5 ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾ ದಾಳಿ

| Published : Jul 30 2025, 12:45 AM IST

ಸಾರಾಂಶ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ಐದು ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಪತ್ತೆ ಹಚ್ಚಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ಐದು ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಪತ್ತೆ ಹಚ್ಚಿದ್ದಾರೆ.

ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ 5 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳು ಸೇರಿ 25 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ಫಾರ್ಮ್‌ ಹೌಸ್, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 24.44 ಕೋಟಿ ರು. ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚ್ಚಿದ್ದಾರೆ.

ದಾಳಿಗೊಳಗಾದ 5 ಮಂದಿ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್‌ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ?

1. ಎನ್.ವೆಂಕಟೇಶ್‌, ಬಿಬಿಎಂಪಿ ಶೆಟ್ಟಿಹಳ್ಳಿ ಉಪವಿಭಾಗದ ತೆರಿಗೆ ಮೌಲ್ಯಮಾಪಕ: 4 ಕಡೆ ದಾಳಿ, 2 ಸೈಟ್‌, 3 ಮನೆ, 1 ಫಾರ್ಮ್‌ ಹೌಸ್‌, 6.17 ಎಕರೆ ಜಮೀನು, 2.80 ಲಕ್ಷ ರು. ನಗದು, 10.85 ಲಕ್ಷ ರು.ನ ಚಿನ್ನ, 3.85 ಲಕ್ಷ ರು.ನ ವಾಹನಗಳು, 15 ಲಕ್ಷ ರು. ಮೌಲ್ಯದ ಇತರೆ ವಸ್ತು ಗಳು ಸೇರಿ ಒಟ್ಟು 2.57 ಕೋಟಿ ರು. ಆಸ್ತಿ ಪತ್ತೆ.

2. ಕೆ.ಓಂ ಪ್ರಕಾಶ್‌, ಬಿಡಿಎ ಕೇಂದ್ರ ಕಚೇರಿಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ: 5 ಕಡೆ ದಾಳಿ, 2 ಸೈಟ್‌, 2 ಮನೆ, 5 ಲಕ್ಷ ರು. ನಗದು, 60.96 ಲಕ್ಷ ರು. ಮೌಲ್ಯದ ಚಿನ್ನ, 34 ಲಕ್ಷ ರು. ಮೌಲ್ಯದ ವಾಹನಗಳು, 48 ಲಕ್ಷ ರು. ಬ್ಯಾಂಕ್‌ ಠೇವಣಿ ಸೇರಿ ಒಟ್ಟು 6.26. ಕೋಟಿ ರು. ಆಸ್ತಿ ಪತ್ತೆ.

3. ಆರ್‌.ಜಯಣ್ಣ, ಎನ್‌ಎಚ್‌ಎಐ ಹಾಸನ ವಿಭಾಗದ ಕಾರ್ಯಪಾಲಕ ಅಭಿಯಂತರ: 5 ಕಡೆ ದಾಳಿ, 17 ಸೈಟ್‌, 8 ಮನೆ, 1.36 ಎಕರೆ ಕೃಷಿ ಜಮೀನು 1.36 ಲಕ್ಷ ರು. ನಗದು, 18.99 ಲಕ್ಷ ರು. ಮೌಲ್ಯದ ಚಿನ್ನಾಭರಣ, 26 ಲಕ್ಷ ರು. ಮೌಲ್ಯದ ವಾಹನಗಳು, 23 ಲಕ್ಷ ರು. ಠೇವಣಿ ಸೇರಿ ಒಟ್ಟು 6.28 ಕೋಟಿ ರು. ಆಸ್ತಿ ಪತ್ತೆ.

4. ಎಂ.ಆಂಜನೇಯಮೂರ್ತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಿರಿಯ ಅಭಿಯಂತರ: 8 ಕಡೆ ದಾಳಿ, 5 ಸೈಟ್‌, 1 ಮನೆ, 1 ವಾಣಿಜ್ಯ ಸಂಕೀರ್ಣ, 50 ಲಕ್ಷ ರು. ಮೌಲ್ಯದ ಚಿನ್ನಾಭರಣ, 15.65 ಲಕ್ಷ ರು. ಮೌಲ್ಯದ ವಾಹನಗಳು, 28 ಲಕ್ಷ ರು. ಮೌಲ್ಯದ ಇತರೆ ವಸ್ತುಗಳು ಸೇರಿ ಒಟ್ಟು 5.77 ಕೋಟಿ ರು. ಆಸ್ತಿ ಪತ್ತೆ.

5. ಡಾ.ವೆಂಕಟೇಶ್‌, ಹಿರಿಯೂರು ತಾಲೂಕು ಆರೋಗ್ಯ ಅಧಿಕಾರಿ: 3 ಕಡೆ ದಾಳಿ, 5 ಸೈಟ್‌, 2 ಮನೆ, 3.5 ಎಕರೆ ಕೃಷಿ ಜಮೀನು, 54 ಸಾವಿರ ರು. ನಗದು, 17.25 ಲಕ್ಷ ರು. ಮೌಲ್ಯದ ಚಿನ್ನಾಭರಣ, 21.40 ಲಕ್ಷ ರು. ಮೌಲ್ಯದ ವಾಹನಗಳು, 28.30 ಲಕ್ಷ ರು. ಮೌಲ್ಯದ ಗೃಹೋಪಯೋಗಿ ವಸ್ತಗಳು ಸೇರಿ ಒಟ್ಟು 3.54 ಕೋಟಿ ರು. ಆಸ್ತಿ ಪತ್ತೆ.

-ಬಾಕ್ಸ್‌-ಐವರು ಅಧಿಕಾರಿಗಳ ಬಳಿ ಪತ್ತೆಯಾದ ಒಟ್ಟು ಆಸ್ತಿ ಮೌಲ್ಯ:ನಿವೇಶನ, ಮನೆ, ಕೃಷಿ ಭೂಮಿ- 20.33 ಕೋಟಿ ರು.ನಗದು- 9.70 ಲಕ್ಷ ರು.ಚಿನ್ನಾಭರಣ- 1.58 ಕೋಟಿ ರು.ವಾಹನಗಳು- 1.10 ಕೋಟಿ ರು.ಠೇವಣಿ, ಗೃಹೋಪಯೋಗಿ ವಸ್ತುಗಳು ಸೇರಿ ಇತರೆ- 1.42 ಕೋಟಿ ರು.-----ಬಾಕ್ಸ್‌-ಹಾರ್ಟ್‌ ಸಮಸ್ಯೆ ಸಾರ್ !ಲೋಕಾಯುಕ್ತ ದಾಳಿ ವೇಳೆ ಬಿಬಿಎಂಪಿ ಶೆಟ್ಟಿಹಳ್ಳಿ ಉಪವಿಭಾಗದ ತೆರಿಗೆ ಮೌಲ್ಯಮಾಪಕ ಎನ್‌.ವೆಂಕಟೇಶ್‌ ಬಳಿ ಸ್ಥಿರ ಮತ್ತು ಚರಾಸ್ತಿ ಸೇರಿ ಒಟ್ಟು 2.57 ಕೋಟಿ ರು. ಆಸ್ತಿ ಪತ್ತೆಯಾಗಿದೆ. ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ತಲಘಟ್ಟಪುರ ನಿವಾಸದ ಮೇಲೆ ದಾಳಿ ಮಾಡಿದಾಗ ವೆಂಕಟೇಶ್‌ ಮನೆಯಲ್ಲೇ ಇದ್ದರು. ಈ ವೇಳೆ ದಾಖಲೆ ಮುಂದಿಟ್ಟು ವಿಚಾರಣೆ ಮಾಡಿದಾಗ, ನನಗೆ ಹೃದಯ ಸಮಸ್ಯೆ ಇದ್ದು, ಆಪರೇಷನ್‌ ಆಗಿದೆ. ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಖರ್ಚಿಗಾಗಿ ಒಂದು ಲಕ್ಷ ರು. ನಗದು ಮನೆಯಲ್ಲಿ ಇರಿಸಿರುವುದಾಗಿ ಹೇಳಿದರು ಎಂದು ತಿಳಿದು ಬಂದಿದೆ.