದೆ ಇಂತಹ ಕುಕೃತ್ಯಗಳನ್ನು ಎಸಗದಂತೆ ಮಾಡಬೇಕು ಎನ್ನುವ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ. ಪೊಲೀಸ್ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗುವುದೇ ಎಂದು ಕಾದು ನೋಡಬೇಕಾಗಿದೆ.
ಗೋ ಹತ್ಯೆ ಖಂಡಿಸಿ ಇಂದು ಪ್ರತಿಭಟನೆ:ಗಬ್ಬದ ಹಸು ಹತ್ಯೆ ನಡೆಯುತ್ತಿರುವುದನ್ನು ಖಂಡಿಸಿ ಹಿಂದೂ ಸಮಾಜ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಏ.೧೯ರಂದು ೧೧ ಗಂಟೆಗೆ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ.
ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್‌ನೀರ್‌ನಲ್ಲಿ ವೆಂಕಟಾಪುರ ನದಿಯ ದಂಡೆಯ ಮೇಲೆ ತುಂಬು ಗರ್ಭಿಣಿ ಹಸುವನ್ನು ಕಡಿದು ಮಾಂಸ ಮಾಡಿ ಉಳಿದ ಭಾಗಗಳನ್ನು ಅಲ್ಲಿಯೇ ಎಸೆದಿರುವ ಹಾಗೂ ಗೋವಿನ ಹೊಟ್ಟೆಯೊಳಗಿದ್ದ ಕರುವನ್ನು ಚೀಲದಲ್ಲಿ ಸುತ್ತಿ ಬಿಸಾಡಿರುವುದು ಹೇಯ ಕೃತ್ಯವಾಗಿದೆ. ಇತ್ತೀಚೆಗಷ್ಟೇ ಹೊನ್ನಾವರದಲ್ಲಿ ನಡೆದ ಘಟನೆ ಮಾಸುವ ಮುನ್ನವೇ ಭಟ್ಕಳದಲ್ಲಿ ಇಂತಹ ಕೃತ್ಯ ಎಸಗಿ ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸಲು ಪಣತೊಟ್ಟಂತೆ ಕಾಣುವ ಇಂತಹ ಕೃತ್ಯ ತೀರಾ ಖಂಡನೀಯ ಹಾಗೂ ವಿಷಾದನೀಯವಾಗಿದೆ. ಯಾರದ್ದೋ ಬಾಯಿ ಚಪಲಕ್ಕೆ ನಮ್ಮ ಗೋಮಾತೆಯನ್ನು ಬಲಿ ಕೊಡುತ್ತಿರುವುದನ್ನು ನಾವು ಒಗ್ಗಟ್ಟಾಗಿ ಖಂಡಿಸಲೇ ಬೇಕಾಗಿದೆ ಎಂದು ಪ್ರಕಟಣೆ ತಿಳಿಸಿದೆ.